ಫೆಬ್ರವರಿ 10-11 ಚೆನ್ನೈ ಕರ್ನಾಟಕ ಸಂಘದ ಅಮೃತ ಮಹೋತ್ಸವ

| Published : Feb 09 2024, 01:46 AM IST / Updated: Feb 09 2024, 04:43 PM IST

ಸಾರಾಂಶ

ಫೆ.೧೧ರಂದು ಬೆಳಗ್ಗೆ ಚೆನ್ನೈ ಕನ್ನಡ ಸಂಘಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅಪರಾಹ್ನ ಪ್ರೋ. ಕೃಷ್ಣೇಗೌಡ, ಕೋಗಳಿ ಕೊಟ್ರೇಶ್, ಡಾ. ಬಸವರಾಜ ಬೆಣ್ಣಿ ಇವರಿಂದ ಹಾಸ್ಯೋತ್ಸವ ನಡೆಯಲಿರುವುದು.

ಕನ್ನಡಪ್ರಭ ವಾರ್ತೆ ಮಂಗಳೂರು

ಕರ್ನಾಟಕ ಸಂಘ ಚೆನ್ನೈ ಇದರ ಅಮೃತ ಮಹೋತ್ಸವ ಸಮಾರಂಭ ಫೆ.10 ಮತ್ತು 11ರಂದು ಚೆನ್ನೈನಲ್ಲಿ ನಡೆಯಲಿದೆ. ಫೆ.10ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ನೆರವೇರಲಿದ್ದು, ತಮಿಳುನಾಡು ಸರ್ಕಾರದ ಮಾಜಿ ಆರೋಗ್ಯ ಸಚಿವ, ಕನ್ನಡಿಗ ಡಾ.ಎಚ್‌.ವಿ. ಹಂದೆ ಅಧ್ಯಕ್ಷತೆ ವಹಿಸುವರು. 

ಕರ್ಣಾಟಕ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಈ ಸಮಾರಂಭದಲ್ಲಿ ‘ಅಮೃತಧಾರಾ’ ಎನ್ನುವ ಸ್ಮರಣ ಸಂಚಿಕೆಯನ್ನು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಲೋಕಾರ್ಪಣೆಗೊಳಿಸಲಿದ್ದಾರೆ. 

ಎಚ್. ಗಣೇಶ್ ನಾಯಕ್ ಹಾಗೂ ಪ್ರಭಾ ಮಂಜುನಾಥ್ ಭಾಗವಹಿಸಲಿದ್ದು, ಇದೇ ಸಂದರ್ಭ ಕರ್ನಾಟಕ ಸಂಘದ ಮಾಜಿ ದೀರ್ಘಾವಧಿ ಪದಾಧಿಕಾರಿಗಳು, ಮತ್ತು ಚೆನ್ನೈನ ಸೋದರ ಕನ್ನಡ ಸಂಘಗಳ ಅಧ್ಯಕ್ಷರನ್ನು ಸನ್ಮಾನಿಸಲಾಗುವುದು.

ಅಮೃತ ಮಹೋತ್ಸವದ ಅಂಗವಾಗಿ ಸಾಹಿತ್ಯ ಗೋಷ್ಠಿಯನ್ನು ಆಯೋಜಿಸಲಾಗಿದ್ದು ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ತಮಿಳ್ ಸೆಲ್ವಿ, ಜಾನಪದ ಸಂಶೋಧಕ ಮತ್ತು ಪತ್ರಕರ್ತ ಕೆ. ಎಲ್. ಕುಂಡಂತಾಯ ಹಾಗೂ ಬಿಎಸ್‌ಎನ್‌ಎಲ್‌ ಹಿರಿಯ ಅಧಿಕಾರಿ ಕೆ. ಎಲ್. ಶ್ರೀವತ್ಸ ಪಾಲ್ಗೊಳ್ಳುವರು. 

ಅಪರಾಹ್ನ ಶುಭಶ್ರೀ ತನಿಕಾಚಲಂ ಅವರ ‘ಶ್ರೀರಾಮ ಜಯಂ’ ಎನ್ನುವ ವಿಶಷ್ಟ ರೂಪದ ಸಂಗೀತ ಲಹರಿ, ಬಳಿಕ ಸಂಜೆ ಮಂಡ್ಯ ರಮೇಶ್ ನಿರ್ದೇಶನದ ‘ಚೋರ ಚರಣದಾಸ’ ನಾಟಕ ಪ್ರದರ್ಶನಗೊಳ್ಳಲಿದೆ.

ಫೆ.೧೧ರಂದು ಬೆಳಗ್ಗೆ ಚೆನ್ನೈ ಕನ್ನಡ ಸಂಘಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅಪರಾಹ್ನ ಪ್ರೋ. ಕೃಷ್ಣೇಗೌಡ, ಕೋಗಳಿ ಕೊಟ್ರೇಶ್, ಡಾ. ಬಸವರಾಜ ಬೆಣ್ಣಿ ಇವರಿಂದ ಹಾಸ್ಯೋತ್ಸವ ನಡೆಯಲಿರುವುದು. ಸಂಜೆ ಕರ್ನಾಟಕ ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

ಈ ಸಂದರ್ಭ ತಮಿಳುನಾಡು ಮತ್ತು ಚೆನ್ನೈ ಹೋಟೆಲ್ ಅಸೋಸಿಯೇಶನ್‌ನ ಅಧ್ಯಕ್ಷ ಎ. ರಾಮದಾಸ್ ರಾವ್ ಅವರಿಗೆ ಜೀವಮಾನ ಸಾಧನಾ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಡಾ. ಶ್ರೀ ಕೃಷ್ಣ ಭಟ್ ಅರ್ತಿಕಜೆ ಮತ್ತು ವಸಂತ ಹೆಗಡೆ ಉಪಸ್ಥಿತರಿರುವರು. ಬಳಿಕ ಬೆಂಗಳೂರಿನ ವಿಶ್ವೇಶ್ವರ ಭಟ್‌ ತಂಡದಿಂದ ‘ಸ್ವರಾಮೃತ’ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.