ಸಾರಾಂಶ
ಯಲಬುರ್ಗಾ: ಗ್ರಾಹಕರು ಯಾವುದೇ ವಸ್ತುಗಳನ್ನು ಪಡೆದುಕೊಳ್ಳಬೇಕಾದರೆ ಅದರ ಸಾಧಕ-ಬಾಧಕ, ಗುಣಮಟ್ಟ, ದರ ಪರಿಶೀಲಿಸಿ ಖರೀದಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿಜಯಕುಮಾರ ಕನ್ನೂರ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ಎಲ್ಲ ಮಕ್ಕಳಿಗೂ ಗ್ರಾಹಕ ಹಕ್ಕುಗಳ ಬಗ್ಗೆ ತಿಳಿವಳಿಕೆ ನೀಡಬೇಕು ಎಂದರು.ನಿಗದಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿಕೊಂಡರೆ ಜಿಲ್ಲಾ ಗ್ರಾಹಕರ ವೇದಿಕೆಗೆ ಅರ್ಜಿಯನ್ನು ಸಲ್ಲಿಸಿ ಪರಿಹಾರ ಪಡೆಯಬಹುದು. ಈ ಕಾಯ್ದೆ ಮೋಸದ ವ್ಯವಹಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ವಕೀಲರ ಸಂಘದ ತಾಲೂಕಾಧ್ಯಕ್ಷ ಪ್ರಕಾಶ ಬೇಲೇರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಹಕರು ಯಾವುದೇ ವಸ್ತುವಿನಲ್ಲಿ ಖರೀದಿಯಲ್ಲಿ ಮೋಸ ಹೋದಲ್ಲಿ ಕಾನೂನಿನ ಮೊರೆ ಹೋಗಬಹುದು, ಕಾನೂನಿನ ಪ್ರಕಾರ ಪರಿಹಾರವನ್ನು ಪಡೆದುಕೊಳ್ಳಬೇಕು ಎಂದರು.ತಹಸೀಲ್ದಾರ್ ಬಸವರಾಜ ತೆನ್ನೆಳ್ಳಿ, ಸಿಪಿಐ ಮೌನೇಶ್ವರ ಪಾಟೀಲ್, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಮಾಲಿಪಾಟೀಲ, ಗ್ರೇಡ್-೨ ತಹಸೀಲ್ದಾರ್ ನಾಗಪ್ಪ ಸಜ್ಜನ್, ಬೇವೂರು ಪಿಎಸ್‌ಐ ಪ್ರಶಾಂತ, ನ್ಯಾಯಾಂಗ ಇಲಾಖೆ ಸಿಬ್ಬಂದಿ ರಾಘವೇಂದ್ರ ಕೋಳಿಹಾಳ, ವಿನಾಯಕ ಮತ್ತಿತರರು ಇದ್ದರು.ಖರೀದಿಸಿದ ವಸ್ತುಗಳಿಗೆ ಕಡ್ಡಾಯವಾಗಿ ಬಿಲ್ ಪಡೆದುಕೊಳ್ಳಿ: ಸರಸ್ವತಿ ದೇವಿ
ಸಾರ್ವಜನಿಕರು ಖರೀದಿಸಿದ ವಸ್ತುಗಳಿಗೆ ಕಡ್ಡಾಯವಾಗಿ ಬಿಲ್ ಪಡೆದುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಸರಸ್ವತಿ ದೇವಿ ಹೇಳಿದರು.ಕುಷ್ಟಗಿ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಕಂದಾಯ ಇಲಾಖೆ, ಕಾನೂನೂ ಸೇವಾ ಸಮಿತಿಯ ವತಿಯಿಂದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾವು ಖರೀದಿಸಿದ ವಸ್ತುಗಳಿಗೆ ಪಡೆದ ಸೇವೆಗಳಿಗೆ ಸರಿಯಾದ ಬಿಲ್‌ಗಳನ್ನು ಪಡೆದು, ಸಂರಕ್ಷಿಸಿದರೆ ಮಾತ್ರ ನಾವು ಕಾನೂನಿನಡಿ ಗ್ರಾಹಕರಾಗುತ್ತೇವೆ ಎಂದರು.ನಮಗೆ ಮೋಸವಾದರೆ ಈ ನಾವು ಪಡೆದುಕೊಂಡ ಬಿಲ್ ಜತೆಗೆ ದೂರು ದಾಖಲಿಸಿ, ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಹಾಯಕವಾಗುತ್ತದೆ. ವಸ್ತುಗಳ ಖರೀದಿಯಲ್ಲಿ, ಸೇವೆಗಳಲ್ಲಿ ನಿಮಗೆ ಮೋಸವಾದರೆ ಗ್ರಾಹಕರ ಆಯೋಗಕ್ಕೆ ದೂರುಗಳನ್ನು ದಾಖಲಿಸಿ ಪರಿಹಾರ ಪಡೆದುಕೊಳ್ಳಬೇಕು. ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದುಕೊಂಡು ನಿಮ್ಮ ಸುತ್ತಮುತ್ತಲಿನವರಿಗೂ ತಿಳಿಸಬೇಕು ಎಂದು ಹೇಳಿದರು.
ತಹಸೀಲ್ದಾರ್ ರವಿ ಅಂಗಡಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಜೀವನಸಾಬ್ ಬಿನ್ನಾಳ ಉಪನ್ಯಾಸ ನೀಡಿದರು. ವಕೀಲರ ಸಂಘದ ಅಧ್ಯಕ್ಷ ವಿಜಯಮಹಾಂತೇಶ ಕುಷ್ಟಗಿ, ಶರಣಪ್ಪ ಹುಡೇದ ಇದ್ದರು.