ಮದ್ದೂರು ಪಟ್ಟಣದ ಪುರಾಣ ಪ್ರಸಿದ್ಧ ಶ್ರೀಹೊಳೆ ಆಂಜನೇಯ ಸ್ವಾಮಿ ದೇವಾಲಯ ಸೇರಿದಂತೆ ವಿವಿಧ ಹನುಮ ದೇವಾಲಯಗಳಲ್ಲಿ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಅಸಂಖ್ಯಾತ ಭಕ್ತಾದಿಗಳು ದೇವಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆದು ಧನ್ಯತಾ ಭಾವ ಮೆರೆದರು.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ಪುರಾಣ ಪ್ರಸಿದ್ಧ ಶ್ರೀಹೊಳೆ ಆಂಜನೇಯ ಸ್ವಾಮಿ ದೇವಾಲಯ ಸೇರಿದಂತೆ ವಿವಿಧ ಹನುಮ ದೇವಾಲಯಗಳಲ್ಲಿ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಅಸಂಖ್ಯಾತ ಭಕ್ತಾದಿಗಳು ದೇವಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆದು ಧನ್ಯತಾ ಭಾವ ಮೆರೆದರು. ಕದಂಬ ನದಿ ತೀರದ ಶ್ರೀ ಹೊಳೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಅಂಗವಾಗಿ ಮುಂಜಾನೆ ಮಧು ಅಭಿಷೇಕ, ಪಂಚಾಮೃತ ಅಭಿಷೇಕ ದೊಂದಿಗೆ ಮೂಲ ವಿಗ್ರಹಕ್ಕೆ ಪುಷ್ಪಾಲಂಕಾರದೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಬೆಳಗ್ಗೆ 11 ಗಂಟೆ ಸುಮಾರಿಗೆ ಹನುಮ ಜಯಂತಿ ಅಂಗವಾಗಿ ಪುಷ್ಪಾಲಕೃತ ಶ್ರೀರಾಮ, ಸೀತಾ, ಲಕ್ಷ್ಮಣ ಸಮೇತ ಹನುಮ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಿ ಮಂಗಳವಾದ್ಯ ಸಮೇತ ದೇಗುಲದ ಪ್ರಾಂಗಣದಲ್ಲಿ ರಥೋತ್ಸವ ನಡೆಸಲಾಯಿತು. ಸ್ಥಳೀಯರು ಸೇರಿದಂತೆ ಬೆಂಗಳೂರು, ಮೈಸೂರು ಸೇರಿದಂತೆ ನೆರೆ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತಾದಿಗಳು ದೇವರ ದರ್ಶನದೊಂದಿಗೆ ಮಹಾಮಂಗಳಾರತಿ ತೀರ್ಥ ಪ್ರಸಾದ ಸ್ವೀಕರಿಸಿದರು. ದೇಗುಲಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ನಡೆಯಿತು.

ಜೀ ಕನ್ನಡ ವಾಹಿನಿಯ ಖ್ಯಾತ ಗಾಯಕಿ ಸುನೀತಾ ಆಚಾರ್ಯ, ತಹಸೀಲ್ದಾರ್ ಪರಶುರಾಮ ಸತ್ತಿಗೇರಿ, ವೃತ ನಿರೀಕ್ಷಕ ನವೀನ್, ಶಿರಸ್ತೇದಾರ್ ಲಕ್ಷ್ಮಿ ನರಸಿಂಹ ಹಾಗೂ ಮುಜರಾಯಿ ಇಲಾಖೆಯ ಸಿಬ್ಬಂದಿ ರಥೋತ್ಸವ ಮತ್ತು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಹನುಮ ಜಯಂತಿ ಅಂಗವಾಗಿ ಹಳೇ ಎಂ.ಸಿ.ರಸ್ತೆಯ ಶ್ರೀ ಆಂಜನೇಯ ಸ್ವಾಮಿ, ಪುರಸಭೆ ಉದ್ಯಾನವನದ ಶ್ರೀರಾಮ ಮಂದಿರ, ನಿಡಘಟ್ಟದ ಅಭಯ ಆಂಜನೇಯ ಸ್ವಾಮಿ, ತೊಪ್ಪನಹಳ್ಳಿಯ ಮುತ್ತುರಾಯಸ್ವಾಮಿ ದೇವಾಲಯಗಳು ಸೇರಿದಂತೆ ವಿವಿಧ ಹನುಮ ದೇವಾಲಯಗಳಲ್ಲಿ ಹನುಮ ಜಯಂತಿಯನ್ನು ವಿಶೇಷ ಪೂಜಾ ಕಾರ್ಯಗಳೊಂದಿಗೆ ಶ್ರದ್ಧ ಭಕ್ತಿಯಿಂದ ಆಚರಿಸಲಾಯಿತು.