ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಗ್ರಾಮೀಣ ಪ್ರದೇಶಗಳಲ್ಲಿ ಟ್ಯಾಂಕರ್ ಮೂಲಕ ಕುಡಿವ ನೀರು ಪೂರೈಕೆ ಮಾಡುವ ಮುನ್ನ ನೀರಿನ ಗುಣಮಟ್ಟ ಪರೀಕ್ಷಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ಬರ ನಿರ್ವಹಣೆ ಕುರಿತು ನಡೆದ ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಖಾಸಗಿ ಕೊಳವೆ ಬಾವಿಗಳು, ಟ್ಯಾಂಕರ್ ಮೂಲಕ ನೀರು ಪೂರೈಕೆ ಸಂದರ್ಭದಲ್ಲಿ ನೀರಿನ ಗುಣಮಟ್ಟದ ಬಗ್ಗೆ ಕಡ್ಡಾಯವಾಗಿ ಪರಿಶೀಲನೆ ಮಾಡುವ ವ್ಯವಸ್ಥೆ ಇರಬೇಕು. ನೀರಿನ ಮೂಲ ಹಾಗೂ ವಿತರಣಾ ಸ್ಥಳದಲ್ಲಿ ನೀರಿನ ಮಾಲಿನ್ಯತಾ ಪರೀಕ್ಷೆಯನ್ನು ನಿಯಮಿತವಾಗಿ ನಡೆಸಬೇಕು. ಪೂರೈಕೆ ಮಾಡುತ್ತಿರುವ ನೀರು ಮಲೀನತೆಯಿಂದ ಕೂಡಿದೆ ಎಂದು ಕಂಡು ಬಂದಲ್ಲಿ ಕೂಡಲೇ ಪೂರೈಕೆಯನ್ನು ನಿಲ್ಲಿಸಿ, ಪರ್ಯಾಯ ಮೂಲದಿಂದ ವ್ಯವಸ್ಥೆ ಕಲ್ಪಿಸಬೇಕು ಎಂದರು.
ತಾಲೂಕು ಮಟ್ಟದಲ್ಲಿ ತಹಸೀಲ್ದಾರ್, ಕಾರ್ಯ ನಿರ್ವಾಹಣಾಧಿಕಾರಿಗಳು, ತಾಲೂಕು ಪಂಚಾಯಿತಿ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಸಹಾಯಕ ಕಾರ್ಯಪಾಲಕ ಅಭಿಯಂತರರು ಜಂಟಿಯಾಗಿ ಕುಡಿವ ನೀರಿನ ಸಮಸ್ಯೆ ಕಂಡು ಬರುವಂತಹ ಗ್ರಾಮಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ವಸ್ತು ಸ್ಥಿತಿ ಮಾಹಿತಿ ಸಂಗ್ರಹಿಸಿ ನಿಖರವಾದ ಅಂಕಿ ಅಂಶ ಸಲ್ಲಿಸಬೇಕು. ಬರ ಪರಿಹಾರ ಕಾರ್ಯಗಳ ವೆಚ್ಚಗಳನ್ನು ಪ್ರತಿ ವಾರಾಂತ್ಯಕ್ಕೆ ಭರಿಸಬೇಕೆಂದು ಸರ್ಕಾರದ ನಿರ್ದೇಶನವಿರುವುದರಿಂದ, ನಿಯಮಾನುಸಾರ ಪರಿಶೀಲಿಸಿ ಬಿಲ್‍ಗಳನ್ನು ಪಾವತಿಸಲು ಕ್ರಮವಹಿಸಬೇಕು. ಯಾವುದೇ ಕಾರಣಕ್ಕೂ 15 ದಿನಗಳಿಗಿಂತ ಮೇಲ್ಪಟ್ಟ ಬಿಲ್‍ಗಳು ಬಾಕಿ ಇರಬಾರದು ಎಂದರು.ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರುವಂತಹ ಗ್ರಾಮಗಳನ್ನು ಈಗಾಗಲೆ ಗುರುತಿಸಲಾಗಿದ್ದು, ಇಂತಹ ಗ್ರಾಮಗಳಲ್ಲಿ ಪರ್ಯಾಯವಾಗಿ ಇರುವಂತಹ ಖಾಸಗಿ ಕೊಳವೆ ಬಾವಿ ಗುರುತಿಸಿ, ಸಂಬಂಧಪಟ್ಟವರೊಂದಿಗೆ ಕರಾರು ಮಾಡಿಕೊಳ್ಳಬೇಕು. ಅಗತ್ಯವೆಂದು ಕಂಡು ಬಂದಲ್ಲಿ ಖಾಸಗಿ ಕೊಳವೆ ಬಾವಿಯಿಂದ ಕುಡಿವ ನೀರಿನ ಸಂಪರ್ಕಕ್ಕೆ ಹೆಚ್ಚುವರಿ ಪೈಪ್‌ಲೈನ್ ಅಳವಡಿಸಿ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಿ, ವೆಚ್ಚವನ್ನು ಎಸ್‍ಡಿಆರ್‍ಎಫ್ ಅಡಿ ನಿಯಮಾನುಸಾರ ಭರಿಸಬೇಕು. ಟ್ಯಾಂಕರ್ ಮೂಲಕ ನೀರು ಪೂರೈಕೆ ಅಂತಿಮ ಆಯ್ಕೆಯಾಗಿದ್ದು, ತಾಲೂಕು ಮಟ್ಟದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಬಗ್ಗೆ ಅಲ್ಪಾವಧಿ ಟೆಂಡರ್ ಪ್ರಕ್ರಿಯೆ ಕೈಗೊಂಡು ದರವನ್ನು ಅಂತಿಮಗೊಳಿಸಬೇಕು. ನೀರು ಪೂರೈಕೆ ವಿವರಗಳನ್ನು ಸರ್ಕಾರವು ಅಭಿವೃದ್ಧಿಪಡಿಸಿರುವ ತಂತ್ರಾಂಶದಲ್ಲಿ ಕಡ್ಡಾಯವಾಗಿ ಅಳವಡಿಸಬೇಕು. ಅಂತಹ ಪೂರೈಕೆ ವೆಚ್ಚಗಳನ್ನು ಮಾತ್ರ ನಿಯಮಾನುಸಾರ ಎಸ್‍ಡಿಆರ್‍ಎಫ್ ಅಡಿ ಭರಿಸಬೇಕು ಎಂದರು.
ತಾಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರು, ಜಾನುವಾರುಗಳ ಮೇವು ಪೂರೈಕೆ ಸೇರಿ ಬರ ಪರಿಹಾರ ಕಾರ್ಯಗಳ ಬಗ್ಗೆ ನಿಯಮಿತವಾಗಿ ಪರಿಶೀಲಿಸಲು, ಪ್ರತಿವಾರ ಕಡ್ಡಾಯವಾಗಿ ತಾಲೂಕು ಕಾರ್ಯಪಡೆ ಸಭೆ ನಡೆಸಿ, ಅಗತ್ಯ ನಿರ್ಣಯಗಳನ್ನು ಕೈಗೊಂಡು ನಡವಳಿಗಳನ್ನು ತಪ್ಪದೇ ಸಲ್ಲಿಸಬೇಕು. ತಾಲೂಕು ವ್ಯಾಪ್ತಿಯಲ್ಲಿ ಬರಪರಿಹಾರ ಕಾರ್ಯಗಳ ಸಮರ್ಪಕ ಅನುಷ್ಟಾನಕ್ಕಾಗಿ 24 x7 ಮಾದರಿಯಲ್ಲಿ ಸಹಾಯವಾಣಿ ಪ್ರಾರಂಭಿಸಿ, ಅಗತ್ಯ ಸಿಬ್ಬಂದಿ ನಿಯೋಜಿಸಿ ಸಲ್ಲಿಕೆಯಾಗುವಂತಹ ದೂರುಗಳು/ಕುಂದು ಕೊರತೆಗಳ ಬಗ್ಗೆ ಕೂಡಲೇ ಕಾರ್ಯ ಪ್ರವೃತ್ತರಾಗಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದರು.ನೀರು ಪೂರೈಕೆಯಾಗುವ ಟ್ಯಾಂಕರ್‌ಗಳು, ಕಂಟೈನರ್, ಓವರ್ ಹೆಡ್ ಟ್ಯಾಂಕ್‍ಗಳನ್ನು ನಿಯಮಿತವಾಗಿ ಸ್ವಚ್ಚಗೊಳಿಸಬೇಕು. ಅಗತ್ಯ ಮತ್ತು ಅವಶ್ಯಕತೆ ಎಂದು ಕಂಡು ಬಂದಲ್ಲಿ ತಾಲೂಕು ಕಾರ್ಯಪಡೆಗಳಲ್ಲಿ ಚರ್ಚಿಸಿ, ಸೂಕ್ತ ನಿರ್ಣಯ ಕೈಗೊಂಡು ಅಗತ್ಯ ವ್ಯವಸ್ಥೆಯೊಂದಿಗೆ ಮೇವು ನಿಧಿ/ಗೋಶಾಲೆ ಪ್ರಾರಂಭಿಸಲು ಕ್ರಮವಹಿಸಬೇಕು. ಗೋಶಾಲೆಗಳಿಗೆ ಪೂರೈಕೆಯಾಗುವ ಮೇವಿನ ಗುಣಮಟ್ಟ ಹಾಗೂ ಯಾವ ಸ್ಥಳದಿಂದ ಪೂರೈಕೆಯಾಗುತ್ತಿದೆ ಎಂಬ ಬಗ್ಗೆ ನಿಯಮಿತವಾಗಿ ಪರಿಶೀಲಿಸಬೇಕು ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಕಾರ್ತಿಕ್, ಜಂಟಿಕೃಷಿ ನಿರ್ದೇಶಕ ಮಂಜುನಾಥ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಬಸವನಗೌಡ ಪಾಟೀಲ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕುಗಳ ತಹಸಿಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.