ಹೋಟೆಲ್‌, ಮಾಲ್‌ಗಳಲ್ಲಿ ‘ಪ್ಲೋ ರಿಸ್ಟಿಕ್ಟರ್‌’ ಕಡ್ಡಾಯ!

| Published : Mar 16 2024, 01:51 AM IST / Updated: Mar 16 2024, 08:53 AM IST

ಹೋಟೆಲ್‌, ಮಾಲ್‌ಗಳಲ್ಲಿ ‘ಪ್ಲೋ ರಿಸ್ಟಿಕ್ಟರ್‌’ ಕಡ್ಡಾಯ!
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ಮಾಲ್‌, ವಾಣಿಜ್ಯ ಸಂಕೀರ್ಣಗಳಲ್ಲಿ, ದೇವಸ್ಥಾನ, ಹೋಟೆಲ್, ರೆಸ್ಟೋರೆಂಟ್‌ ಹಾಗೂ ಸಾರ್ವಜನಿಕ ಸ್ಥಳದಲ್ಲಿನ ಸ್ವಚ್ಛತಾ ನಲ್ಲಿಗಳಿಗೆ ಕಡ್ಡಾಯವಾಗಿ ‘ಪ್ಲೋ ರಿಸ್ಟಿಕ್ಟರ್‌’ ಬಳಕೆ ಮಾಡುವಂತೆ ಬೆಂಗಳೂರು ಜಲಮಂಡಳಿ ಸೂಚಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಮಾಲ್‌, ವಾಣಿಜ್ಯ ಸಂಕೀರ್ಣಗಳಲ್ಲಿ, ದೇವಸ್ಥಾನ, ಹೋಟೆಲ್, ರೆಸ್ಟೋರೆಂಟ್‌ ಹಾಗೂ ಸಾರ್ವಜನಿಕ ಸ್ಥಳದಲ್ಲಿನ ಸ್ವಚ್ಛತಾ ನಲ್ಲಿಗಳಿಗೆ ಕಡ್ಡಾಯವಾಗಿ ‘ಪ್ಲೋ ರಿಸ್ಟಿಕ್ಟರ್‌’ ಬಳಕೆ ಮಾಡುವಂತೆ ಬೆಂಗಳೂರು ಜಲಮಂಡಳಿ ಸೂಚಿಸಿದೆ.

ನಗರದಲ್ಲಿ ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿತಗೊಂಡು ಸಾಕಷ್ಟು ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿದೆ. ಇದರಿಂದ ನಗರದಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ಈ ಸಮಸ್ಯೆಯನ್ನು ಸಮರ್ಥವಾಗಿ ನಿರ್ವಹಿಸುವುದಕ್ಕೆ ಎಲ್ಲರ ಸಹಕಾರ ಮುಖ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಎಲ್ಲ ಮಾಲ್‌, ವಾಣಿಜ್ಯ ಸಂಕೀರ್ಣ, ದೇವಸ್ಥಾನಗಳಲ್ಲಿ, ಐಷಾರಾಮಿ ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿನ ಸ್ವಚ್ಛತೆಗಾಗಿ ಬಳಸುವ ಟ್ಯಾಪ್‌ (ನಲ್ಲಿ) ನೀರಿನ ಪ್ರಮಾಣವನ್ನು ಕಡಿಮೆ ಮಾಡುವುದು ಅವಶ್ಯಕವಾಗಿದೆ.

ಈ ನಿಟ್ಟಿನಲ್ಲಿ ಪ್ಲೋ ರಿಸ್ಟಿಕ್ಟರ್‌ ಎಂಬ ಸಾಧನವು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಆ ಸಾಧನವನ್ನು ಅಳವಡಿಸಿಕೊಳ್ಳುವುದರಿಂದ ಸರಿ ಸುಮಾರು ಶೇ.50 ರಷ್ಟು ನೀರಿನ ಬಳಕೆ ಕಡಿಮೆ ಮಾಡಬಹುದಾಗಿದೆ. ಸಾರ್ವಜನಿಕರ ಹಿತದೃಷ್ಠಿಯಿಂದ ಈ ಸಾಧನವನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ನೀರಿನ್ನು ಬಳಕೆ ಮಾಡುವಂತೆ ಬೆಂಗಳೂರು ಜಲ ಮಂಡಳಿ ಸೂಚಿಸಿದೆ.

ಸಂಸ್ಕರಿಸಿದ ನೀರು ಬಳಸದಿದ್ದರೆ ನಿರಾಕ್ಷೇಪಣೆ ರದ್ದು: ಜಲಮಂಡಳಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಕಟ್ಟಡ ನಿರ್ಮಾಣಕ್ಕೆ ಕಡ್ಡಾಯವಾಗಿ ಸಂಸ್ಕರಿಸಿದ ನೀರನ್ನು ಬಳಕೆ ಮಾಡಬೇಕು. ಇಲ್ಲವಾದರೆ, ಕಟ್ಟಡ ನಿರ್ಮಾಣಕ್ಕೆ ನೀಡಲಾಗಿರುವ ನಿರಾಕ್ಷೇಪಣಾ ಪತ್ರ ಹಾಗೂ ಕಟ್ಟಡ ನಿರ್ಮಾಣ ಪರವಾನಗಿ ರದ್ದುಪಡಿಸಲಾಗುವುದು ಎಂದು ಬೆಂಗಳೂರು ಜಲಮಂಡಳಿ ಎಚ್ಚರಿಕೆ ನೀಡಿದ್ದಾರೆ.

