ಕನ್ನಡಪ್ರಭ ವಾರ್ತೆ, ತುಮಕೂರು

ಹಿಂದೂ ಸಮ್ರಾಟನೆಂದು ಕರೆಯಲ್ಪಡುವ ಛತ್ರಿಪತಿ ಶಿವಾಜಿ ಮಹಾರಾಜರು, ಧೈರ್ಯ, ಸ್ಥೈರ್ಯ ಆತ್ಮವಿಶ್ವಾಸಕ್ಕೆ ಮತ್ತೊಂದು ಹೆಸರು ಎಂದು ಜಿಲ್ಲಾ ಕನ್ಬಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದ್ದಾರೆ

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಮರಾಠ ಕ್ಷತ್ರಿಯ ಪರಿಷತ್, ಕರ್ನಾಟಕ ಮರಾಠ ಕ್ಷತ್ರಿಯ ಪರಿಷತ್ ವತಿಯಿಂದ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ 399ನೇ ಜನ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಾಲ್ಯದಲ್ಲಿಯೇ ತಾಯಿಯಿಂದ ಕಲಿತ ವಿದ್ಯೆಯನ್ನು ತನ್ನ ಜೀವಿತದ ಕೊನೆಯವರೆಗೂ ಮೈಗೂಡಿಸಿಕೊಂಡು ಹಿಂದೂ ಸಾಮ್ರಾಟನಾಗಿ ಮರೆದರು ಎಂದು ಅವರು ಹೇಳಿದರು.

ಶಿವಾಜಿ ಓರ್ವ ಅಪ್ರತಿಮ ದೇಶಭಕ್ತ, ಆತನ ಕಾಲದಲ್ಲಿ ಮಹಾರಾಷ್ಟ್ರ ದಿಂದ ತಂಜಾವೂರಿನ ವರೆಗೆ ಮರಾಠ ಸಾಮ್ರಾಜ್ಯ ವಿಸ್ತರಿಸಿದ್ದು, ಕನ್ನಡ, ತಮಿಳು,ತೆಲಗು ಭಾಷೆಗಳ ಬಗ್ಗೆ ಅಪಾರ ಗೌರವ ಹೊಂದಿದ್ದು, ಭಾಷಾ ಸಾಮರಸ್ಯಕ್ಕೆ ನಾಂದಿ ಹಾಡಿದ್ದರು. ಕರ್ನಾಟಕದ ಕಿತ್ತೂರು, ಕೆಳದಿ ಸಂಸ್ಥಾನದೊಂದಿಗೆ ಉತ್ತಮ ಭಾಂಧವ್ಯ ಹೊಂದಿದ್ದರು. ಭಾರತೀಯ ಚರಿತ್ರೆಯಲ್ಲಿ ಶಿವಾಜಿ ಮಹಾರಾಜರ ಆಡಳಿತ ಮಹತ್ವದ್ದು ಎಂದು ಕೆ.ಎಸ್.ಸಿದ್ದಲಿಂಗಪ್ಪ ನುಡಿದರು.


ಜಿಲ್ಲಾ ಮರಾಠ ಕ್ಷತ್ರಿಯ ಪರಿಷತ್ತಿನ ಗೌರವಾಧ್ಯಕ್ಷ ನಾಗೇಶ್ವರ್ ರಾವ್ ಗಾಯಕವಾಡ ಮಾತನಾಡಿ, ಭಾರತೀಯ ಚರಿತ್ರೆಯಲ್ಲಿ ನನ್ನದು ಹಿಂದೂ ಸಾಮ್ರಾಜ್ಯ ಎಂದು ಬಹಿರಂಗವಾಗಿ ಘೋಷಣೆ ಮಾಡಿದ ರಾಜನಿದ್ದರೆ ಅದು ಶಿವಾಜಿ ಮಹಾರಾಜರು ಮಾತ್ರ. ಜಾತಿ, ಧರ್ಮ, ಬಡವ, ಬಲ್ಲಿದ ಎಂಬ ಭೇದ ಭಾವವಿಲ್ಲದೆ, ಎಲ್ಲರನ್ನೂ ಸಮಾನವಾಗಿ ಕಾಣುತಿದ್ದ ಶಿವಾಜಿ ಮಹಾರಾಜರು, ತನ್ನ ಸೇನೆ ಮತ್ತು ಆಡಳಿತದಲ್ಲಿ ಎಲ್ಲಾ ಧರ್ಮೀಯರಿಗೂ ಅವಕಾಶ ಕಲ್ಪಿಸಿದ್ದರು. ಚಿಕ್ಕಂದಿನಲ್ಲಿ ಆಶ್ರಯ ಪಡೆದಿದ್ದ ಕರ್ನಾಟಕ ದ ಗವಿ ಗಂಗಾಧರಸ್ವಾಮಿ ದೇವಾಲಯದ ಬಗ್ಗೆ ಬಹಳ ಭಕ್ತಿ ಇಟ್ಟುಕೊಂಡು ಇತರೆ ರಾಜರಿಗೆ ಮಾದರಿಯಾಗಿ ಬದುಕಿದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸುರೇಶಕುಮಾರ್, ಮರಾಠ ಕ್ಷತ್ರಿಯ ಸಮಾಜದ ಕೊರಿಕೆಯಂತೆ ಇಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಸಾಂಕೇತಿಕವಾಗಿ ಸರಳವಾಗಿ ಆಚರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮುದಾಯದವರು ವಿಜೃಂಭಣೆಯಿಂದ ಇದೇ ಜಾಗದಲ್ಲಿ ಆಚರಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದರು.

ವೇದಿಕೆಯಲ್ಲಿ ನಾಗೇಶ್ ರಾವ್ ಗಾಯಕ್ವಾಡ್, ಜಿಲ್ಲಾಧ್ಯಕ್ಷ ಜನಾರ್ದನರಾವ್ ಸೋನಾಲೆ, ಕಾರ್ಯದರ್ಶಿ ಶ್ರೀನಿವಾಸರಾವ್ ಸಾಳಂಕೆ, ಖಜಾಂಚಿ ಹರೀಶ್ ರಾವ್ ಮೊರೆ, ಜಂಟಿ ಕಾರ್ಯದರ್ಶಿ ರಮೇಶ್ ರಾವ್ ಸಿಂಧೆ, ಸಂಘಟನಾ ಕಾರ್ಯದರ್ಶಿ ಗಂಗೋಜಿರಾವ್ ನಲ್ಲೋಡೆ ನಿರ್ದೇಶಕರಾದ ಹರ್ಷ ಕದಂ, ಬನಶಂಕರಿ ಬಾಬು, ಗಣೇಶ್ ರಾವ್ ಭೊಂಸ್ಲೆ, ಮೋಹನ್ ರಾವ್ , ಮುರಳಿಧರ್ ಸೋನಾಲೆ, ಶಿವಾಜಿ ಶಿಂದೆ, ರಾಮಚಂದ್ರ ಶಿಂದೆ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.