ಕನ್ನಡಪ್ರಭ ವಾರ್ತೆ ಮಡಿಕೇರಿ

ಛತ್ರಪತಿ ಶಿವಾಜಿ ಮಹಾರಾಜರು ಭರತಖಂಡದಲ್ಲಿ ಜನಿಸದಿದ್ದರೆ ಊಹಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆ ನಿಟ್ಟಿನಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷರಾದ ಲೋಕೇಶ್ ಸಾಗರ್ ಅವರು ತಿಳಿಸಿದ್ದಾರೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶಿವಾಜಿ ಮಹಾರಾಜರ ತಾಯಿ ಜೀಜಾಬಾಯಿಯವರಿಂದ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದನ್ನು ಸಮಾಜಕ್ಕೆ ಹೇಳಿಕೊಟ್ಟಿದ್ದಾರೆ. ಗುಡ್ಡಗಾಡು ಪ್ರದೇಶದಲ್ಲಿ ಹುಟ್ಟಿ ಬೆಳೆದು ಭರತಖಂಡದ ಸಾಮ್ರಾಜ್ಯವನ್ನು ಕಟ್ಟಿದ್ದಾರೆ ಎಂದು ಲೋಕೇಶ್ ಸಾಗರ್ ಅವರು ಹೇಳಿದರು. ತಾಯಿ ಜೀಜಾಬಾಯಿ ಅವರ ಕಥೆಯನ್ನು ಕೇಳಿ ಬೆಳೆದ ಶಿವಾಜಿ ಅವರು ಸಮಾಜಕ್ಕೆ ಏನಾದರೂ ಕೊಡಬೇಕು ಎಂಬ ಉದ್ದೇಶದಿಂದ ಇಡೀ ಭರತ ಸಾಮ್ರಾಜ್ಯವನ್ನು ಕಟ್ಟಲು ಪ್ರಯತ್ನಿಸುತ್ತಾರೆ ಎಂದರು. ಶಿವಾಜಿ ಮಹಾರಾಜರು ಎಲ್ಲರನ್ನು ಪ್ರೀತಿಸುತ್ತಿದ್ದರು. ಗೌರವಿಸುತ್ತಿದ್ದರು ಎಂದು ಹೇಳಿದರು. ಶಿವಾಜಿ ಅವರ ತಾಯಿ ಜಿಜಾಬಾಯಿ ಅವರು ಮಕ್ಕಳಿಗೆ ನೈತಿಕ ಶಿಕ್ಷಣ ನೀಡಬೇಕು ಎಂಬುದು ಆಶಯವಾಗಿತ್ತು ಎಂದು ಹೇಳಿದರು. ಸಂತ ಚೀನಾ ಸೋಮೇಶ್ ಅವರು ಮಾತನಾಡಿ ಶಿವಾಜಿ ಅವರು ಭರತ ಭೂಮಿಯಲ್ಲಿ ಜನಿಸಿ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದರು. ಛತ್ರಪತಿ ಶಿವಾಜಿ ಮಹಾರಾಜರು ಭರತ ಖಂಡದ ಅನರ್ಘ್ಯ ರತ್ನ ಎಂದು ವರ್ಣಿಸಿದರು. ಮರಾಠ ಸಮಾಜದ ಜಿಲ್ಲಾಧ್ಯಕ್ಷರಾದ ಎಸ್.ಆರ್.ಅರುಣ್ ರಾವ್ ಅವರು ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ಸಮಾಜಕ್ಕೆ ನೀಡಿರುವ ಸಂದೇಶಗಳನ್ನು ತಿಳಿದುಕೊಳ್ಳುವಂತಾಗಬೇಕು ಎಂದರು.ಛತ್ರಪತಿ ಶಿವಾಜಿ ಮಹಾರಾಜರು ಮಹಿಳೆಯರಿಗೆ ಸಮಾನ ಅವಕಾಶ ಮತ್ತು ರಕ್ಷಣೆಗೆ ಒತ್ತು ನೀಡಿದ್ದರು. ಶಿವಾಜಿ ಮಹಾರಾಜರು ಭರತ ಸಾಮ್ರಾಜ್ಯದ ದೊರೆಯಾಗಿದ್ದಾರೆ ಎಂದು ಹೇಳಿದರು. ತಹಸೀಲ್ದಾರರಾದ ಶ್ರೀಧರ್ ಅವರು ಮಾತನಾಡಿ ಛತ್ರಪತಿ ಶಿವಾಜಿ ಮಹಾರಾಜರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ಹೇಳಿದರು. ಪ್ರಮುಖರಾದ ಸುನಿಲ್ ರಾವ್, ನೇಕಾರರ ಒಕ್ಕೂಟದ ಕಾರ್ಯದರ್ಶಿ ಕೆ.ಕೆ.ನಾಗರಾಜ ಶೆಟ್ಟಿ, ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾದ ಮಹಾದೇವಿ, ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು. ಕಲಾವತಿ ಮತ್ತು ತಂಡದವರು ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.