ಚೆಟ್ಟಳ್ಳಿ: ವಿವಾಹಿತ ಮಹಿಳೆಯರ ಕ್ರಿಕೆಟ್ ಸಂಭ್ರಮ

| Published : Nov 06 2023, 12:45 AM IST / Updated: Nov 06 2023, 12:46 AM IST

ಚೆಟ್ಟಳ್ಳಿ: ವಿವಾಹಿತ ಮಹಿಳೆಯರ ಕ್ರಿಕೆಟ್ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಚೆಟ್ಟಳ್ಳಿಯ ಅವರ್ ಕ್ಲಬ್ ವತಿಯಿಂದ 2ನೇ ವರ್ಷ ವಿವಾಹಿತ ಮಹಿಳೆಯರ ಮುಕ್ತ ನಾಕೌಟ್ ಮಾದರಿಯ ಕ್ರಿಕೆಟ್ ಪಂದ್ಯಾಟ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ನಡೆಯುವ ಮೂಲಕ ಮೈದಾನದಲ್ಲಿ ಮಹಿಳೆಯ ಓಡಾಟವೇ ಎಲ್ಲರ ಗಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೌಟುಂಬಿಕ ಜಂಜಾಟ, ನಿತ್ಯದ ಕೆಲಸ ಕಾರ್ಯ ಬದಿಗೊತ್ತಿ ಸಮವಸ್ತ್ರ ತೊಟ್ಟ ಮಹಿಳೆಯರು ಪುರುಷರಿಗಿಂತ ನಾವೇನು ಕಡಿಮೆ ಇಲ್ಲ ಎಂಬಂತೆ‌ ಬ್ಯಾಟ್ ಹಿಡಿದು ಸಿಕ್ಸರ್‌, ಫೋರ್ ಬಾರಿಸಿ ಸಂಭ್ರಮಿಸಿದರು.

ಮಹಿಳೆಯರು ತಯಾರಿಸಿದ ವಿವಿಧ ಬಗೆಯ‌‌ ಖಾದ್ಯಗಳ ಸ್ಟಾಲ್ ಗಳು, ಚಿಯರ್ ಗರ್ಲ್ಸ್ ತಂಡದ ಮನಮೋಹಕ‌ ನೃತ್ಯದ ದೃಶ್ಯ ಚೆಟ್ಟಳ್ಳಿ ಪ್ರೌಢಶಾಲಾ‌ ಮೈದಾನದಲ್ಲಿ ಸಂಭ್ರಮದ‌‌‌‌ ಕಳೆಯಾಗಿತ್ತು.

ಚೆಟ್ಟಳ್ಳಿಯ ಅವರ್ ಕ್ಲಬ್ ವತಿಯಿಂದ 2ನೇ ವರ್ಷ ವಿವಾಹಿತ ಮಹಿಳೆಯರ ಮುಕ್ತ ನಾಕೌಟ್ ಮಾದರಿಯ ಕ್ರಿಕೆಟ್ ಪಂದ್ಯಾಟ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ನಡೆಯುವ ಮೂಲಕ ಮೈದಾನದಲ್ಲಿ ಮಹಿಳೆಯ ಓಡಾಟವೇ ಎಲ್ಲರ ಗಮನ ಸೆಳೆಯಿತು. 6 ಓವರುಗಳ ಪಂದ್ಯಾವಳಿಯಲ್ಲಿ 25 ವರ್ಷ ಮೇಲ್ಪಟ್ಟ ಒಟ್ಟು 15 ವಿವಾಹಿತ ಮಹಿಳಾ ತಂಡಗಳು ಭಾಗವಹಿಸಿದ್ದವು. ಅಂತಿಮ ಸುತ್ತಿಗೆ ಪ್ರವೇಶ ಪಡೆದ ಟೀಂ ಮಾಲ್ದಾರೆ ತಂಡ ಪ್ರಥಮ ಹಾಗೂ ಟೀಂ ಮಾಸ್ಟರ್ ಬ್ಲಾಸ್ಟರ್ ತಂಡ ರನ್ನರ್ ಅಪ್ ಪಶಸ್ತಿ ಗಳಿಸಿತು.

