ಅನ್ಯ ರಾಜ್ಯದ ಮತದಾರರ ಹಕ್ಕು ಪರಿಶೀಲಿಸಿ

| Published : Apr 11 2024, 12:48 AM IST

ಸಾರಾಂಶ

ಕೇಂದ್ರ ಚುನಾವಣಾ ಆಯೋಗವು ಅನ್ಯ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದು ಇಲ್ಲಿಯೇ ನೆಲೆಸಿರುವ ಎಲ್ಲ ಮತದಾರರ ಪರಿಶೀಲನೆ ನಡೆಸಬೇಕು.

ಹುಬ್ಬಳ್ಳಿ:

ಬೇರೆ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ನೆಲೆಸಿದವರನ್ನು ಗುರುತಿಸಿ, ಅವರು ಮತದಾನ ಮಾಡುವ ಹಕ್ಕನ್ನು ಪರಿಶೀಲಿಸಬೇಕೆಂದು ಆಗ್ರಹಿಸಿರುವ ಕರ್ನಾಟಕ ಸಮತಾ ಪಕ್ಷದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ, ತಪ್ಪಿತಸ್ಥರಾಗಿದ್ದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗುಜರಾತ್, ರಾಜಸ್ಥಾನ ಮಹಾರಾಷ್ಟ್ರ ಹಾಗೂ ಬಿಹಾರ ರಾಜ್ಯದ ವ್ಯಾಪಾರಸ್ಥರು ಮತ್ತು ಕೂಲಿ ಕಾರ್ಮಿಕರು ಹಲವು ವರ್ಷಗಳಿಂದ ರಾಜ್ಯದಲ್ಲಿ ವಾಸಿಸುತ್ತಿದ್ದಾರೆ. ಆದರೆ, ಇವರಲ್ಲಿ ಕೆಲವರು ತಮ್ಮ ರಾಜ್ಯ ಹಾಗೂ ಇಲ್ಲಿಯೂ ಮತದಾನದ ಹಕ್ಕು ಹೊಂದಿದ್ದಾರೆ. ತಮ್ಮ ರಾಜ್ಯಗಳಲ್ಲಿ ನಡೆಯುವ ಚುನಾವಣೆಗೆ ಅಲ್ಲಿಗೆ ತೆರಳಿ ಮತದಾನ ಮಾಡಿ ಬರುತ್ತಾರೆ. ಹಾಗೆಯೇ ಕರ್ನಾಟಕದಲ್ಲಿ ನಡೆಯುವ ಚುನಾವಣೆಗಳಲ್ಲೂ ತಮ್ಮ ಮತ ಚಲಾಯಿಸುತ್ತಿರುವುದು ಪಕ್ಷದ ಗಮನಕ್ಕೆ ಬಂದಿದೆ. ಇದು ಕಾನೂನು ಪ್ರಕಾರ ಅಪರಾಧವಾಗಿದೆ ಎಂದರು.

ಕೇಂದ್ರ ಚುನಾವಣಾ ಆಯೋಗವು ಅನ್ಯ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದು ಇಲ್ಲಿಯೇ ನೆಲೆಸಿರುವ ಎಲ್ಲ ಮತದಾರರ ಪರಿಶೀಲನೆ ನಡೆಸಬೇಕು. ಎರಡು ಕಡೆಗಳಲ್ಲಿ ಮತದಾನದ ಹಕ್ಕು ಹೊಂದಿದ್ದರೆ ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಕುರಿತು ಒಂದು ವಾರದೊಳಗೆ ನಮಗೆ ಮಾಹಿತಿ ನೀಡಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ರೂಪರೇಷೆ ಹಾಕಿಕೊಂಡು ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಜಿಲ್ಲೆಗಳಲ್ಲಿನ ಚುನಾವಣಾ ಇಲಾಖೆ ಎದುರು ನಿರಂತರ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ವೇಳೆ ಗುರು ರಾಯನಗೌಡ್ರ ಇದ್ದರು.ಶ್ರೀಗಳೇ ಪಕ್ಷೇತರರಾಗಿ ನಿಲ್ಲಬೇಡಿ:

ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಶಿರಹಟ್ಟಿ ಫಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಶ್ರೀಗಳು ಪಕ್ಷೇತರರಾಗಿ ಸ್ಪರ್ಧಿಸಬಾರದು ಎಂದು ಹಸಿರು ಸೇನೆ ಹಾಗೂ ಕರ್ನಾಟಕ ಸಮತಾ ಪಕ್ಷದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.

ಈ ಭಾಗದಲ್ಲಿ ಸಾವಿರಾರು ಜನರು ಫಕೀರ ದಿಂಗಾಲೇಶ್ವರ ಶ್ರೀಗಳ ಪರಮ ಭಕ್ತರಿದ್ದಾರೆ. ಶ್ರೀಗಳು ವಿಶೇಷ ಗೌರವ, ವ್ಯಕ್ತಿತ್ವ ಉಳ್ಳವರು. ಅವರ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ಪಕ್ಷೇತರರಾಗಿ ಈ ಬಾರಿ ಚುನಾವಣೆಗೆ ಸ್ಪರ್ಧಿಸಬಾರದು. ಇದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ ಎಂದರು.

ಈ ಹಿಂದೆಯೇ ನಿರ್ಧರಿಸಿದಂತೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಧಾರವಾಡ, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ ಜಿಲ್ಲೆಯ ಕಾರ್ಯಕರ್ತರು ಹಾಗೂ ರೈತರು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗೆ ಬೆಂಬಲಿಸಲು ನಿರ್ಧರಿಸಿರುವುದಾಗಿ ತಿ‍ಳಿಸಿದರು.