ಸಾರಾಂಶ
ಬಳ್ಳಾರಿ: ತಾಲೂಕಿನ ಚೇಳ್ಳಗುರ್ಕಿ ಗ್ರಾಮದ ಶ್ರೀ ಎರ್ರಿತಾತನವರ ಮಹಾರಥೋತ್ಸವ ಜೂ. 12ರಂದು ಸಂಜೆ 5 ಗಂಟೆಗೆ ಜರುಗಲಿದ್ದು, ಕರ್ನಾಟಕ ಹಾಗೂ ಆಂಧ್ರಪ್ರದೇಶದ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ.ಉರವಕೊಂಡ ಗವಿಮಠ ಸಂಸ್ಥಾನದ ಡಾ. ಕರಿಬಸವರಾಜೇಂದ್ರ ಮಹಾಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡುವರು. ರಾತ್ರಿ 7 ಗಂಟೆಗೆ ಕರ್ಪೂರದ ಆರತಿ ಕಾರ್ಯಕ್ರಮ ನಡೆಯಲಿದೆ. ಜೂ. 13ರಂದು ಸಂಜೆ 7 ಗಂಟೆಗೆ ಹೂವಿನರಥೋತ್ಸವ ಕಾರ್ಯಕ್ರಮ, ಆನಂತರ ಬಾಣೋತ್ಸವ ನಡೆಯಲಿದೆ.
ರಥೋತ್ಸವ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಜೂ. 5ರಂದು ಬೆಳಗ್ಗೆ 6 ಗಂಟೆಯಿಂದಲೇ ನಂದಿ ಧ್ವಜಾರೋಹಣ ಮತ್ತು ಸಪ್ತಭಜನೆ ಕಾರ್ಯಕ್ರಮ ಆರಂಭವಾಗಿದೆ. ಜೂ. 6ರಂದು ಸಂಜೆ ಬೆಳ್ಳಿ ರಥೋತ್ಸವ ಕಾರ್ಯಕ್ರಮ ನಡೆದಿದ್ದು, ಮಂಗಳವಾರ ಬಸವ ಉತ್ಸವ ನಡೆದಿದೆ. ಜೂ. 12ರಂದು ಬೆಳಗ್ಗೆ 6 ಗಂಟೆಗೆ ಸಪ್ತಭಜನೆ ಮುಕ್ತಾಯವಾಗಲಿದೆ.ಮಹಾ ರಥೋತ್ಸವ ಹಿನ್ನೆಲೆಯಲ್ಲಿ ಶ್ರೀ ಎರ್ರಿಸ್ವಾಮಿ ಜೀವ ಸಮಾಧಿ ಟ್ರಸ್ಟ್ ಕಮಿಟಿಯ ಆವರಣದಲ್ಲಿ ವಸ್ತುಪ್ರದರ್ಶನ ಮತ್ತು ಮಾರಾಟ ಮಳಿಗೆಗೆ ಜೂ. 12ರಂದು ಬೆಳಗ್ಗೆ 10.30ಕ್ಕೆ ಚಾಲನೆ ದೊರೆಯಲಿದೆ ಎಂದು ಶ್ರೀ ಎರ್ರಿಸ್ವಾಮಿ ಜೀವಸಮಾಧಿ ಟ್ರಸ್ಟ್ ಅಧ್ಯಕ್ಷ ಬಾಳನಗೌಡ ಮತ್ತು ಶ್ರೀ ದಾಸೋಹ ಸೇವಾ ಸಂಘದ ಅಧ್ಯಕ್ಷ ಪಂಪನಗೌಡ ತಿಳಿಸಿದ್ದಾರೆ.
