ಮಳೆಯಿಲ್ಲದೆ ಭೂಮಿಯಲ್ಲಿ ತೇವಾಂಶ ತೀವ್ರವಾಗಿ ಕೊರತೆಯಾಗಿದ್ದು, ಮೊಳಕೆಯೊಡೆದ ಕಡಲೆ ಗಿಡಗಳೂ ಬಾಡಿ ಹೋಗುತ್ತಿವೆ. ಇದರಿಂದ ತಾಲೂಕಿನಲ್ಲಿ ಹಿಂಗಾರು ಬೆಳೆಯ ಮೇಲೂ ಬರದ ಛಾಯೆ ಆವರಿಸಿದ್ದು, ಅನ್ನದಾತರ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ.
ರಫೀಕ ಕಲೇಗಾರ
ಅಣ್ಣಿಗೇರಿ:ಮುಂಗಾರು ಹಂಗಾಮಿನ ಬರದಿಂದ ಈಗಾಗಲೇ ಹೆಸರು ಮತ್ತು ಉದ್ದು ಬೆಳೆಗಳನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ತಾಲೂಕಿನ ರೈತರು, ಹಿಂಗಾರಿನಲ್ಲಾದರೂ ಕಡಲೆ ಬೆಳೆದು ನಷ್ಟ ಸರಿದೂಗಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದರು. ಆದರೆ, ಈ ಬಾರಿ ಮಳೆಯಿಲ್ಲದೆ ಭೂಮಿಯಲ್ಲಿ ತೇವಾಂಶ ತೀವ್ರವಾಗಿ ಕೊರತೆಯಾಗಿದ್ದು, ಮೊಳಕೆಯೊಡೆದ ಕಡಲೆ ಗಿಡಗಳೂ ಬಾಡಿ ಹೋಗುತ್ತಿವೆ. ಇದರಿಂದ ತಾಲೂಕಿನಲ್ಲಿ ಹಿಂಗಾರು ಬೆಳೆಯ ಮೇಲೂ ಬರದ ಛಾಯೆ ಆವರಿಸಿದ್ದು, ಅನ್ನದಾತರ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ.
ತಾಲೂಕಿನಲ್ಲಿ ಒಟ್ಟು 28 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ, ಮಳೆಯ ಅಭಾವದಿಂದ ಕೇವಲ 13,400 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಸುಮಾರು ಶೇ. 54ರಷ್ಟು ಗುರಿ ಮಾತ್ರ ಸಾಧಿಸಲಾಗಿದೆ. ಉಳಿದ ಹೊಲಗಳು ಬಿತ್ತನೆಯಾಗದೆ ಖಾಲಿ ಉಳಿದಿವೆ.ಮುಂಗಾರಿನಲ್ಲಿ ಹೆಸರು ಮತ್ತು ಉದ್ದು ಬಿತ್ತನೆ ಮಾಡಿ ನಷ್ಟ ಅನುಭವಿಸಿದ್ದ ರೈತರು, ಅದೇ ಹೊಲಗಳಲ್ಲಿ ಕಡಲೆ ಬಿತ್ತಿದ್ದರು. ಹಳ್ಳಿಕೇರಿ, ಹೆಟ್ಟದ ಹಾಗೂ ನವಲಗುಂದ ರಸ್ತೆ ವ್ಯಾಪ್ತಿಯಲ್ಲಿ ಬಿತ್ತನೆಯಾಗಿದ್ದರೂ, ಮಳೆಯಿಲ್ಲದೆ ಗಿಡಗಳು ಸಮರ್ಪಕ ಬೆಳವಣಿಗೆ ಕಾಣದೆ ಒಣಗುತ್ತಿವೆ. ಮತ್ತೊಂದೆಡೆ ಮಜ್ಜಿಗುಡ್ಡ, ಕೋಳಿವಾಡ, ಭದ್ರಾಪುರ ಹಾಗೂ ಬೆಂತೂರು ರಸ್ತೆ ವ್ಯಾಪ್ತಿಯಲ್ಲಿ ಮಳೆಯ ಕೊರತೆಯಿಂದಾಗಿ ಅನೇಕ ರೈತರು ಬಿತ್ತನೆಯನ್ನೇ ಮಾಡಿಲ್ಲ.