ಫೈನಲ್ ಹಂತದಲ್ಲಿ ಟಾಸ್ ಗೆದ್ದಂತ ಮಾಸ್ಟರ್ ಬ್ಲಾಸ್ಟ್ ತಂಡ ಬ್ಯಾಟಿಗ್ ಆಯ್ಕೆ ಮಾಡಿ ನಿಗದಿತ ನಾಲ್ಕು ಓವರುಗಳಿಗೆ 23ರ ಗುರಿಯನ್ನು ನೀಡಿತ್ತು. ಈ ಅಲ್ಪಮೊತ್ತದ ಗುರಿಯನ್ನು ಬೆನ್ನತ್ತಿದ ಮಾಲ್ದಾರೆ ತಂಡ 2.3 ಎಸೆತಗಳಲ್ಲಿ ಗೆದ್ದು ಬೀಗಿತು. ಮೂರನೇ ಬಹುಮಾನಕ್ಕೆ ಸಂಭ್ರಮ ತಂಡದೊಂದಿಗೆ ಸೆಣಸಾಡಿದ ನೀಲೀ ಆಟ್ ಟೀ ಕೋಕೇರಿ ತಂಡ ಮೂರನೇ ಬಹುಮಾನ ಪಡೆಯಿತು.

ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ‌.ಕಾರ್ಯಪ್ಪ‌ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಮಂಡೆಪಂಡ ಡಾ. ಪುಷ್ಪಾಕುಟ್ಟಣ್ಣ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಸಮಾಜದಲ್ಲಿ ಬಹುಮುಖ ಪಾತ್ರವನ್ನು ವಹಿಸುತಿರುವ ಮಹಿಳೆಯ ಪಾತ್ರ ಗೌರವಿಸುವಂತದ್ದು. ಕುಟುಂಬಗಳ ನಡುವೆ ಬದುಕಟ್ಟಿಕೊಳ್ಳುತಿರುವ ವಿಶೇಷವಾಗಿ ವಿವಾಹಿತ ಮಹಿಳೆಯರಿಗೆ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ ಚೆಟ್ಟಳ್ಳಿಯ ಅವರ್ ಕ್ಲಬ್ ಕಾರ್ಯವನ್ನು ಶ್ಲಾಘಿಸಿದರು.

ಕ್ಲಬ್‌ನ ಅದ್ಯಕ್ಷೆ ಐಚೆಟ್ಟೀರ ಸುನಿತ‌ ಮಾಚಯ್ಯ‌ ಮಾತನಾಡಿ ಮಹಿಳೆಯರನ್ನು ಒಟ್ಟು ಸೇರಿಸಿ 2010ರಲ್ಲಿ ಚೆಟ್ಟಳ್ಳಿಯಲ್ಲಿ ಅವರ್ ಕ್ಲಬ್ ಆಯೋಜಿಸಲಾಗಿದೆ. ತಿಂಗಳಿಗೊಮ್ಮೆ ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಕಳೆದ ಬಾರಿ ಮೊದಲ ವರ್ಷದ ಮಹಿಳಾ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸಲಾಗಿದ್ದು ಉತ್ತಮ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ಈ ಬಾರಿ ಎರಡನೇ ವರ್ಷದ ವಿವಾಹಿತ ಮಹಿಳಾ ಕ್ರಿಕೆಟ್ ಪಂದ್ಯಾವಳಿ ನಡೆಸಲು ಸಾಧ್ಯವಾಯಿತು ಎಂದರು. ಉಪಾಧ್ಯಕ್ಷೆ ಮುಳ್ಳಂಡ ಶೋಭಾ ಚಂಗಪ್ಪ, ಕಾರ್ಯದರ್ಶಿ ಮನೆಪಂಡ ಅಂಜಲಿ, ಖಜಾಂಜಿ ಮುಳ್ಳಂಡ ಮಾಯಮ್ಮ ತಮ್ಮಯ್ಯ, ಮಾಜಿ ಅಧ್ಯಕ್ಷರಾದ ಕೊಂಗೇಟಿರ ದೇಚು‌ಮುದ್ದಯ್ಯ ವೇದಿಕೆಯಲ್ಲಿದ್ದರು. ಮೂಡೆರ ಧರಣಿ ಪ್ರಾರ್ಥಿಸಿದರು. ಕೊಂಗಂಡವಿಜಯ ಮುತ್ತಣ್ಣ ಅತಿಥಿಗಳನ್ನು ಪರಿಚಯಿಸಿದರು. ಕೊಂಗೇಟಿರ ವೀಣಾ ಅಪ್ಪಣ್ಣ ವಂದಿಸಿದರು. ಕೇಟೋಟಿರ ವೀಣಾ ಚಂಗಪ್ಪ ನಿರೂಪಿಸಿದರು.