ಚೆಳ್ಳಗುರ್ಕಿ ಎರ್ರಿಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಉಚಿತ ರಕ್ತದಾನ ಶಿಬಿರ:ಇದೇ ಜೂ. 12, 13ರಂದು ಜರುಗಲಿರುವ ಬಳ್ಳಾರಿ ತಾಲೂಕಿನ ಚೆಳ್ಳಗುರ್ಕಿ ಗ್ರಾಮದ ಶ್ರೀ ಎರ್ರಿಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಸ್ವಯಂ ಪ್ರೇರಿತ ಉಚಿತ ರಕ್ತದಾನ ಶಿಬಿರವನ್ನು ಚೆಳ್ಳಗುರ್ಕಿ ಗ್ರಾಮದಲ್ಲಿ 2 ದಿನಗಳ ಕಾಲ ಏರ್ಪಡಿಸಲಾಗಿದೆ. ಜಾತ್ರೆಗೆ ಆಗಮಿಸುವ 18 ವರ್ಷ ಮೇಲ್ಪಟ್ಟ ಆರೋಗ್ಯವಂತ ಪುರುಷ ಮತ್ತು ಮಹಿಳಾ ಭಕ್ತಾದಿಗಳು ರಕ್ತದಾನ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೈ. ರಮೇಶ್ ಬಾಬು ಮನವಿ ಮಾಡಿದರು.
ಅವರು ಮಂಗಳವಾರ ಚೆಳ್ಳಗುರ್ಕಿ ಗ್ರಾಮದ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ಸಿದ್ಧತೆಗಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚೆಳ್ಳಗುರ್ಕಿ ಗ್ರಾಮ ಪಂಚಾಯಿತಿ, ಜಿಲ್ಲಾ ರಕ್ತ ಸುರಕ್ಷತಾ ಟಾಸ್ಕ್ ಫೋರ್ಸ್ ಸಮಿತಿ, ಏಡ್ಸ್ ನಿಯಂತ್ರಣ ಘಟಕ ಮತ್ತು ಶ್ರೀ ಎರ್ರಿಸ್ವಾಮಿ ಜೀವ ಸಮಾಧಿ ಟ್ರಸ್ಟ್, ಸ್ವಾಮಿ ವಿವೇಕಾನಂದ ಬ್ಲಡ್ ಬ್ಯಾಂಕ್ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು, ಕನಿಷ್ಠ 400 ಯುನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಈ ಮೂಲಕ ರಕ್ತದ ಕೊರತೆ ನೀಗಿಸಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ವಿನಂತಿಸಿದರು.ರಕ್ತಹೀನತೆಯಿಂದ ಬಳಲುವ ಗರ್ಭಿಣಿಯರಿಗೆ, ಹೆರಿಗೆ ಶಸ್ತ್ರಚಿಕಿತ್ಸೆ ವೇಳೆ ಮತ್ತು ಅಪಘಾತ, ತುರ್ತು ಶಸ್ತ್ರಚಿಕಿತ್ಸೆಗಳ ಸಂದರ್ಭದಲ್ಲಿ ಹಾಗೂ ಕ್ಯಾನ್ಸರ್ ರೋಗಿಗಳಿಗೆ ಥ್ಯಾಲಿಸೀಮಿಯಾ, ಹಿಮೋಫಿಲಿಯಾ ಮುಂತಾದ ರೋಗಿಗಳ ಜೀವವನ್ನು ಉಳಿಸುವ ಪುಣ್ಯದ ಕೆಲಸಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ತಿಳಿಸಿದರು.ಜಿಲ್ಲಾ ಮಲೇರಿಯ ನಿಯಂತ್ರಣಾಧಿಕಾರಿ ಡಾ. ಅಬ್ದುಲ್ಲಾ, ಚೆಳ್ಳಗುರ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಕಾವ್ಯಶ್ರೀ, ಸಿಬ್ಬಂದಿ ಚಂದ್ರಕಲಾ, ಹುಲಿಗೇಶ್, ಸಿದ್ದರಾಮಪ್ಪ, ಕುಮಾರ್, ದುರ್ಗಮ್ಮ, ಮಂಜುನಾಥ್, ಮಂಗಳಗೌರಿ ಹಾಗೂ ಟ್ರಸ್ಟ್‌ನ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.