ಧರ್ಮಸ್ಥಳ, ವೀರೇಂದ್ರ ಹೆಗ್ಗಡೆ ಮೇಲಿನ ಅವಹೇಳನಕ್ಕೆ ಚಾರುಶ್ರೀ ಖಂಡನೆ

| Published : Aug 15 2025, 01:00 AM IST

ಧರ್ಮಸ್ಥಳ, ವೀರೇಂದ್ರ ಹೆಗ್ಗಡೆ ಮೇಲಿನ ಅವಹೇಳನಕ್ಕೆ ಚಾರುಶ್ರೀ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಇದು ಕೇವಲ ಹೆಗ್ಗಡೆಯವರ ಮೇಲೆ ಆಗುತ್ತಿರುವ ಅವಮಾನವಲ್ಲ, ನಮ್ಮ ಸಂಸ್ಕೃತಿ, ನಮ್ಮ ಧರ್ಮ, ನಮ್ಮ ಸೇವಾ ಪರಂಪರೆಯ ಮೇಲಿನ ಅವಮಾನವಾಗಿದೆ ಎಂದು ಎಲ್ಲಾ ಧರ್ಮಾಭಿಮಾನಿಗಳು ಅರಿಯಬೇಕಿದೆ ಎಂದು ಶ್ರೀಗಳು ಎಚ್ಚರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರವಣಬೆಳಗೊಳ

ವಿಶ್ವಾದ್ಯಂತ ಅಪಾರ ಭಕ್ತ ವೃಂದ ಹೊಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಶ್ರೀ ವೀರೇಂದ್ರ ಹೆಗ್ಗಡೆ ಅವರ ಮೇಲಿನ ಅವಹೇಳನಕಾರಿ ಹೇಳಿಕೆಗಳನ್ನು ಸ್ಥಳೀಯ ದಿಗಂಬರ ಜೈನ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅವರು ಬಲವಾಗಿ ಖಂಡಿಸಿದ್ದಾರೆ.

ಇದೇ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಶ್ರೀ ವೀರೇಂದ್ರ ಹೆಗ್ಗಡೆ ಅವರಿಗೆ ಜೈನಮಠದ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.

ಧರ್ಮಸ್ಥಳ ಹೆಸರು ಕೇಳಿದಾಗಲೇ ನಮ್ಮ ಹೃದಯದಲ್ಲಿ ಧರ್ಮದ ಪರಿಮಳ, ದಾನದ ಪಾವಿತ್ರ್ಯ, ಸೇವೆಯ ಮಧುರ ಸ್ಮೃತಿಗಳು ಮೂಡುತ್ತವೆ. ಶತಮಾನಗಳಿಂದ ಎಲ್ಲರಿಗೂ ಮಾರ್ಗದರ್ಶಕವಾಗಿ. ನಿಜವಾದ ಮಾನವೀಯತೆಯ ತಾಣವಾಗಿ ಬೆಳಗಿ, ಜಾತಿ- ಧರ್ಮ- ಮತಗಳ ಭೇದವಿಲ್ಲದೆ ಚತುರ್ವಿಧ ದಾನ, ಸೇವಾ ಪರಂಪರೆ ನಡೆಸಿಕೊಂಡು ಬಂದಿದೆ. ಎಲ್ಲಾ ವರ್ಗದ ಜನರಿಗೆ ಶ್ರದ್ಧಾ ಕೇಂದ್ರವಾಗಿದೆ. ಧರ್ಮಸ್ಥಳದಿಂದ ನಡೆಯುತ್ತಿರುವ ಮಹಿಳಾ ಸಬಲೀಕರಣ ಮತ್ತು ಧಾರ್ಮಿಕ ಸಹಿಷ್ಣುತೆಯು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಗುಣಗಾನ ಮಾಡಿದ್ದಾರೆ.

