ಸಾರಾಂಶ
-ಮನೆ ಹಾನಿಗೆ ಸಂಬಂಧ ಬಾಕಿ ಉಳಿದ ಪರಿಹಾರ ಆದ್ಯತೆಯನುಸಾರ ವಿತರಣೆಗೆ ಸಚಿವರ ಸೂಚನೆ
-----------ಕನ್ನಡಪ್ರಭ ವಾರ್ತೆ ಯಾದಗಿರಿ
ಅತಿವೃಷ್ಟಿಯಿಂದಾದ ಬೆಳೆಹಾನಿ ಮತ್ತು ಮನೆ ಹಾನಿ ಕುರಿತಂತೆ ಪರಿಶೀಲನೆ ನಡೆಸಿ ಶೀಘ್ರ ವರದಿ ಸಲ್ಲಿಸುವುದರ ಜೊತೆಗೆ ಈ ಹಿಂದೆ ಮನೆ ಹಾನಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಪರಿಹಾರವನ್ನು ಆದ್ಯತೆ ಮೇಲೆ ವಿತರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪದ ಅಡಿ ಬೆಳೆ, ರಸ್ತೆ, ಮೂಲಸೌಕರ್ಯ ಹಾನಿ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಬೆಳೆ ನಷ್ಟವಾಗಿರುವ ಬಗ್ಗೆ ಜಂಟಿ ಸಮೀಕ್ಷೆ ನಡೆಸಬೇಕು. ಮನೆ, ರಸ್ತೆ, ಮೂಲಸೌಕರ್ಯ ಹಾನಿ ಕುರಿತು ಶೀಘ್ರ ವರದಿ ಸಲ್ಲಿಸುವಂತೆ ತಿಳಿಸಿದರು.
ಜಿಲ್ಲೆಯ ಸಿರವಾಳದಿಂದ ಅಣಬಿವರೆಗೆ ಹಾಗೂ ಶಹಾಪುರದಿಂದ ಶಿರವಾಳದ ವರೆಗೆ ಹಾಗೂ ಇಬ್ರಾಹಿಂಪುರದಿಂದ ಚಟ್ನಳ್ಳಿ ವರೆಗೆ ರಸ್ತೆ ಹಾನಿಯಾಗಿದೆ. ಈ ರಸ್ತೆಗಳ ಮಧ್ಯೆ ಭಾರತಮಾಲಾ, ರೈಲ್ವೆ ಕಾಮಗಾರಿ ನಡೆಯುತ್ತಿರುವುದರಿಂದ ಈ ಕುರಿತಂತೆ ಜಂಟಿ ಸಹಯೋಗದೊಂದಿಗೆ ಸಾಧ್ಯತೆ ಇದ್ದಲ್ಲಿ ರಸ್ತೆ ದುರಸ್ತಿ ಕೈಗೊಳ್ಳುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ, ಅವಶ್ಯಕ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.ಸಚಿವರು ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಆಗಿರುವ ಬಿತ್ತನೆ, ಬೆಳೆ ಹಾನಿ, ಭೀಮಾ, ಕೃಷ್ಣಾ ನದಿ ವ್ಯಾಪ್ತಿಯಲ್ಲಿ ಬೆಳೆ ಪರಿಸ್ಥಿತಿ, ರಸಗೊಬ್ಬರದ ಅವಶ್ಯಕತೆ, ಬೆಳೆವಿಮೆ ಪರಿಹಾರ ವಿತರಣೆ, ತೋಟಗಾರಿಕಾ ಇಲಾಖೆ ವ್ಯಾಪ್ತಿಯಲ್ಲಿ ಆದ ಬೆಳೆ ಹಾನಿ, ಪ್ರೂಟ್ಸ್ ತಂತ್ರಾಂಶದಲ್ಲಿ ರೈತರ ನೋಂದಣಿ ಕುರಿತಂತೆ ಪರಿಶೀಲನೆ ನಡೆಸಿದರು.
ಇದಕ್ಕೂ ಮುಂಚೆ ಜಿಲ್ಲಾ ಉಸ್ತುವಾರಿ ಸಚಿವರು ಇಂದು ಯಾದಗಿರಿ ತಾಲೂಕಿನ ಪಗಲಾಪುರ ಸೇತುವೆ, ಭೀಮಾ ಹಳೆ ಸೇತುವೆ, ನಾಯ್ಕಲ್ ಗ್ರಾಮದ ಹೊರವಲಯದಲ್ಲಿರುವ ಹತ್ತಿಬೆಳೆ, ಹೆಸರು ಹಾಗೂ ಇನ್ನಿತರ ಬೆಳೆಗಳ ಹಾನಿಯ ಬಗ್ಗೆ ಖುದ್ದಾಗಿ ಪರಿಶೀಲನೆ ನಡೆಸಿ ರೈತರಿಂದ ಮಾಹಿತಿ ಪಡೆದರು.ಈ ಸಂದರ್ಭದಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ, ಜಿಲ್ಲಾಧಿಕಾರಿ ಡಾ. ಸುಶೀಲಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ವಿಜಯಕುಮಾರ ಮಡ್ಡೆ, ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗೂರು ಸೇರಿದಂತೆ ಎಲ್ಲಾ ತಾಲೂಕಿನ ತಹಸೀಲ್ದಾರರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
------ಪೋಟೊ: 3ವೈಡಿಆರ್4 :
ಯಾದಗಿರಿ ಜಿಲ್ಲೆಯಲ್ಲಿ ಮಳೆಯಿಂದಾದ ಹಾನಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ದರ್ಶನಾಪುರ ಅವರು ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆ ನಡೆಸಿದರು. ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಮುಂತಾದವರಿದ್ದರು.