ಬಿಸಿಯೂಟ ಆಹಾರ ಪದಾರ್ಥ ಗುಣಮಟ್ಟ ಪರಿಶೀಲಿಸಿ: ಸಚಿವ ಕೆ.ವೆಂಕಟೇಶ್

| Published : Dec 01 2024, 01:31 AM IST

ಬಿಸಿಯೂಟ ಆಹಾರ ಪದಾರ್ಥ ಗುಣಮಟ್ಟ ಪರಿಶೀಲಿಸಿ: ಸಚಿವ ಕೆ.ವೆಂಕಟೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ಷರ ದಾಸೋಹ ಕಾರ್ಯಕ್ರಮದಡಿ ಶಾಲೆಗಳಲ್ಲಿ ಬಿಸಿಯೂಟಕ್ಕೆ ಸರಬರಾಜಾಗುವ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲಿಸುವಂತೆ ಸಚಿವ ಕೆ. ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು. ಚಾಮರಾಜನಗರದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು.

ಅಧಿಕಾರಿಗಳಿಗೆ ಸೂಚನೆ । ಕೆಡಿಪಿ ಸಭೆ । ಅಂಗನವಾಡಿಗೆ ಸರಬರಾಜಾಗುವ ಧಾನ್ಯ ಗುಣಮಟ್ಟದಿಂದ ಕೂಡಿಲ್ಲ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಅಕ್ಷರ ದಾಸೋಹ ಕಾರ್ಯಕ್ರಮದಡಿ ಶಾಲೆಗಳಲ್ಲಿ ಬಿಸಿಯೂಟಕ್ಕೆ ಸರಬರಾಜಾಗುವ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲಿಸುವಂತೆ ಸಚಿವ ಕೆ. ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಪಂ ಕೆ.ಡಿ.ಪಿ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು. ಮಕ್ಕಳ ಹಸಿಸು ನೀಗಿಸಲು ಅಕ್ಷರ ದಾಸೋಹ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಪ್ರತಿ 2 ತಿಂಗಳಿಗೊಮ್ಮೆ ಖರೀದಿಸಿ ಶಾಲೆಗಳಿಗೆ ಸರಬರಾಜು ಮಾಡುವ ಆಹಾರ ಪದಾರ್ಥಗಳು ಉತ್ತಮವಾಗಿರುವ ಬಗ್ಗೆ ತಪಾಸಣೆ ಮಾಡಬೇಕು. ಆಹಾರ ಧಾನ್ಯಗಳು ಬಳಕೆಗೆ ಯೋಗ್ಯವಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದರು.ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಅಂಗನವಾಡಿಗೆ ಸರಬರಾಜು ಆಗುತ್ತಿರುವ ಆಹಾರ ಧಾನ್ಯ ಗುಣಮಟ್ಟದಿಂದ ಕೂಡಿಲ್ಲದಿರುವುದು ಗಮನಕ್ಕೆ ಬಂದಿದೆ. ಅವಧಿ ಮೀರಿರುವ ಆಹಾರ ಆರೋಗ್ಯಕ್ಕೆ ಪರಿಣಾಮ ಬೀರುವುದಲ್ಲದೇ, ಮಕ್ಕಳಿಗೆ ಅಪೌಷ್ಠಿಕತೆ ಉಂಟಾಗಲಿದೆ. ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳ ಸರಬರಾಜು ಆಗಬೇಕು. ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು ಎಂದರು. ಸಚಿವ ವೆಂಕಟೇಶ್ ಮಾತನಾಡಿ, ಬಳಕೆಗೆ ಯೋಗ್ಯವಲ್ಲದ ಆಹಾರ ಸೇವಿಸಿ ಅವಘಡಗಳು ಸಂಭವಿಸುವ ಮೊದಲು ಅಧಿಕಾರಿಗಳು ಎಚ್ಚರ ವಹಿಸಬೇಕು. ಜಿಲ್ಲೆಯ ಎಲ್ಲಾ ಶಾಲೆಗಳು, ಅಂಗನವಾಡಿಗಳು ಹಾಗೂ ವಿವಿಧ ಇಲಾಖೆಗಳಡಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿನಿಲಯಗಳಿಗೆ ಸರಬರಾಜು ಆಗುವ ಆಹಾರ ಪದಾರ್ಥ ಪರಿಶೀಲಿಸಬೇಕು ಎಂದು ಸೂಚಿಸಿದರು.

ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳಲ್ಲಿ ಮೂಲಸೌಕರ್ಯ ಸಮರ್ಪಕವಾಗಿರಬೇಕು. ಹಾಸ್ಟಲ್‌ಗಳಿಗೆ ದಾಖಲಾತಿ ಹೆಚ್ಚಾಗಬೇಕು. ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗಬಾರದು. ಏನಾದರೂ ಕೊರತೆ ಕಂಡುಬಂದರೆ ಸಂಬಂಧಪಟ್ಟ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು ಎಂದರು.

ಜಿಲ್ಲೆಯಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ಕೊಳಗಾಲ ತಾಲೂಕಿನ ದಾಸನಪುರ, ಹಂಪಾಪುರ, ಮುಳ್ಳೂರು ಪ್ರದೇಶಗಳಿಗೆ ಭೇಟಿ ನೀಡಿ ಪ್ರವಾಹದಿಂದ ಜನರಿಗೆ ತೊಂದರೆಯಾಗದಂತೆ ಸುತ್ತುಗೋಡೆ ನಿರ್ಮಾಣ ಕಾಮಗಾರಿಯನ್ನು ಶೀಘ್ರವೇ ಆರಂಭಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಮುಂದಾಗಬೇಕು. ಜಿಲ್ಲೆಯಲ್ಲಿ ಯುಜಿಡಿ ಕಾಮಗಾರಿಗಾಗಿ ₹೨ ಕೋಟಿ ಅನುದಾನಕ್ಕಾಗಿ ಡಿ.ಪಿ.ಆರ್ ತಯಾರಿಸಬೇಕು ಎಂದು ತಿಳಿಸಿದರು.ಸಚಿವ ಡಾ. ಎಚ್.ಸಿ. ಮಹದೇವಪ್ಪ ಮಾತನಾಡಿ, ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನ ಬಾಕಿ ಉಳಿದಿದ್ದರೆ ಶೀಘ್ರವಾಗಿ ಪೂರ್ಣಗೊಳಿಸಬೇಕು. ನೀರಾವರಿ ಯೋಜನೆಗಳಿಗೆ ಸಲ್ಲಿಸಿರುವ ಅಂದಾಜುಪಟ್ಟಿಗಳು ಯೋಜನಾಬದ್ಧವಾಗಿರಬೇಕು. ಜಿಲ್ಲೆಯ ಸಮಗ್ರ ನೀರಾವರಿ ಅಭಿವೃದ್ಧಿಗೆ ಮುಖ್ಯಮಂತ್ರಿಯವರ ಜೊತೆ ಚರ್ಚಿಸಲಾಗುವುದು. ಯೋಜನೆಗಳಿಗೆ ಅಗತ್ಯ ಅನುದಾನ ತರಲಾಗುವುದು ಎಂದರು. ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಬಿಸಿಯೂಟ ಆಹಾರ ಪೂರೈಕೆ ಸಂಬಂಧ ಸರಬರಾಜು ಆಗಿರುವ ಆಹಾರ ಪದಾರ್ಥಗಳನ್ನು ಪರಿಶೀಲಿಸಿ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಲಾಗುವುದು. ಪೇಮೆಂಟ್ ಸ್ಥಗಿತಗೊಳಿಸುವುದಲ್ಲದೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು. ಅಲ್ಲದೆ ಜಿಲ್ಲೆಯಲ್ಲಿ ಕೆರೆಗಳ ಒತ್ತುವರಿಗೆ ಸಂಬಂಧಿಸಿದಂತೆ ಪ್ರತಿತಿಂಗಳು ಅಧಿಕಾರಿಗಳ ಸಭೆ ಕರೆದು ಕರೆಗಳ ಒತ್ತುವರಿ ತೆರವುಗೊಳಿಸಲು ಕ್ರಮವಹಿಸಲಾಗಿದೆ ಎಂದರು.ಶಾಸಕರಾದ ಎಚ್.ಎಂ. ಗಣೇಶ್‌ಪ್ರಸಾದ್, ಎಂ.ಆರ್. ಮಂಜುನಾಥ್, ಎಸ್. ಜಯಣ್ಣ, ಪಿ. ಮರಿಸ್ವಾಮಿ, ಅಸ್ಗರ್ ಮುನ್ನಾ, ಡಾ. ಪುಷ್ಪಾ ಅಮರ್‌ನಾಥ್, ಮೋನಾ ರೋತ್, ಡಾ. ಬಿ.ಟಿ. ಕವಿತ, ಡಾ. ಸಂತೋಷ್‌ಕುಮಾರ್, ಮಹದೇವಣ್ಣ ಇದ್ದರು.