ಸಾರಾಂಶ
ಹೊಸಕೋಟೆ: ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ಹೈವೇ ಗ್ರೀನ್ ಕಾರಿಡಾರ್ ನಿರ್ಮಾಣ ಮಾಡುವ ವೇಳೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಎಟವಟ್ಟಿನಿಂದ ಕೊಳತೂರು ಬಳಿ ಹೆದ್ದಾರಿ ಪಕ್ಕದಲ್ಲಿರುವ ಎನ್‌ಆರ್‌ಐ ಡೆಲಾನಿಕ್ಸ್ ಸಿಟಿ ಬಡಾವಣೆಗೆ ರಸ್ತೆ ಸಂಪರ್ಕವಿಲ್ಲದಂತೆ ಮಾಡಿದ್ದಾರೆಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ತಾಲೂಕಿನ ಕಸಬಾ ಹೋಬಳಿಯ ಕೊಳತೂರು ಬಳಿ ಹೊಸಕೋಟೆಯಿಂದ ಚೆನ್ನೈ ಗ್ರೀನ್ ಕಾರಿಡಾರ್ ರಸ್ತೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 2015ರಲ್ಲಿ ಭೂಮಿ ವಶಕಡಿಸಿಕೊಳ್ಳಲು ಆದೇಶ ಹೊರಡಿಸಿತ್ತು.ಆ ಸಂದರ್ಭದಲ್ಲಿ ಕೊಳತೂರು ಗ್ರಾಮದ ಸರ್ವೆ ನಂ 238/1/2/3ರಲ್ಲಿನ 9.36 ಎಕರೆ ಜಾಗದಲ್ಲಿ 2013ರಲ್ಲಿ ಬಿಎಂಆರ್‌ಡಿಎ ಅನುಮೋದನೆ ಪಡೆದು 150ಕ್ಕೂ ಹೆಚ್ಚು ನಿವೇಶನಗಳುಳ್ಳ ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಮಾರಾಟ ಮಾಡಲಾಗಿತ್ತು.
ಇಬ್ಬಾಗವಾದ ಬಡಾವಣೆ:ಆದರೆ 2015ರಲ್ಲಿ ಹೆದ್ದಾರಿ ಪ್ರಾಧಿಕಾರ ಬಡಾವಣೆಯನ್ನು ಇಬ್ಬಾಗ ಮಾಡಿ ಲೇಔಟ್ ಮದ್ಯದಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿ ನಿವೇಶನ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಿತ್ತು. ಆದರೆ ರಸ್ತೆ ಮತ್ತೊಂದು ಬದಿಯ ನಿವೇಶನದಾರರಿಗೆ ಸಂಪೂರ್ಣ ರಸ್ತೆ ಇಲ್ಲದಂತೆ ಮಾಡಿದೆ. ಜಮೀನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಪರ್ಯಾಯ ರಸ್ತೆ ನೀಡುವುದಾಗಿ ಹೇಳಿದ ಹೆದ್ದಾರಿ ಪ್ರಾಧಿಕಾರ ಈಗ ಕಾರಿಡಾರ್ ರಸ್ತೆ ಪಕ್ಕದಲ್ಲಿ ತಡೆಗೋಡೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದು, ರಸ್ತೆ ಇಲ್ಲದೆ 75ಕ್ಕೂ ಹೆಚ್ಚು ನಿವೇಶನದಾರರಿಗೆ ದಿಕ್ಕು ತೋಚದಂತಾಗಿದೆ.
ಮನವಿಗೆ ಸ್ಪಂದಿಸಿದ ಜನಪ್ರತಿನಿಧಿಗಳು:ಈ ಬಗ್ಗೆ ಸ್ಥಳೀಯ ಶಾಸಕರು, ಸಂಸದರು ಹಾಗೂ ಕೇಂದ್ರ ಹೆದ್ದಾರಿ ಮಂತ್ರಿಗಳಿಗೂ ಮನವಿ ಸಲ್ಲಿಸಲಾಗಿದೆ. ಜೊತೆಗೆ ಹೆದ್ದಾರಿ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರಕ್ಕೂ ಮನವಿ ಸಲ್ಲಿಸಿದ್ದು ರಸ್ತೆ ಇಲ್ಲದಿರುವ 75 ನಿವೇಶನದಾರರಿಗೆ ಪರ್ಯಾಯ ರಸ್ತೆ ನಿರ್ಮಿಸಿಕೊಡುವಂತೆ ಒತ್ತಾಯಿಸಿದರೂ ಮನವಿಗೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ಆದ್ದರಿಂದ ಈ ಸಂಬಂಧ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದೇವೆ ಎಂದು ಬಡಾವಣೆ ನಿವಾಸಿಗಳ ಸಂಘದ ಅಧ್ಯಕ್ಷ ಹನುಮಂತೇಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ಎನ್‌ಆರ್‌ಐ ಡೆಲಾನಿಕ್ಸ್ ಸಿಟಿ ಬಡಾವಣೆಯ ಅಧ್ಯಕ್ಷ ಹನುಮಂತೇಗೌಡ, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಖಜಾಂಚಿ ಬಸವರಾಜ್, ಸದಸ್ಯ ಶಂಕರರೆಡ್ಡಿ ಇತರರಿದ್ದರು.ಫೋಟೋ: 24 ಹೆಚ್‌ಎಸ್‌ಕೆ 1 ಮತ್ತು 2
ಹೊಸಕೋಟೆ ತಾಲೂಕಿನ ಕೊಳತೂರು ಗೇಟ್ ಬಳಿ ಎನ್‌ಆರ್‌ಐ ಡೆಲಾನಿಕ್ಸ್ ಸಿಟಿ ಬಡಾವಣೆ ನಿವಾಸಿಗಳಿಗೆ ರಸ್ತೆ ಇಲ್ಲದಂತೆ ಮಾಡಿರುವ ಯೋಜನಾ ಪ್ರಾಧಿಕಾರದ ವಿರುದ್ಧ ನಿವೇಶನದಾರರು ಪ್ರತಿಭಟನೆ ನಡೆಸಿದರು.