ಸಾರಾಂಶ
ಸಂಡೂರಿನಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ೨೦೦ನೇ ವಿಜಯೋತ್ಸವ ಹಾಗೂ ೨೪೫ನೇ ಜಯಂತ್ಯುತ್ಸವ ಕಾರ್ಯಕ್ರಮ.
ಕನ್ನಡಪ್ರಭ ವಾರ್ತೆ ಸಂಡೂರು
ಕಿತ್ತೂರು ರಾಣಿ ಚೆನ್ನಮ್ಮ ದೇಶದ ಪ್ರಥಮ ಮಹಿಳಾ ಸ್ವಾತಂತ್ರ್ಯಹೋರಾಟಗಾರರು. ಅವರ ದೇಶಪ್ರೇಮ, ಧೈರ್ಯ ನಮಗೆಲ್ಲ ಆದರ್ಶವಾಗಿದೆಎಂದು ಶಾಸಕ ಈ. ತುಕಾರಾಂ ಅಭಿಪ್ರಾಯಪಟ್ಟರು. ಪಟ್ಟಣದ ವೀರಶೈವ ಕಲ್ಯಾಣಮಂಟಪದಲ್ಲಿ ಭಾನುವಾರ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮನ ೨೦೦ನೇ ವಿಜಯೋತ್ಸವ ಹಾಗೂ ೨೪೫ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ಆದರ್ಶಗಳನ್ನು ಸ್ಮರಿಸಲು ಅವರ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಮಾನವ ಜನ್ಮ ಶ್ರೇಷ್ಠವಾದದ್ದು. ಮಾನವನಾಗಿ ಹುಟ್ಟಿದ ಮೇಲೆ ಈ ಭೂಮಿಯ, ಸಮಾಜದ ಋಣವನ್ನು ತೀರಿಸುವ ಕಾರ್ಯವನ್ನು ಮಾಡಬೇಕಿದೆ. ಉತ್ತಮ ಸಮಾಜ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಬೇಕಿದೆ. ಕ್ಷೇತ್ರದಲ್ಲಿ ಎಲ್‌ಕೆಜಿಯಿಂದ ಪಿಜಿವರೆಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಡಿಸೆಂಬರ್ ಒಳಗೆ ಕ್ಷೇತ್ರದಲ್ಲಿರುವ ಎಲ್ಲ ೨೦೦ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ರೂಪಿಸಲಾಗುವುದು ಎಂದರು. ಶಿಕ್ಷಕ ಜಿ.ಎಂ. ಪ್ರದೀಪ್ ಉಪನ್ಯಾಸ ನೀಡಿ, ಕಿತ್ತೂರು ರಾಣಿ ಚೆನ್ನಮ್ಮ ಸ್ವಾಭಿಮಾನದ ಪ್ರತೀಕ. ಅವರು ದೇಶದಲ್ಲಿ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಿದರು. ಬ್ರಿಟೀಷರಿಗೆ ಸೋಲಿನ ರುಚಿಯನ್ನು ತೋರಿಸಿದರು. ಕಿತ್ತೂರು ಉತ್ಸವ ರಾಜ್ಯ ಮಟ್ಟದ ಉತ್ಸವವಾಗಬೇಕು. ಕಿತ್ತೂರಿನಲ್ಲಿರುವ ಕೋಟೆ, ಅರಮನೆ, ಸ್ಮಾರಕಗಳು ಶಿಥಿಲಾವಾಗುತ್ತಿವೆ. ಅವುಗಳನ್ನು ಸಂರಕ್ಷಿಸುವ ಅಗತ್ಯವಿದೆ. ಅವರ ಖಡ್ಗ ಲಂಡನ್‌ನ ಮ್ಯೂಸಿಯಂನಲ್ಲಿದ್ದು, ಅದನ್ನು ದೇಶಕ್ಕೆ ಮರಳಿ ತರುವ ಕಾರ್ಯವಾಗಬೇಕಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ಪ್ರಭು ಸ್ವಾಮೀಜಿ ಮಾತನಾಡಿ, ನಾಡು, ನುಡಿ ಹಾಗೂ ಸ್ವಾತಂತ್ರ್ಯಕ್ಕೆ ಲಿಂಗಾಯತ ರಾಜ ಮನೆತನಗಳು ದೊಡ್ಡ ಕೊಡುಗೆಯನ್ನು ನೀಡಿವೆ. ಕಿತ್ತೂರು, ಕೆಳದಿ ಮುಂತಾದ ರಾಜಮನೆತನಗಳ ಸ್ಮಾರಕಗಳನ್ನು ಸಂರಕ್ಷಿಸಬೇಕಿದೆ. ಚೆನ್ನಮ್ಮನ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳುವ ಅಗತ್ಯವಿದೆ ಎಂದರು. ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಪ್ಪಕಾನ್ ಕುಮಾರಸ್ವಾಮಿ, ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಪಿ. ರವಿಕುಮಾರ್ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಯಶವಂತನಗರದ ಗಂಗಾಧರ ಸ್ವಾಮೀಜಿ ಆಶೀರ್ವಚನ ನೀಡಿದರು. ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಘಟಕದ ನಿಕಟಪೂರ್ವ ಅಧ್ಯಕ್ಷ ಬಿ. ನಾಗನಗೌಡ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘದ ತಾಲೂಕು ಘಟಕದ ಅಧ್ಯಕ್ಷ ರಮೇಶ್ ಗಡಾದ್ ಅಧ್ಯಕ್ಷತೆಯನ್ನು ವಹಿಸಿದ್ದರು.ಆರಂಭದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕುಂಭ, ಕಳಸಾರತಿ, ವಾದ್ಯಮೇಳಗಳೊಂದಿಗೆ ಭವ್ಯವಾಗಿ ಮೆರವಣಿಗೆ ಮಾಡಲಾಯಿತು. ಯೋಗಪಟುಗಳು ಪ್ರಾರ್ಥನ ಗೀತೆಗೆ ಯೋಗದ ಸ್ಪರ್ಶವನ್ನು ನೀಡಿದರು. ಕೆ.ಬಿ. ಪ್ರಕಾಶ್ ಸ್ವಾಗತಿಸಿದರು. ಬಣಕಾರ್ ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು. ಪಂಚಮಸಾಲಿ ಸಂಘದ ತಾಲೂಕು ಘಟಕದ ಗೌರವಾಧ್ಯಕ್ಷ ಮೇಲುಸೀಮೆ ಶಂಕ್ರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಕೆ.ಜಿ. ಅರುಂಧತಿ, ಮುಖಂಡರಾದ ಗಡಂಬ್ಲಿ ಚೆನ್ನಪ್ಪ, ಗುಡೇಕೋಟೆ ನಾಗರಾಜ, ಜ್ಯೋತಿ ಗುಡೇಕೋಟೆ, ನೀಲಾಂಬಿಕೆ ಇತರರು ಇದ್ದರು.