ಸಾರಾಂಶ
ತಾಲೂಕಿನ ನಂಜಿನಕೊಡಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಲಸಿವಾಡಿ ಗ್ರಾಮದ ಹೊರವಲಯದ ಕೃಷಿ ಜಮೀನಿನಲ್ಲಿ ಭಾನುವಾರ ಚಿರತೆ ಮರಿ ಕಾಣಿಸಿಕೊಂಡಿದೆ. ಈ ದೃಶ್ಯವನ್ನು ರೈತ ಮೊಬೈಲ್‌ನಲ್ಲಿ ಸರೆಹಿಡಿದಿದ್ದಾರೆ.
ಕನ್ನಡಪ್ರಭ ವಾರ್ತೆ ಖಾನಾಪುರ
ತಾಲೂಕಿನ ನಂಜಿನಕೊಡಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಲಸಿವಾಡಿ ಗ್ರಾಮದ ಹೊರವಲಯದ ಕೃಷಿ ಜಮೀನಿನಲ್ಲಿ ಭಾನುವಾರ ಚಿರತೆ ಮರಿ ಕಾಣಿಸಿಕೊಂಡಿದೆ. ಈ ದೃಶ್ಯವನ್ನು ರೈತ ಮೊಬೈಲ್‌ನಲ್ಲಿ ಸರೆಹಿಡಿದಿದ್ದಾರೆ.ಗ್ರಾಮದ ಜಮೀನಿನಲ್ಲಿ ರೈತರು ಕೃಷಿ ಕಾರ್ಯ ಕೈಗೊಂಡಿದ್ದ ವೇಳೆ ಚಿರತೆ ಮರಿ ಕಾಣಿಸಿಕೊಂಡಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಆದರೆ, ಭಾನುವಾರ ಸಂಜೆವರೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದತ್ತ ಸುಳಿಯಲಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನವಸತಿ ಪ್ರದೇಶದ ಬಳಿ ಚಿರತೆ ಕಾಣಿಸಿಕೊಂಡ ಕಾರಣ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಚಿರತೆಯಿಂದ ಗ್ರಾಮದ ಜನರಿಗೆ ಅಥವಾ ಜಾನುವಾರುಗಳಿಗೆ ಯಾವುದೇ ಅನಾಹುತಗಳು ಸಂಭವಿಸುವ ಮೊದಲು ಅದನ್ನು ಸೆರೆ ಹಿಡಿದು ಮರಳಿ ಅರಣ್ಯಕ್ಕೆ ಅಟ್ಟುವ ಕೆಲಸ ಮಾಡಬೇಕು ಎಂದು ಹಲಸಿವಾಡಿ ಗ್ರಾಮದ ನಾಗರಿಕರು ಆಗ್ರಹಿಸಿದ್ದಾರೆ.ಚಿರತೆ ಕಾಣಿಸಿಕೊಂಡ ಹಲಸಿವಾಡಿ ಗ್ರಾಮದ ಬಳಿ ಸೋಮವಾರ ತೆರಳಿ ಪರಿಶೀಲಿಸಲಾಗುತ್ತದೆ. ಬಹುಶಃ ಆಹಾರ ಅರಸಿ ಜನವಸತಿ ಪ್ರದೇಶಕ್ಕೆ ಬಂದಿರಬಹುದು. ಮರಿ ಚಿರತೆ ಎಂದು ಹೇಳಲಾಗುತ್ತಿದ್ದು, ತನ್ನ ಪಾಲಕರಿಂದ ತಪ್ಪಿಸಿಕೊಂಡು ಇತ್ತ ಬಂದಿರುವ ಸಾಧ್ಯತೆಗಳೂ ಇವೆ. ಈ ಘಟನೆ ಕುರಿತು ಪರಿಶೀಲಿಸುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.