ನಾಳೆ ಬೆಣ್ಣೆಹಣ್ಣು ಕ್ಷೇತ್ರೋತ್ಸವ, ವೈವಿಧ್ಯತೆ ಮೇಳ

| Published : Jun 14 2024, 01:10 AM IST

ಸಾರಾಂಶ

ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಚೆಟ್ಟಳ್ಳಿಯಲ್ಲಿ ಶನಿವಾರ ಬೆಣ್ಣೆಹಣ್ಣಿನ ಕ್ಷೇತ್ರೋತ್ಸವ ಮತ್ತು ವೈವಿಧ್ಯತೆಯ ಮೇಳ ಆಯೋಜಿಸಲಾಗಿದ್ದು, ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಬೆಣ್ಣೆಹಣ್ಣಿನ ವೈವಿಧ್ಯತೆ, ವೈಜ್ಞಾನಿಕ ಕೃಷಿ ಮತ್ತು ಬೆಳೆ ಸಂರಕ್ಷಣೆ ಬಗ್ಗೆ ಚರ್ಚಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಾರ್ಯಕ್ರಮವು ವಿವಿಧ ಬೆಣ್ಣೆಹಣ್ಣಿನ ತಳಿಗಳ ಪ್ರದರ್ಶನ, ಕ್ಷೇತ್ರ ಭೇಟಿ ಮತ್ತು ರೈತ-ವಿಜ್ಞಾನಿಗಳ ಸಂವಾದ ಒಳಗೊಂಡಿದೆ. ನವದೆಹಲಿ ಭಾ.ಕೃ.ಅನು.ಪ. ಮಹಾ ನಿರ್ದೇಶಕರು (ತೋಟಗಾರಿಕೆ) ಡಾ. ಎಸ್.ಕೆ. ಸಿಂಗ್, ಬೆಂಗಳೂರು ಭಾರತೀಯ ತೋಟಗಾರಿಕಾ ಸಂಶೋಧನ ಸಂಸ್ಥೆಯ ನಿರ್ದೇಶಕರು, ಭಾರತ ಸರ್ಕಾರದ ತೋಟಗಾರಿಕೆ ಸಮಗ್ರ ಅಭಿವೃದ್ಧಿಯ ಮಿಷನ್ ನಿರ್ದೇಶಕ ಕೆ.ಎನ್. ವರ್ಮ, ಪ್ರಧಾನ ವಿಜ್ಞಾನಿಗಳು ಮತ್ತು ಮುಖ್ಯಸ್ಥರು, ಹಣ್ಣು ಬೆಳೆಗಳ ವಿಭಾಗ ಹಾಗೂ ವಿವಿಧ ವಿಷಯ ತಜ್ಞರುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಹಣ್ಣಿನ ವಿಜ್ಞಾನಿ ಡಾ. ಬಿ.ಎಂ. ಮುರುಳೀಧರ್ ಅವರು ಭಾರತದಲ್ಲಿ ಬೆಣ್ಣೆ ಹಣ್ಣಿನ ಕೃಷಿ, ನಿರೀಕ್ಷೆಗಳು ಹಾಗೂ ಸಮಸ್ಯೆಗಳ ಬಗ್ಗೆ ವಿಷಯ ಮಂಡಿಸಲಿದ್ದಾರೆ. ಕೀಟಶಾಸ್ತ್ರ ವಿಭಾಗದ ವಿಜ್ಞಾನಿ ಡಾ. ರಾಣಿ ಬೆಣ್ಣೆ ಹಣ್ಣಿನಲ್ಲಿ ಪ್ರಮುಖ ಕೀಟ ಮತ್ತು ರೋಗಗಳು ಹಾಗೂ ಅವುಗಳ ನಿರ್ವಹಣೆ ಬಗ್ಗೆ ವಿಷಯ ಮಂಡಿಸಲಿದ್ದಾರೆ.

ಬೆಣ್ಣೆ ಹಣ್ಣಿನ ಮಾದರಿಯ ಪ್ರದರ್ಶನ ನಡೆಯಲಿದ್ದು ಪ್ರಥಮ 3 ಸಾವಿರ, ದ್ವಿತೀಯ 2 ಸಾವಿರ ಹಾಗೂ ತೃತೀಯ 1 ಸಾವಿರ ರು. ನಗದು ಬಹುಮಾನ ನೀಡಲಾಗುತ್ತಿದೆ. ಬೆಣ್ಣೆ ಹಣ್ಣಿನಿಂದ ವಿವಿಧ ಖಾದ್ಯಗಳನ್ನು ತಯಾರು ಮಾಡುವ ಸ್ಪರ್ಧೆ ಕೂಡ ಆಯೋಜಿಸಲಾಗಿದ್ದು, ಪ್ರಥಮ 3 ಸಾವಿರ, ದ್ವಿತೀಯ 2 ಸಾವಿರ ಹಾಗೂ ತೃತೀಯ 1 ಸಾವಿರ ರು. ನಗದು ಬಹುಮಾನ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಮುಖ್ಯಸ್ಥರು ಸಿ.ಎಚ್.ಇ.ಎಸ್ ಚೆಟ್ಟಳ್ಳಿ 7892882351, 9005847283 ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.