ಆಲದಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಚೆಕ್ ವಿತರಣೆ

| Published : Sep 12 2025, 12:06 AM IST

ಸಾರಾಂಶ

ನಾಲ್ಕು ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಯಾವುದೇ ಸಮಸ್ಯೆ ಬಂದರೂ ನಿಮ್ಮ ಜತೆಯಲ್ಲಿ ನಾನಿದ್ದೇನೆ ಎಂದು ಕುಟುಂಬ ಸದಸ್ಯರಿಗೆ ಶಾಸಕ ಶಿವರಾಮ ಹೆಬ್ಬಾರ ಸಾಂತ್ವನ ಹೇಳಿದರು.

ಯಲ್ಲಾಪುರ: ಇತ್ತೀಚೆಗೆ ತಾಲೂಕಿನ ಮದನೂರು ಗ್ರಾಪಂ ವ್ಯಾಪ್ತಿಯ ಡೊಮಗೇರೆಯಲ್ಲಿ ಬೃಹತ್‌ ಆಲದಮರ ಬಿದ್ದು ಗರ್ಭಿಣಿ ಸಹಿತ ಇಬ್ಬರು ಮೃತಪಟ್ಟಿದ್ದರು. ದುರ್ಘಟನೆ ಸಂಭವಿಸಿದಂತೆ ಗುರುವಾರ ಶಾಸಕ ಶಿವರಾಮ ಹೆಬ್ಬಾರ ೫ ತಿಂಗಳ ಗರ್ಭಿಣಿ ಸಾವಿತ್ರಿ ಬಾಬು ಖರಾತ್, ಸ್ವಾತಿ ಬಾಬು ಖರಾತ್ ಅವರ ಮನೆಗಳಿಗೆ ಹೋಗಿ, ಕುಟುಂಬ ಸದಸ್ಯರಿಗೆ ತಲಾ ₹೫ ಲಕ್ಷ ಚೆಕ್‌ ಹಸ್ತಾಂತರಿಸಿದರು.

ತೀವ್ರ ಪೆಟ್ಟು ತಗುಲಿ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳು (ಶ್ರಾವಣಿ ಬಾಬು ಖರಾತ್ ಮತ್ತು ಘಾಟು ಲಕ್ಕು ಕೊಕರೆ) ಮನೆಗೆ ತೆರಳಿ ವೈಯಕ್ತಿಕವಾಗಿ ನಾಲ್ಕು ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಯಾವುದೇ ಸಮಸ್ಯೆ ಬಂದರೂ ನಿಮ್ಮ ಜತೆಯಲ್ಲಿ ನಾನಿದ್ದೇನೆ ಎಂದು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಅಂಗನವಾಡಿ ಮಂಜೂರಾತಿಗೆ ಒತ್ತಾಯ: ಮೃತಪಟ್ಟ ಸಾವಿತ್ರಿಗೆ ೨ ಗಂಡು, ೨ ಹೆಣ್ಣು ಮಕ್ಕಳು ಇದ್ದರು. ಈ ಮಕ್ಕಳು ಪ್ರತಿದಿನವೂ ತಮ್ಮ ಮನೆಯಿಂದ ಡೊಮಗೆರೆಯಲ್ಲಿರುವ ಅಂಗನವಾಡಿ ಶಾಲೆಗೆ ಒಂದೂವರೆ ಕಿ.ಮೀ. ನಡೆದುಕೊಂಡೇ ಹೋಗಿ ಬರುತ್ತಿದ್ದರು. ಸುಮಾರು ೨೫ಕ್ಕೂ ಹೆಚ್ಚಿನ ಮನೆಗಳು ಈ ಗೌಳಿವಾಡದಲ್ಲಿವೆ. ಇಲ್ಲಿ ಅಂಗನವಾಡಿ ತೀರಾ ಅಗತ್ಯವಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಶಾಸಕರ ಬಳಿ ವಿನಂತಿಸಿದರು.

ಶಿರಸಿಯ ಸಹಾಯಕ ಆಯುಕ್ತೆ ಕಾವ್ಯಾರಾಣಿ, ಉದ್ಯಮಿ ವಿವೇಕ ಹೆಬ್ಬಾರ, ಸಾಮಾಜಿಕ ಕಾರ್ಯಕರ್ತರಾದ ಎನ್.ಕೆ.ಭಟ್ಟ ಮೆಣಸುಪಾಲ, ವಿಜಯ ಮಿರಾಶಿ, ವಿ.ಎಸ್.ಭಟ್ಟ, ರವಿ ಭಟ್ಟ, ಪ್ರಶಾಂತ ಸಭಾಹಿತ, ಮಾಕು ಕೊಕ್ರೆ ಸೇರಿದಂತೆ ನೂರಾರು ಜನ ಇದ್ದರು.