ಸಾರಾಂಶ
ಕೊಪ್ಪಳ:
ರಾಷ್ಟ್ರೀಯ ಫ್ಲೋರೋಸಿಸ್ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಪ್ಲೊರೈಡ್ ಅಂಶ ಹೆಚ್ಚಿರುವ ಗ್ರಾಮಗಳ ನೀರಿನ ಮೂಲಗಳ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಜಿಪಂ ಸಿಇಒ ವರ್ಣಿತ್ ನೇಗಿ ಹೇಳಿದರು.ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಫ್ಲೋರೋಸಿಸ್ ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಷ್ಟ್ರೀಯ ಫ್ಲೋರೋಸಿಸ್ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಪ್ಲೊರೈಡ್ ಅಂಶ ಕಂಡುಬರುವ ಹಳ್ಳಿಗಳ ಕುರಿತು ತಾಲೂಕುವಾರು ಮಾಹಿತಿ ನೀಡಿ. ಶಾಲೆ, ಅಂಗನವಾಡಿ ಮಕ್ಕಳಿಗೆ ಕಡ್ಡಾಯವಾಗಿ ಆರ್‌ಒ ಘಟಕಗಳಿಂದ ಶುದ್ಧೀಕರಿಸಿದ ನೀರು ನೀಡಬೇಕು. ಗ್ರಾಮಗಳ ಬೋರ್‌ವೆಲ್ ನೀರು ಪರೀಕ್ಷೆಗೆ ಒಳಪಡಿಸಬೇಕು. ಪ್ಲೊರೈಡ್‌ಯುಕ್ತ ನೀರಿನ ಸೇವನೆಯಿಂದ ಆಗುವ ದಂತಕ್ಷಯ, ಮೂಳೆಗಳ ದುರ್ಬಲತೆ ಕುರಿತು ಗ್ರಾಮೀಣ ಜನರಲ್ಲಿ ತಿಳಿವಳಿಕೆ ಮೂಡಿಸಿ ಶುದ್ಧ ಕುಡಿಯುವ ನೀರಿನ ಘಟಕಗಳಿಂದಲೇ ನೀರು ಉಪಯೋಗಿಸುವಂತೆ ತಿಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಮಗು ಜನಿಸಿದ 24 ಗಂಟೆಯೊಳಗೆ ಹಾಕಬೇಕಾದ ಕಡ್ಡಾಯ ಲಸಿಕೆ, ಮಗುವಿನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಹಾಕಬೇಕಾದ ಲಸಿಕೆ, ಲಸಿಕೆಯಿಂದ ಮಗುವಿಗೆ ಆಗುವ ಆರೋಗ್ಯ ಪ್ರಯೋಜನೆ, ಲಸಿಕೆ ಹಾಕಿಸದೇ ಇರುವುದರಿಂದ ಆಗುವ ತೊಂದರೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತಾಯಂದಿರಿಗೆ ಮತ್ತು ಪಾಲಕರಿಗೆ ಗೊತ್ತಿರಬೇಕು. ಅರ್ಹವಿರುವ ಪ್ರತಿಯೊಬ್ಬ ಮಗುವಿಗೂ ಲಸಿಕೆ ಹಾಕಿಸಲು ಕ್ರಮಕೈಗೊಳ್ಳಬೇಕು. ಈ ಕಾರ್ಯಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ. ಲಿಂಗರಾಜು ಮಾತನಾಡಿ, ಕುಡಿಯುವ ನೀರು, ಆಹಾರ, ಕೆಲವು ಔಷಧಿಗಳ ಸೇವನೆ ಹಾಗೂ ಕಾರ್ಖಾನೆಗಳಿಂದ ಹೊರಹೊಮ್ಮುವ ಧೂಳು, ಹೊಗೆ ಮುಂತಾದವುಗಳಿಂದ ಪ್ಲೊರೈಡ್ ದೇಹದೊಳಗೆ ಪ್ರವೇಶಿಸುತ್ತದೆ. ಇದು ವಯಸ್ಸಿನ ಅಂತರ, ಲಿಂಗಭೇದವಿಲ್ಲದೆ ಚಿಕ್ಕಮಕ್ಕಳು, ವಯಸ್ಕರು, ಮಹಿಳೆಯರು, ಪುರುಷರು ಎಲ್ಲರಲ್ಲಿಯೂ ಕಂಡುಬರುತ್ತದೆ ಎಂದರು.ಸಭೆಯಲ್ಲಿ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಪ್ರಕಾಶ ವಿ., ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರವಿಂದ್ರನಾಥ ಎಂ.ಎಚ್., ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ಡಾ. ಶ್ರೀಧರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಂದಕುಮಾರ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಗೋನಾಳ ಕುಮಾರಸ್ವಾಮಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಶಶಿಧರ ಎ., ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಪ್ರಕಾಶ ಎಚ್., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ್ ಸೇರಿದಂತೆ ಆರೋಗ್ಯಾಧಿಕಾರಿಗಳು, ತಜ್ಞವೈದ್ಯರು ಉಪಸ್ಥಿತರಿದ್ದರು.