ನಾಗರಿಕತೆಯ ಬೆಳವಣಿಗೆ, ಸಂಸ್ಕೃತಿ, ಪರಂಪರೆ, ಪುರಾತನ ಕಾಲದ ಆಯುಧ, ನಾಣ್ಯ, ಶಿಲ್ಪ, ಶಾಸನ, ಚಿತ್ರಗಳು,

ಬಳ್ಳಾರಿ: ಚರಿತ್ರೆಯನ್ನು ಅರಿಯಲು ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ವಸ್ತು ಸಂಗ್ರಹಾಲಯಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ ಎಂದು ಗಾಂಧಿಭವನ, ಮಲ್ಲಸಜ್ಜನ ವ್ಯಾಯಾಮ ಶಾಲೆಯ ಕಾರ್ಯದರ್ಶಿ ಟಿ.ಜಿ.ವಿಠಲ್ ಅಭಿಪ್ರಾಯಪಟ್ಟರು.

ನಗರದ ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದಲ್ಲಿ ಜರುಗಿದ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾಗರಿಕತೆಯ ಬೆಳವಣಿಗೆ, ಸಂಸ್ಕೃತಿ, ಪರಂಪರೆ, ಪುರಾತನ ಕಾಲದ ಆಯುಧ, ನಾಣ್ಯ, ಶಿಲ್ಪ, ಶಾಸನ, ಚಿತ್ರಗಳು, ರಾಜವಂಶ ಬಳಕೆಯ ವಸ್ತುಗಳು ಹಾಗೂ ಐತಿಹಾಸಿಕ ದಾಖಲೆಗಳನ್ನು ಸಂರಕ್ಷಿಸುವ ಮೂಲಕ ವಸ್ತು ಸಂಗ್ರಹಾಲಯಗಳು ಚರಿತ್ರೆಯನ್ನು ಜೀವಂತವಾಗಿರಿಸುತ್ತಿವೆ. ಹೀಗಾಗಿ ಚರಿತ್ರೆಯನ್ನು ಸಮಗ್ರವಾಗಿ ಅರಿಯಲು ವಸ್ತು ಸಂಗ್ರಹಾಲಯಗಳು ಹೆಚ್ಚು ಸಹಕಾರಿಯಾಗಿವೆ. ಇತ್ತೀಚೆಗೆ ವಿದ್ಯಾರ್ಥಿಗಳು ಪುಸ್ತಕಗಳಿಗಿಂತ ನೈಜ ವಸ್ತುಗಳನ್ನು ನೋಡಿ ಕಲಿಯುವ ವಿಧಾನಕ್ಕೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಸ್ತು ಸಂಗ್ರಹಾಲಯಗಳು ಶಿಕ್ಷಣದ ಪ್ರಮುಖ ಕೇಂದ್ರಗಳಾಗಿ ರೂಪುಗೊಳ್ಳುತ್ತಿವೆ ಎಂದು ತಿಳಿಸಿದರು.

ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ಮಹಾಬಳೇಶ್ವರಪ್ಪ ಮಾತನಾಡಿ, ವಸ್ತು ಸಂಗ್ರಹಾಲಯಗಳ ಮೂಲಕ ಸಾವಿರಾರು ವರ್ಷಗಳ ಹಿಂದಿನ ಮಾನವನ ಜನಜೀವನ, ಆಹಾರ ಪದ್ಧತಿ ಬಗ್ಗೆ ವಿವರವಾದ ಮಾಹಿತಿ ಪಡೆಯಬಹುದು. ನಮ್ಮ ಭಾಗದ ಊರುಗಳ ಹೆಸರುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಅವು ಅಂದು ಬೆಳೆದ ದವಸ-ಧಾನ್ಯಗಳು ಹಾಗೂ ಸಗಣಿ ಸುಟ್ಟ ಬೂದಿಯ ದಿಬ್ಬಗಳು ಕುರಿತು ಸಮಗ್ರ ಮಾಹಿತಿ ದಕ್ಕುತ್ತದೆ ಎಂದು ತಿಳಿಸಿದರು.

ಯುವಕರು ಮತ್ತು ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ತಮ್ಮ ಊರುಗಳ ಸುತ್ತಮುತ್ತ ಚಾರಣ ಕೈಗೊಂಡರೆ ಇತಿಹಾಸದ ಹೊಸ ಕುರುಹುಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ ಎಂದು ರುಕ್ಮಣಮ್ಮ ಚೆಂಗರೆಡ್ಡಿ ಸ್ಮಾರಕ ಸರ್ಕಾರಿ ವಾಣಿಜ್ಯ ಕಾಲೇಜಿನ ಉಪನ್ಯಾಸಕ ಒಬ್ಬಯ್ಯ ಅಭಿಪ್ರಾಯಪಟ್ಟರು.

ವಸ್ತು ಸಂಗ್ರಹಾಲಯದ ತಾಂತ್ರಿಕ ಸಹಾಯಕಿ ಗೌರಿ ಮಾತನಾಡಿ, ಬಳ್ಳಾರಿಯಲ್ಲಿರುವ ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯವು ಇಡೀ ಭಾರತದಲ್ಲೇ ಪ್ರಾಗೈತಿಹಾಸಿಕ ಕಾಲಕ್ಕೆ ಮೀಸಲಿಟ್ಟ ಏಕೈಕ ವಿಶಿಷ್ಟ ವಸ್ತು ಸಂಗ್ರಹಾಲಯವಾಗಿದೆ. ಇದು ಇತಿಹಾಸದ ಕುರಿತು ಹೆಚ್ಚಿನ ಸಂಶೋಧನೆ ಹಾಗೂ ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ತಿಳಿಸಿದರು.

ಇದೇ ವೇಳೆ ಕಲ್ಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿಯರಾದ ರೋಹಿಣಿ ಮತ್ತು ಅಶ್ವಿನಿ ಉನ್ನತ ಸಂಶೋಧನೆಗಳಲ್ಲಿ ವಸ್ತು ಸಂಗ್ರಹಾಲಯಗಳ ಪಾತ್ರದ ಕುರಿತು ಬೆಳಕು ಚೆಲ್ಲಿದರು.

ವಸ್ತು ಸಂಗ್ರಹಾಲಯ ಸಲಹಾ ಸಮಿತಿ ಸದಸ್ಯ ಎಂ.ಅಹಿರಾಜ ಪ್ರಾಸ್ತಾವಿಕ ಮಾತನಾಡಿದರು. ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರುಕ್ಮಣಮ್ಮ ಚೆಂಗರೆಡ್ಡಿ ಸ್ಮಾರಕ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.