ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರುರೈತರ ಶೋಷಣೆ ತಪ್ಪಿಸಲು ಎಪಿಎಂಸಿ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಮಂಡಲ ಅಧಿವೇಶನದಲ್ಲಿ ಅಂಗೀಕಾರ ದೊರೆತಿದೆ. ಇದರಿಂದಾಗಿ ರೈತರಿಗೆ ಹೆಚ್ಚಿನ ಸೌಲಭ್ಯಗಳು ದೊರೆಯಲಿದ್ದು ವರ್ತಕರಿಗೂ ಅನುಕೂಲವಾಗಲಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಸ್ಪಷ್ಟಪಡಿಸಿದರು. ಎಪಿಎಂಸಿಗಳಲ್ಲಿ ರೈತರಿಗೆ ಕಡಿಮೆ ದರದಲ್ಲಿ ಊಟ ಒದಗಿಸಲು ಕ್ಯಾಂಟೀನ್‌ಗಳನ್ನು ಪ್ರಾರಂಭಿಸುವ ಚಿಂತನೆ ಇದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಎಪಿಎಂಸಿ ಕಾಯ್ದೆಯನ್ನು ರದ್ದುಪಡಿಸಿ 2020ರಲ್ಲಿ ಹೊಸ ಕಾಯ್ದೆ ಜಾರಿಗೊಳಿಸಲಾಗಿತ್ತು. ಆದರೆ ಹೊಸ ಕಾಯ್ದೆಗೆ ರೈತರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಹೊಸ ಕಾಯ್ದೆ ರದ್ದುಪಡಿಸುವುದಾಗಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲೂ ಭರವಸೆ ನೀಡಲಾಗಿತ್ತು. ಅದರಂತೆ ಎಪಿಎಂಸಿ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಮಂಡಲ ಅಧಿವೇಶನದಲ್ಲಿ ಅಂಗೀಕಾರ ದೊರೆತಿದೆ ಎಂದು ವಿವರಿಸಿದರು.ಹೊಸ ಕಾಯ್ದೆಯಿಂದ ಅಡಿಕೆ ಬೆಳೆಗಾರರು ಮತ್ತು ರೈಸ್‌ಮಿಲ್ ಮಾಲೀಕರಿಗೆ ಸ್ಪಲ್ಪ ಅನಾನುಕೂಲ ಆಗಬಹುದು ಎಂಬುದು ನಮ್ಮ ಗಮನಕ್ಕೆ ಬಂದಿದ್ದು ಇದನ್ನು ಸರಿಪಡಿಸಲಾಗುವುದು. ಆರ್ಥಿಕವಾಗಿ ಬಲಿಷ್ಠವಾಗಿರುವ ಮಾರುಕಟ್ಟೆಗಳಿಂದ ದುರ್ಬಲ ಮಾರುಕಟ್ಟೆಗಳಿಗೂ ನೆರವು ಸಿಗಲಿದೆ. ಎಪಿಎಂಸಿಗಳು ಸಹ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಖರೀದಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿವೆ. ಸಾಫ್ಟ್‌ವೇರ್ ಬದಲಾವಣೆ ಮಾಡುತ್ತಿರುವುದರಿಂದ ಕೊಬ್ಬರಿ ಖರೀದಿ 5 ದಿವಸ ವಿಳಂಬವಾಗಲಿದೆ ಎಂದು ತಿಳಿಸಿದರು.ಎಪಿಎಂಸಿಗಳಲ್ಲಿ ರೈತರಿಗೆ ಕಡಿಮೆ ದರದಲ್ಲಿ ಊಟ ಒದಗಿಸಲು ಕ್ಯಾಂಟೀನ್‌ಗಳನ್ನು ಪ್ರಾರಂಭಿಸುವ ಚಿಂತನೆ ಇದೆ. ಪ್ರಸ್ತುತ ಮೈಸೂರು ಮತ್ತು ಬಳ್ಳಾರಿಯಲ್ಲಿ ಅಲ್ಲಿನ ವರ್ತಕರೇ ರೈತರಿಗೆ ರಿಯಾಯಿತಿ ದರದಲ್ಲಿ ಊಟ ಒದಗಿಸುತ್ತಿದ್ದಾರೆ. ರೈತ ಆಸ್ಪತ್ರೆ, ರೈತ ಭವನವನ್ನೂ ಪ್ರಾರಂಭಿಸಿದ್ದಾರೆ ಎಂದು ಹೇಳಿದರು.