ಸಮಾರೋಪ:

ಅವರ್ ಕ್ಲಬ್ ನ ಅಧ್ಯಕ್ಷೆ ಸುನಿತಾ ಮಾಚಯ್ಯ ಅವರ ಅದ್ಯಕ್ಷತೆಯಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಂಡೆಪಂಡ ಡಾ. ಪುಪ್ಪ‌ಕುಟ್ಟಣ್ಣ ಹಾಜರಿದ್ದರು. ಟೀಂ ಮಾಲ್ದಾರೆ ತಂಡ ಪ್ರಥಮ ಬಹುಮಾನ 21 ಸಾವಿರ ನಗದು ಹಾಗೂ ಟ್ರೋಫಿ ಪಡೆದರೆ ಮಾಸ್ಟರ್ ಬ್ಲಾಸ್ಟರ್ ತಂಡ ದ್ವಿತೀಯಸ್ಥಾನ ಪಡೆದು 11ಸಾವಿರ ನಗದು ಹಾಗು ಟ್ರೋಫಿ ಪಡೆದರು. ನೀಲೀ ಆಟ್ ಟೀ.ಕೋಕೇರಿ ಮಹಿಳಾತಂಡ ಮೂರನೇ ಬಹುಮಾನ ಪಡೆದು 6 ಸಾವಿರ ನಗದು ಹಾಗು ಟ್ರೋಫಿ ಪಡೆದರು. ಟೀಂ ಮಾಸ್ಟರ್ ಬ್ಲಾಸ್ಟರ್ ತಂಡದ ಭಾರತಿ ಬೆಸ್ಟ್ ಬಾಲರ್, ಟೀಂ ಮಾಲ್ದಾರೆ ತಂಡದ ಸುಜಿತಾ ಬೆಸ್ಟ್ ಬ್ಯಾಟರ್ ಹಾಗೂ ಟೀಂ ಸಂಭ್ರಮಾ ತಂಡದ ಅಂಜನಾ ಅತ್ಯದಿಕ ರನ್ ಬಹುಮಾನ ಪಡೆದರು.

ಅತ್ಯುತಮ ವಿಕೇಟ್ ಕೀಪರ್ ಟೀಂ ಸಂಭ್ರಮಾ ತಂಡದ ನಿಶಾ, ಟೀಂ ಸಂಭ್ರಮದ ಲೀಲಾವೇಣು ,ಹಿರಿಯ ಆಟಗಾರ್ತಿ ಬಹುಮಾನ‌ ಪಡೆದರು. ಪೊಮ್ಮಕ್ಕಡ ಕೂಟ ಮಡಿಕೇರಿ ಹಾಗೂ ಚೆಟ್ಟಳ್ಳಿಯ ಅವರ್ ಕ್ಲಬ್ ತಂಡ ಚಿಯರ್ ಗರ್ಲಸ್ ಬಹುಮಾನ ನೀಡಲಾಯಿತು. ಪುತ್ತರಿರ ಸೀತಮ್ಮ ಮೊಣ್ಣಪ್ಪ ವಂದಿಸಿ ಲಕ್ಕಂಡ್ರ ಕೋಮಲ ಜಯಂತ್ ನಿರೂಪಿಸಿದರು.