ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಹಾಗೂ ಸೇವೆಯಲ್ಲಿರುವ ಶಾಲಾ ಶಿಕ್ಷಕರನ್ನು ಗೌರವಿಸಲಾಯಿತು. ಈ ಸಂದರ್ಭ ಶಿಕ್ಷಕಿ ಕೂಡಕಂಡಿ ಸೋನಿ ಸುದೀಪ್ ಅವರು ಮಾತನಾಡಿ ಶಿಸ್ತಿನ ಸಿಪಾಯಿ ಕ್ಷಮಯಾಧರಿತ್ರಿ ಕರ್ಮವನ್ನು ಎದುರಿಸುವವನೇ ಶಿಕ್ಷಕ. ಗುರುತರ ಹೊಣೆಯನ್ನು ಹೊತ್ತು ರೂವಾರಿಯಾಗಿ ನಡೆಯುವವರನ್ನು ಶಿಕ್ಷಕರು ಎನ್ನಬಹುದು. ಹಾಗೆಯೇ ಜೀವ ಕೊಟ್ಟ ತಾಯಿ ಮೊದಲ ಗುರು ಎಂದೆನಿಸಿ ಕೊಂಡು ಜೀವನದ ದಾರಿ ತೋರಿದರೆ 4 ಗೋಡೆಯ ಕೋಣೆಯೊಳಗೆ ಮಗುವಿನ ಜೀವನ ರೂಪಿಸುವವರು ಶಿಕ್ಷಕರು ಆದ್ದರಿಂದ ಪ್ರತಿಯೊಬ್ಬರ ಜೀವನದಲ್ಲೂ ಶಿಕ್ಷಕರು ಪ್ರಾತಃ ಸ್ಮರಣೀ ಯರು ಎಂದರು.
ಮತ್ತೊಬ್ಬ ಶಿಕ್ಷಕಿ ಕುದುಪಜೆ ಬೃಂದಾ ಕವನ ಮಾತನಾಡಿ, ಕಲಿಕೆ ಎಂಬುದು ನಿರಂತರ ಶಿಕ್ಷಕರ ದಿನಾಚರಣೆ ಎಂಬುದು ಒಂದು ದಿನದ ಆಚರಣೆಗೆ ಸೀಮಿತವಾಗಬಾರದು ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬರಿಗೂ ಅವರ ಜೀವನದಲ್ಲಿ ಗುರುಗಳಾಗಿರುತ್ತಾರೆ ಎಂದರು.ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ತುಳಸಿ ಮೋಹನ್ ಮಾತನಾಡಿ ಮನೆಯೇ ಮೊದಲ ಶಾಲೆ ತಾಯಿ ಮೊದಲ ಗುರು ಆದರೂ ನಮ್ಮ ಜೀವನ ಹಾಗೂ ವ್ಯವಹಾರಿಕ ವಿಚಾರಗಳಿಗೆ ಮನೆಯ ಪಾಠ ಸಾಲದು ಆದ್ದರಿಂದ ವಿಚಾರವಂತ ಗುರು ಗಳಿಂದ ಶಿಕ್ಷಣ ಪಡೆಯಬೇಕು. ಗುರು ಎಂದರೆ ಗುರಿ ತೋರುವವರು, ಮಾರ್ಗದರ್ಶಕರು, ಜೀವನ ರೂಪಿಸುವ ಪಾಠ ಹೇಳಿಕೊಡುವವರು. ಹೆತ್ತವರು ಸಮಾಜ ಹಾಗೂ ಶಿಕ್ಷಕರ ಸಂಬಂಧ ಬೆಸೆಯುವ ಸ್ಥಳವೇ ಶಿಕ್ಷಣ ಸಂಸ್ಥೆ. ಗುರು ಎಂದರೆ ಗುರುತ್ವಾಕರ್ಷಣೆ ಶಕ್ತಿ ಇರುವ ವ್ಯಕ್ತಿ. ಮನೆಯಲ್ಲಿ ಅಮ್ಮಾ ಎಂದರೆ ಓಡಿ ಬರುವ ಮಕ್ಕಳು ಶಾಲೆ ಎಂದರೆ ಓಡೋಡಿ ಬರುವಂತೆ ಸೆಳೆಯುವ ಶಿಕ್ಷಕರು ಶಾಲೆಯಲ್ಲಿರಬೇಕು ಎಂದರು.
ನಿವೃತ್ತ ಶಿಕ್ಷಕಿ ಅಣ್ಣೆಚ್ಚಿ ಬೋಜಮ್ಮ ಕುಶಾಲಪ್ಪ, ಶಿಕ್ಷಕಿ, ಕುದುಪಜೆ ಬೃಂದಾ ಕವನ್, ಬಾಡನ ಡೈಸಿ ಲೋಕೇಶ್, ಕೂಡಕಂಡಿ ಸೋನಿ ಸುದೀಪ್ ಇವರನ್ನು ಒಕ್ಕೂಟದ ವತಿಯಿಂದ ಗೌರವಿಸಲಾಯಿತು. ಕರ್ನಾಟಕ ಬೆಸ್ಟ್ ಡ್ಯಾನ್ಸರ್ ಸೀಸನ್ 1 ಇದರಲ್ಲಿ ನಾಲ್ಕನೇ ಸ್ಥಾನ ಪಡೆದ ಮಡಿಕೇರಿ ಡಾನ್ಸ್ ಲ್ಯಾಬ್ ನೃತ್ಯ ಶಾಲೆಯ ವಿದ್ಯಾರ್ಥಿನಿ ಪೊಡನೋಳನ ಸಿಂಚನ ಗಿರೀಶ್ ಅವರ ನೃತ್ಯ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಒಕ್ಕೂಟದ ಸದಸ್ಯರು ಗುರುವಂದನಾ ಗೀತೆ ಹಾಡಿದರು.ಕಾರ್ಯಕ್ರಮದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಹೊಸೊಕ್ಲು ಲತಾ ಮೊಣ್ಣಪ್ಪ, ಕಾರ್ಯದರ್ಶಿ ಕೇಕಡ ಪೂಜಾ ನಾಗೇಂದ್ರ, ಕೋಶಾಧಿಕಾರಿ ಕೊಡಪಾಲು ತೀರ್ಥ ಗಣಪತಿ ಸಂಘಟನಾ ಕಾರ್ಯದರ್ಶಿ ಬೈಮನ ಜ್ಯೋತಿ ತಿಮ್ಮಯ್ಯ ಸೇರಿದಂತೆ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು. ಅಣ್ಣೆಚ್ಚಿ ಬೋಜಮ್ಮ ಕುಶಾಲಪ್ಪ ಪ್ರಾರ್ಥಿಸಿ, ಬೈಚನ ಸ್ವಾತಿ ಮಂದಪ್ಪ ಸ್ವಾಗತಿಸಿ ಕಾಳೇರಮ್ಮನ ರಶಿ ಅಶೋಕ್ ಕಾರ್ಯಕ್ರಮ ನಿರೂಪಿಸಿ ಕಡ್ಡದ ಸ್ಮಿತಾ ಜೀವನ್ ವಂದಿಸಿದರು.