ಕಾರ್ಕಳ ತಾಲೂಕಿನ ಬೋಳ ಗ್ರಾಮದಲ್ಲಿ ಚಿರತೆ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಮಲಕ್ಯರ್ ಕಡ್ಕನ್ ನಾರಾಯಣ್ ಶೆಟ್ಟರ ತೋಟದ ಬಾವಿಯಲ್ಲಿ ಸುಮಾರು 3 ವರ್ಷದ ಗಂಡು ಚಿರತೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಕಾರ್ಕಳ: ಕಾರ್ಕಳ ತಾಲೂಕಿನ ಬೋಳ ಗ್ರಾಮದಲ್ಲಿ ಚಿರತೆ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಮಲಕ್ಯರ್ ಕಡ್ಕನ್ ನಾರಾಯಣ್ ಶೆಟ್ಟರ ತೋಟದ ಬಾವಿಯಲ್ಲಿ ಸುಮಾರು 3 ವರ್ಷದ ಗಂಡು ಚಿರತೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬೆಳಗ್ಗೆ ಮನೆಯವರು ನೀರು ತೆಗೆಯಲು ಬಾವಿಯ ಬಳಿ ತೆರಳಿದಾಗ ಚಿರತೆಯ ಮೃತದೇಹ ಕಂಡುಬಂದಿದ್ದು, ತಕ್ಷಣವೇ ಸಮಾಜಸೇವಕ ಸುಪ್ರೀತ್ ಶೆಟ್ಟಿ ಕೆದಿಂಜೆ ಅವರಿಗೆ ಮಾಹಿತಿ ನೀಡಲಾಗಿದೆ. ಅವರು ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದರು. ಮಾಹಿತಿ ಪಡೆದ ಅರಣ್ಯಾಧಿಕಾರಿಗಳಾದ ಹುಕ್ರಪ್ಪಗೌಡ ಸೇರಿದಂತೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.ಪ್ರಾಥಮಿಕ ಅಂದಾಜಿನ ಪ್ರಕಾರ ಚಿರತೆ ನಾಯಿಯನ್ನು ಹಿಂಬಾಲಿಸಿಕೊಂಡು ಬಾವಿಗೆ ಬಿದ್ದಿರಬಹುದು. ಚಿರತೆ ಕಳೆದ 2-3 ದಿನಗಳ ಹಿಂದೆಯೇ ಬಾವಿಗೆ ಬಿದ್ದು ಸಾವನ್ನಪ್ಪಿರಬಹುದೆಂದು ಅರಣ್ಯ ಇಲಾಖೆ ಅಂದಾಜಿಸಿದೆ.ಘಟನೆ ನಡೆದ ಪ್ರದೇಶದ ಸುತ್ತಮುತ್ತಲು ಹೆಚ್ಚಿನ ಮನೆಗಳು ಇದ್ದು, ಈ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಚಿರತೆಗಳ ತೊಂದರೆ ಹೆಚ್ಚಾಗಿತ್ತು. ಗ್ರಾಮಸ್ಥರ ಆತಂಕದ ಹಿನ್ನೆಲೆಯಲ್ಲಿ ಹಲವು ಬಾರಿ ಬೋನುಗಳನ್ನು ಅಳವಡಿಸಿದ್ದರೂ ಚಿರತೆ ಸಿಕ್ಕಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.ಮರಣೋತ್ತರ ಪರೀಕ್ಷೆ ಬಳಿಕ ನಿಯಮಾನುಸಾರ ಅಂತಿಮ ಕ್ರಿಯೆ ಕೈಗೊಳ್ಳಲಾಯಿತು.