ಸಾರಾಂಶ
ಕಂಪ್ಲಿ: ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವೀರ ರಾಣಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಬುಧವಾರ ಆಚರಿಸಲಾಯಿತು.
ಲಿಂಗಾಯತ ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಎಸ್. ಚಂದ್ರಶೇಖರ ಗೌಡ ಮಾತನಾಡಿ, ಭಾರತ ದೇಶದ ವೀರಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿದವರು ಸ್ವಾತಂತ್ರ್ಯ, ಸ್ವಾಭಿಮಾನಗಳ ಸಾಕಾರಮೂರ್ತಿ ಕಿತ್ತೂರಿನ ರಾಣಿ ಚೆನ್ನಮ್ಮ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ಪುಟ್ಟ ರಾಜ್ಯದ ಸ್ವಾತಂತ್ರ್ಯ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಸೆಟೆದು ನಿಂತು ನಡೆಸಿದ ಹೋರಾಟ, ಅಲ್ಲಿ ತೋರಿಸಿದ ಧೈರ್ಯ, ಸಾಹಸ, ಕೆಚ್ಚುಗಳು ಚೆನ್ನಮ್ಮನನ್ನು ಅಜರಾಮರವಾದ ಕೀರ್ತಿ ಶಿಖರಕ್ಕೇರಿಸಿವೆ. ಚೆನ್ನಮ್ಮನಿಂದ ಕಿತ್ತೂರು ಪ್ರಸಿದ್ಧವಾಗಿದೆ ಎಂದರು. ಇನ್ನು ಇಲ್ಲಿನ ಹೊಸಪೇಟೆ ಬೈಪಾಸ್ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ಕಿತ್ತೂರು ರಾಣಿ ಚೆನ್ನಮ್ಮ ವೃತ ಹಾಗೂ ಮೂರ್ತಿಯನ್ನು ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.ಶಿಕ್ಷಕರಾದ ಡಾ.ಬಿ.ಸುನಿಲ್ ಮಾತನಾಡಿ ಭಾರತ ದೇಶದ ಸ್ವಾತಂತ್ರ್ಯ ಸಂಗ್ರಾಮದ 1857ರ ಸಿಪಾಯಿ ದಂಗೆಯೇ ಮೊದಲನೆಯ ದಂಗೆ ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಅದಕ್ಕೂ ಮುಂಚೆ ಅಂದರೆ 1824 ರಲ್ಲಿಯೇ ಕಿತ್ತೂರ ರಾಣಿ ಚನ್ನಮ್ಮ ತನ್ನ ಚಿಕ್ಕ ಸೈನ್ಯದ ಜತೆಗೂಡಿ ದೈತ್ಯ ಬ್ರಿಟಿಷ್ ಸೈನ್ಯದ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಕೆಂಪು ಮೋತಿ ಪಿರಂಗಿಗಳನ್ನು ಹೊಡೆದುರುಳಿಸಿ ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕಿಯಾಗಿ ಮಿಂಚಿದರು. ಕಿತ್ತೂರ ಮಹಾಸಂಸ್ಥಾನದ ಮಹಾರಾಣಿ ಪಟ್ಟ ವಹಿಸಿಕೊಂಡು ಕಿತ್ತೂರು ನಾಡನ್ನು ಸಮೃದ್ಧ ನಾಡಾಗಿ ಬೆಳೆಸಿದ ಕೀರ್ತಿ ರಾಣಿ ಚೆನ್ನಮ್ಮಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಶಿವರಾಜ್ ಶಿವಪುರ ಮಾತನಾಡಿ, ವೀರ ರಾಣಿ ಕಿತ್ತೂರು ರಾಣಿ ಚೆನ್ನಮ್ಮ ಅವರ 200ನೇ ವರ್ಷದ ಐತಿಹಾಸಿಕ ವಿಜಯದ ಜ್ಞಾಪಕಾರ್ಥವಾಗಿ ಕೇಂದ್ರ ಸರ್ಕಾರ ರಾಣಿ ಚೆನ್ನಮ್ಮನ ಅಂಚೆ ಚೀಟಿ ಬಿಡುಗಡೆ ಮಾಡಿದೆ. ರಾಣಿ ಚೆನ್ನಮ್ಮನ ವೀರ ಪರಾಕ್ರಮವನ್ನು ಅವರ ದಿಟ್ಟತನವನ್ನು ಇಂದಿನ ಪೀಳಿಗೆಗೆ ತಿಳಿಸುವ ಕಾರ್ಯ ಮಾಡಬೇಕಿದೆ ಎಂದರು.ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ರೇಣುಕಪ್ಪ, ಉಪ ತಹಸೀಲ್ದಾರ್ ರವೀಂದ್ರ ಕುಮಾರ್, ವೀರಶೈವ ಸಮಾಜದ ಹಿರಿಯ ಮುಖಂಡರಾದ ಪಿ. ಮೂಕಯ್ಯ ಸ್ವಾಮಿ, ಕೆ.ಎಂ.ಹೇಮಯ್ಯಸ್ವಾಮಿ, ಲಿಂಗಾಯತ ಪಂಚಮಶಾಲಿ ಸಮಾಜದ ತಾಲೂಕು ಉಪಾಧ್ಯಕ್ಷ ಬಳೆ ಮಲ್ಲಿಕಾರ್ಜುನ, ಸಮಾಜದ ಪ್ರಮುಖರಾದ ಬಿ.ವಿರೂಪಾಕ್ಷಿ ಗೌಡ, ರೇಣುಕಾ ಗೌಡ, ನಾಗರಾಜ್ ಗೌಡ, ಸಿದ್ದಲಿಂಗ ಗೌಡ, ಡಿ.ವೀರನಗೌಡ, ರಾಜ ಸ್ವಾಮಿ ಬೆಳಗೋಡ್, ಕಲ್ಯಾಣಿ ದೊಡ್ಡಬಸಪ್ಪ, ಕ್ಯಾಂಟೀನ್ ಚಂದ್ರಣ್ಣ ಸೇರಿ ಅನೇಕರಿದ್ದರು.