ಸಾರಾಂಶ
ಈಗ ಪ್ರತಿಯೊಂದು ಕ್ರೀಡೆಗೂ ಸಮಾಜದಲ್ಲಿ ಮಾತ್ರವಲ್ಲದೇ ಪೋಷಕರಿಂದಲೂ ಮಕ್ಕಳಿಗೆ ಉತ್ತಮ ಸಹಕಾರ, ಬೆಂಬಲ, ಪ್ರೋತ್ಸಾಹ ದೊರೆಯುತ್ತಿದ್ದು, ಎಷ್ಟೇ ದೂರವಾದರೂ ಪೋಷಕರು ತಮ್ಮ ಮಕ್ಕಳನ್ನು ಸ್ಪರ್ಧೆಗೆ ಕರೆ ತರುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ ಚೆಸ್ ಒಂದು ಏಕಾಗ್ರತೆಯ ಆಟವಾಗಿದ್ದು, ತಾಳ್ಮೆ ಬಹಳ ಮುಖ್ಯ ಎಂದು ನಗರದ ಹಿರಿಯ ಸಿವಿಲ್ ನ್ಯಾಯಾಧೀಶ ಮಹಮ್ಮದ್ ರೋಷನ್ ಷಾ ತಿಳಿಸಿದರು.
ನಗರದ ದಿ ಕ್ರೆಸೆಂಟ್ ಪ್ರೌಢಶಾಲೆಯಲ್ಲಿ ಪಾಂಚಜನ್ಯ ಅಸೋಸಿಯೇಷನ್ , ಚಾಣಕ್ಯ ಚೆಸ್ ಅಕಾಡಮಿ ಹಾಗೂ ದಿ ಕ್ರೆಸೆಂಟ್ ಪ್ರೌಢ ಶಾಲೆ ಶಿಡ್ಲಘಟ್ಟ ಸಹಯೋಗದಲ್ಲಿ 2ನೇ ಬಾರಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಚೆಸ್ ಚಾಂಪಿಯನ್ಶಿಪ್ ಟೂರ್ನಮೆಂಟ್ ಉದ್ಘಾಟಿಸಿ ಅವರು ಮಾತನಾಡಿದರು.ಈಗಿನ ಕಾಲಕ್ಕೆ ಹೋಲಿಸಿಕೊಂಡರೆ ಹಿಂದಿನ ವರ್ಷಗಳಲ್ಲಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಮಾತ್ರವಲ್ಲ ಅವಕಾಶಗಳು ಕೂಡ ಕಡಿಮೆ ಇದ್ದು, ಪೋಷಕರಿಂದಲೂ ಹೆಚ್ಚು ಬೆಂಬಲ ಸಿಗುತ್ತಿರಲಿಲ್ಲ. ಆದರೆ ಈಗ ಪ್ರತಿಯೊಂದು ಕ್ರೀಡೆಗೂ ಸಮಾಜದಲ್ಲಿ ಮಾತ್ರವಲ್ಲದೇ ಪೋಷಕರಿಂದಲೂ ಮಕ್ಕಳಿಗೆ ಉತ್ತಮ ಸಹಕಾರ, ಬೆಂಬಲ, ಪ್ರೋತ್ಸಾಹ ದೊರೆಯುತ್ತಿದ್ದು, ಎಷ್ಟೇ ದೂರವಾದರೂ ಪೋಷಕರು ತಮ್ಮ ಮಕ್ಕಳನ್ನು ಸ್ಪರ್ಧೆಗೆ ಕರೆ ತರುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸೋಲು, ಗೆಲುವುಗಿಂತ ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಬಹಳ ಮುಖ್ಯವೆಂದು ಅವರು ಹೇಳುತ್ತಾ, ಯಾವುದೇ ಕ್ರೀಡೆಯನ್ನು ಸಂತೋಷದಿಂದ ಆಡಿದರೆ ಯಶಸ್ಸು ಸಿಗುತ್ತದೆ ಎಂದರು.
ಮೂಳೆತಜ್ಞ ಡಾ.ಅಜಿತ್, ನರರೋಗ ತಜ್ಞ ಡಾ.ಅಭಿಷೇಕ್, ಚೆಸ್ ಅಸೋಸಿಯೇಷನ್ ರಾಜ್ಯ ಜಂಟಿ ಕಾರ್ಯದರ್ಶಿ ಸುರೇಶ್ ಬಾಬು , ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಶೇಖರ್ , ಉಪಾಧ್ಯಕ್ಷ ಮಹಮ್ಮದ್ ತಮೀಮ್ ಅನ್ಸಾರಿ , ಕಾರ್ಯದರ್ಶಿ ಟಿ.ಟಿ. ನರಸಿಂಹಪ್ಪ, ಖಜಾಂಚಿ ಅಶೋಕ್, ಮಾಜಿ ಹಾಕಿ ತರಬೇತುದಾರ ಮುಸ್ತಾಕ್, ಡಾಲ್ಫಿನ್ ವಿದ್ಯಾಸಂಸ್ಥೆ ಅಧ್ಯಕ್ಷ ಎ.ನಾಗರಾಜ್ ಸೇರಿ ಪೋಷಕರು ಹಾಜರಿದ್ದು ಕ್ರೀಡೆಯಲ್ಲಿ ಭಾಗವಹಿಸಿದ್ದ ಮಕ್ಕಳನ್ನು ಹುರಿದುಂಬಿಸಿದರು.