ಸಾರಾಂಶ
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜ್ಞಾನ ಭಾರತ್ ವೃಂದ - ಬಾಲಸಂಸ್ಕಾರದ ವತಿಯಿಂದ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ಕೃಷ್ಣ ಲೀಲೋತ್ಸವ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಕಾರ್ಕಳ
ಬದುಕಿಗೆ ಧೈರ್ಯ ತುಂಬುವ ಏಕೈಕ ಗ್ರಂಥ ಭಗವದ್ಗೀತೆ. ನಮ್ಮ ಪಾತ್ರದಲ್ಲಿ ಅರ್ಜುನನಿದ್ದರೆ, ಸಾರಥಿಯ ಪಾತ್ರದಲ್ಲಿ ಕೃಷ್ಣ ಮಾರ್ಗದರ್ಶಕನಾಗಿದ್ದಾನೆ. ಇಂದಿನ ಎಲ್ಲ ರೀತಿಯ ಒತ್ತಡ, ಘರ್ಷಣೆಗಳಿಗೆ ಭಗವದ್ಗೀತೆಯಲ್ಲಿ ಉತ್ತರ ಅಡಗಿದೆ ಎಂದು ಶ್ರೀ ಉತ್ತಮ ನರಸಿಂಹ ದಾಸ್ (ಉಮೇಶ್ ಕಾಮತ್) ಹೇಳಿದರು.ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜ್ಞಾನ ಭಾರತ್ ವೃಂದ - ಬಾಲಸಂಸ್ಕಾರದ ವತಿಯಿಂದ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ ಶ್ರೀ ಕೃಷ್ಣ ಲೀಲೋತ್ಸವ ಕಾರ್ಯಕ್ರಮದಲ್ಲಿ ಭಗವದ್ಗೀತೆಯ ಕುರಿತಂತೆ ಉಪನ್ಯಾಸ ನೀಡಿದರು.
ಎಲ್ಲಿ ಭಗವಂತನ ಗುಣಗಾನ ನಡೆಯುತ್ತದೋ, ಅಲ್ಲಿ ಭಗವಂತ ಇರುತ್ತಾನೆ. ಶ್ರದ್ಧಾ ಭಕ್ತಿಯಿಂದ ಕೆಲಸದಲ್ಲಿ ತಲ್ಲೀನನಾದವನಿಗೆ ತನ್ನ ಕಾರ್ಯದಲ್ಲಿ ಯಶಸ್ಸು ಲಭಿಸುವಂತೆ ಮಾಡುತ್ತಾನೆ ಎಂದರು.ಬಾಲ ಸಂಸ್ಕಾರದ ಬಾಲಕ-ಬಾಲಕಿಯರು ಶ್ರೀ ಕಷ್ಣನ ಬಾಲಲೀಲೆಯನ್ನು ಸಾರುವ ಶ್ರೀ ಮದ್ ಭಾಗವತದಿಂದ ಆಯ್ದ ‘ಶ್ರೀ ಕೃಷ್ಣ ಲೀಲೋತ್ಸವ’ ರೂಪಕವನ್ನು ಪ್ರಸ್ತುತ ಪಡಿಸಿದರು.ಇದೇ ಸಂದರ್ಭ ಜ್ಞಾನಭಾರತ್ ವೃಂದದ ಗೌರವಾಧ್ಯಕ್ಷ, ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ, ವೃಂದದ ಅಧ್ಯಕ್ಷ ದಿನೇಶ್ ಎಂ. ಕೊಡವೂರ್, ಉಷಾ ರಾವ್ ಯು., ಸಂಚಾಲಕ ಸುಮಿತ್, ರಾಜ್ ಕಿರಣ್, ರಶ್ಮೀ ಭಟ್, ಪ್ರಜ್ವಲಾ ಶೆಣೈ, ಪ್ರತಿಮಾ ಭೋರ್ಕರ್, ಅಕ್ಷತಾ ನಾಯಕ್, ಕಮಲಾಕ್ಷ ನಾಯಕ್ ಉಪಸ್ಥಿತರಿದ್ದರು.ಕಾರ್ಯದರ್ಶಿ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.