ಇಂತಹ ಪವಿತ್ರ ಕ್ಷೇತ್ರ ಹಾಗೂ ಪವಿತ್ರ ವ್ಯಕ್ತಿತ್ವದ ವಿರುದ್ಧ ತಪ್ಪು ಮತ್ತು ಅವಹೇಳನಕಾರಿ ಹೇಳಿಕೆಗಳು ಪ್ರಸಾರವಾಗುತ್ತಿರುವುದು ಅತ್ಯಂತ ಖೇಧಕರ ಮತ್ತು ಧರ್ಮ- ಸಂಸ್ಕೃತಿಗೆ ಅವಮಾನಕಾರಿಯಾಗಿದೆ. ಇಂತಹ ಹೇಳಿಕೆಗಳು ಸಮಾಜದಲ್ಲಿ ಭಿನ್ನಾಭಿಪ್ರಾಯ, ದ್ವೇಷ, ಅಸಮಾಧಾನ ಹುಟ್ಟಿಸುತ್ತವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದು ಕೇವಲ ಹೆಗ್ಗಡೆಯವರ ಮೇಲೆ ಆಗುತ್ತಿರುವ ಅವಮಾನವಲ್ಲ, ನಮ್ಮ ಸಂಸ್ಕೃತಿ, ನಮ್ಮ ಧರ್ಮ, ನಮ್ಮ ಸೇವಾ ಪರಂಪರೆಯ ಮೇಲಿನ ಅವಮಾನವಾಗಿದೆ ಎಂದು ಎಲ್ಲಾ ಧರ್ಮಾಭಿಮಾನಿಗಳು ಅರಿಯಬೇಕಿದೆ ಎಂದು ಶ್ರೀಗಳು ಎಚ್ಚರಿಸಿದ್ದಾರೆ.

ಶ್ರೀಕ್ಷೇತ್ರ ಶ್ರವಣಬೆಳಗೊಳ ಜೈನ ಮಠವು, ಧರ್ಮಸ್ಥಳ ಕ್ಷೇತ್ರದ ಶ್ರೀ ವೀರೇಂದ್ರ ಹೆಗ್ಗಡೆ ಅವರ ಮೇಲೆ ಸಂಪೂರ್ಣ ನಂಬಿಕೆ ಹೊಂದಿ ಇಂತಹ ಅನವಶ್ಯಕ, ಅಸತ್ಯ ಹಾಗೂ ಅಸಂಗತ ಆರೋಪಗಳನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಸ್ವಾಮೀಜಿ ನುಡಿದಿದ್ದಾರೆ. ಸಮಾಜದಲ್ಲಿ ಅಸತ್ಯ ಪ್ರಚಾರ, ತಪ್ಪು ಮಾಹಿತಿ ಹಂಚಿಕೆ ಮತ್ತು ಅವಹೇಳನಕಾರಿ ನಡವಳಿಕೆಗಳನ್ನು ತಡೆಯಲು ಎಲ್ಲಾ ಧರ್ಮಗಳ ಗುರುಗಳು, ಧರ್ಮಾಭಿಮಾನಿಗಳು ಧರ್ಮದ ಪರ ಕಂಕಣಬದ್ಧರಾಗಿ ನಿಲ್ಲುವಂತೆ ಅಪೇಕ್ಷಿಸುತ್ತೇವೆ. ನಮ್ಮ ಬೆಂಬಲ, ನಮ್ಮ ಆಶೀರ್ವಾದ, ನಮ್ಮ ಪ್ರಾರ್ಥನೆಗಳು ಸದಾ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆ ಅವರೊಂದಿಗೆ ಇರುತ್ತವೆ ಎಂದು ತಿಳಿಸಿದ್ದಾರೆ.

ಸಮಾಜದ ಎಲ್ಲ ವರ್ಗದವರು ಪರಸ್ಪರ ಗೌರವದಿಂದ, ಸತ್ಯಾಸತ್ಯತೆ ಪರಿಶೀಲಿಸಿ,

ಸೌಹಾರ್ದತೆ ಉಳಿಸಿಕೊಂಡು ನಡೆದುಕೊಳ್ಳಬೇಕು. ಧರ್ಮಸ್ಥಳ ಕ್ಷೇತ್ರದ ಮೇಲೆ ಹಾಗೂ ಶ್ರೀ ಡಾ. ವೀರೇಂದ್ರ ಹೆಗ್ಗಡೆ ಅವರೊಂದಿಗೆ ನಮ್ಮ ಬೆಂಬಲ ಸದಾಕಾಲ ಅಚಲವಾಗಿರುತ್ತದೆ ಎಂದು ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.