ನಗರದ ಪ್ರತಿಯೊಬ್ಬರಿಗೂ ಕುಡಿಯುವ ನೀರು ಪೂರೈಕೆ ಮಾಡಬೇಕಿದೆ. ಆದರೆ, ಮಳೆ ಕೊರತೆಯಿಂದ ಇತ್ತೀಚಿನ ದಿನಗಳಲ್ಲಿ ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. 

ಈ ಹಿನ್ನೆಲೆಯಲ್ಲಿ ಸಭೆ ನಡೆಸಿ ಕಟ್ಟಡ ನಿರ್ಮಾಣಕ್ಕೆ ಕಡ್ಡಾಯವಾಗಿ ಗುಣಮಟ್ಟ ದೃಢೀಕರಿಸಲಾದ ಪರಿಸರ ಸ್ನೇಹಿ ಸಂಸ್ಕರಿಸಿದ ನೀರನ್ನು ಮಾತ್ರ ಬಳಕೆ ಮಾಡುವಂತೆ ಕೋರಲಾಗಿದೆ. ಕಟ್ಟಡ ನಿರ್ಮಾಣ ಮಾಲೀಕರು ಒಪ್ಪಿಗೆ ಸೂಚಿಸಿದ್ದಾರೆ.

ಈ ಸಂಬಂಧ ಈಗಾಗಲೇ ಪರಿಸರ ಜಲಸ್ನೇಹಿ ವೆಬ್‌ ಆ್ಯಪ್‌ ಮಾಡಲಾಗಿದೆ. ಕಟ್ಟಡ ನಿರ್ಮಾಣ ಮಾಲೀಕರು ಈ ಆ್ಯಪ್‌ ಮೂಲಕ ಸಂಸ್ಕರಿಸಿದ ನೀರನ್ನು ಕಾಯ್ದಿರಿಸಿ ಪಡೆಯಬಹುದು.

ನಿಯಮ ಉಲ್ಲಂಖಿಸಿದರೆ, ಕಟ್ಟಡ ನಿರ್ಮಾಣಕ್ಕೆ ನೀಡಲಾಗಿರುವ ನಿರಾಕ್ಷೇಪಣಾ ಪತ್ರವನ್ನು ರದ್ದು ಪಡಿಸಲಾಗುವುದು ಹಾಗೂ ಬಿಬಿಎಂಪಿಯಿಂದ ನೀಡಲಾದ ಕಟ್ಟಡ ನಿರ್ಮಾಣ ಪರವಾನಗಿ ಹಿಂಪಡೆಯುವುದಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗುವುದು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರು ಎಚ್ಚರಿಕೆ ನೀಡಿ ಆದೇಶಿಸಿದ್ದಾರೆ.

ನಗರದ 124 ಕೆರೆಗಳಿಗೆ ಕೆರೆಮಿತ್ರರ ನೇಮಕ!

ಬೆಂಗಳೂರು: ಬಿಬಿಎಂಪಿಯ 124 ಕೆರೆಗಳಿಗೆ ಕೆರೆ ಮಿತ್ರ ಹೆಸರಿನ ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದ್ದು, ಬಾಕಿ ಉಳಿದ ಕೆರೆಗಳಿಗೆ ಕೆರೆ ಮಿತ್ರ ಸ್ವಯಂ ಸೇವಕರ ನೋಂದಣಿಗೆ ಮಾ.25ರ ವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ. 

ನಗರದ 124 ಕೆರೆಗಳಿಗೆ ಕೆರೆ ಮಿತ್ರರಾಗಿ ಸೇವೆ ಸಲ್ಲಿಸುವುದಕ್ಕೆ 744 ಮಂದಿ ನೋಂದಣಿ ಮಾಡಿಕೊಂಡಿದ್ದರು. ಇದೀಗ ಪ್ರತಿ ಕೆರೆಗೆ ತಲಾ ಒಬ್ಬರಂತೆ ಮೂರು ತಿಂಗಳ ಅವಧಿಗೆ 124 ಮಂದಿಯನ್ನು ನಿಯೋಜನೆ ಮಾಡಲಾಗಿದೆ. 

ಮೂರು ತಿಂಗಳ ಬಳಿಕ ಕೆರೆ ಮಿತ್ರ ಸ್ವಯಂ ಸೇವಕರನ್ನು ಬದಲಾವಣೆ ಮಾಡಲಾಗುವುದು ಎಂದು ಕೆರೆ ವಿಭಾಗದ ಮುಖ್ಯ ಎಂಜಿನಿಯರ್‌ ತಿಳಿಸಿದ್ದಾರೆ.