ಸಾರಾಂಶ
ಕನ್ನಡಪ್ರಭವಾರ್ತೆ ಪುತ್ತೂರು
ಶತಮಾನ ಪೂರೈಸಿರುವ ಕಡಬ ತಾಲೂಕಿನ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಾಣಿಯೂರು ಇದರ ನೂತನ ಕಟ್ಟಡದ ಉದ್ಘಾಟನೆ, ಶತಮಾನೋತ್ಸವ ಕಾರ್ಯಕ್ರಮ ಹಾಗೂ ಕೃಷಿ ಮೇಳ ೧೧, ೧೨ ಹಾಗೂ ೧೩ ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಗಣೇಶ್ ಕೆ.ಎಸ್. ಉದನಡ್ಕ ತಿಳಿಸಿದ್ದಾರೆ.ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜ.೧೧ ಶನಿವಾರ ಕಾಣಿಯೂರು ರಾಮತೀರ್ಥಮಠ ಜಾತ್ರಾ ಮೈದಾನದಲ್ಲಿ ನಡೆಯುವ ಕೃಷಿಮೇಳಕ್ಕೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಲಿದ್ದು, ಸಂಘದ ಅಧ್ಯಕ್ಷ ಗಣೇಶ್ ಕೆ.ಎಸ್. ಉದನಡ್ಕ ಸಮಾರಂಭದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕ್ಯಾಂಪ್ಕೋ ನಿರ್ದೇಶಕ ಎಸ್. ಆರ್.ಸತೀಶ್ಚಂದ್ರ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಮನ್ಮಥ ಎಸ್. ಎನ್., ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಚಾರ್ವಾಕ ಸಿ.ಎ.ಬ್ಯಾಂಕ್ ಮಾಜಿ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ಶ್ರೀ ಕಾಣಿಯೂರು ಮಠದ ವ್ಯವಸ್ಥಾಪಕ ಶ್ರೀನಿಧಿ, ನ್ಯಾಯವಾದಿ ಮೋಹನ ಗೌಡ ಇಡ್ಯಡ್ಕ ಸೇರಿದಂತೆ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಜ.೧೨ ರಂದು ಸ್ವ ಉದ್ಯೋಗ ಕುರಿತು ವಿಚಾರಗೋಷ್ಠಿ ಬೆಳಗ್ಗೆ ೧೧.೩೦ ರಿಂದ ನಡೆಯಲಿದೆ. ಸಂಜೆ ೬ ಗಂಟೆಗೆ ಉಡುಪಿ ಕಾಪು ರಂಗ ತರಂಗ ಕಲಾವಿದರಿಂದ ಕುಟ್ಟಣ್ಣನ ಕುಟುಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.ಜ.೧೩ ರಂದು ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ನೂತನ ಕಚೇರಿ ಕಟ್ಟಡವನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಸಹಕಾರಿ ರತ್ನ ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ಗಣೇಶ್ ಕೆ.ಎನ್. ಉದನಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೂತನ ಗೋದಾಮು ಕಟ್ಟಡ ಉದ್ಘಾಟಿಸಲಿದ್ದಾರೆ. ಮಂಗಳೂರು ಸಂಸದ ಕ್ಯಾ.ಬ್ರಿಜೇಶ್ ಚೌಟ ದೀಪ ಬೆಳಗಿಸಲಿದ್ದಾರೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸದಸ್ಯರಿಗೆ ಎಸ್.ಎಂ.ಎಸ್. ಮೂಲಕ ಮಾಹಿತಿಗೆ ಚಾಲನೆ ನೀಡಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಸಂಪರ್ಕ ನೂತನ ರಸ್ತೆ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ, ನಿರ್ದೇಶಕರಾದ ಅನಂತ ಕುಮಾಕ್ ಬೈಲಂಗಡಿ, ವಿಶ್ವನಾಥ ಕೂಡಿಗೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ ಗೌಡ ಪಿ. ಉಪಸ್ಥಿತರಿದ್ದರು.