ಅಲ್ಪಸ್ವಲ್ಪ ತೇವಾಂಶದ ಆಧಾರದ ಮೇಲೆ ಬೀಜ ಬಿತ್ತಿದ ರೈತರ ಹೊಲಗಳಲ್ಲಿ ಗಿಡಗಳು ಮೊಳಕೆಯೊಡೆದರೂ, ಹೂವು ಮತ್ತು ಕಾಯಿ ಬಿಡುವ ಹಂತವನ್ನು ತಲುಪುವ ಮೊದಲೇ ಒಣಗಿವೆ. ಇದರಿಂದ ಬಿತ್ತನೆಗಾಗಿ ಮಾಡಿದ ಖರ್ಚೆಲ್ಲಾ ವ್ಯರ್ಥವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.ಪರ್ಯಾಯ ಬೆಳೆಗೂ ಮಳೆ ಅಡ್ಡಿ:
ಕಡಲೆ ಬಿತ್ತನೆ ಅವಧಿ ಈಗಾಗಲೇ ಮುಗಿದಿದ್ದು, ಮುಂದಿನ ದಿನಗಳಲ್ಲಿ ಮಳೆಯಾದರೆ ಗೋಧಿ ಅಥವಾ ಜೋಳ ಬಿತ್ತಬಹುದು ಎಂಬ ರೈತರ ನಿರೀಕ್ಷೆಯೂ ಹುಸಿಯಾಗುವಂತಾಗಿದೆ. ಮಳೆ ಬಾರದ ಕಾರಣ ಬಿತ್ತನೆಗೆ ಖರೀದಿಸಿದ್ದ ಕಡಲೆ ಬೀಜಗಳನ್ನು ಮರಳಿ ಮಾರಾಟ ಮಾಡುವ ಅನಿವಾರ್ಯ ಸ್ಥಿತಿ ಎದುರಾಗಿದೆ. ಬಿತ್ತನೆಗಾಗಿ ಖರೀದಿಸಿದ ಬೀಜಗಳೇ ಹಾಗೆಯೇ ಉಳಿದಿವೆ ಎಂದು ರೈತರಾದ ಶಶಿಧರಯ್ಯ ಮುಖಂಡಮಠ ಹಾಗೂ ನಾವಳ್ಳಿ ಬಿ.ವಿ. ಪಾಟೀಲ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.ಪರಿಹಾರಕ್ಕಾಗಿ ಕಾಯುತ್ತಿರುವ ರೈತರುಮುಂಗಾರು ಬೆಳೆ ನಷ್ಟಕ್ಕೆ ಘೋಷಿಸಿದ್ದ ಮಧ್ಯಂತರ ಪರಿಹಾರ ಕೆಲವರಿಗೆ ಕೇವಲ ₹ 2000 ಬಂದಿದ್ದರೆ, ಇನ್ನು ಕೆಲವರಿಗೆ ಇದೂ ತಲುಪಿಲ್ಲ ಎಂಬ ದೂರುಗಳಿವೆ. ಇದೀಗ ಹಿಂಗಾರು ಬೆಳೆಯೂ ಕೈಕೊಟ್ಟಿರುವುದರಿಂದ ರೈತರು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಇಲಾಖೆ ಬೆಳೆ ಹಾನಿ ಸಮೀಕ್ಷೆ ನಡೆಸಿ ಅರ್ಹ ರೈತರಿಗೆ ಸಮರ್ಪಕ ಪರಿಹಾರ ನೀಡಬೇಕು ಎಂಬುದು ಅನ್ನದಾತರ ಆಗ್ರಹವಾಗಿದೆ.
ನನ್ನ ಮೂರು ಎಕರೆ ಜಮೀನಿನಲ್ಲಿ ಕಡಲೆ ಬಿತ್ತಲು ಪ್ರತಿ ಎಕರೆಗೆ ₹ 10 ಸಾವಿರ ಖರ್ಚು ಮಾಡಿದ್ದೆ. ಮಳೆಯಿಲ್ಲದೆ ಬೆಳೆ ಸಂಪೂರ್ಣ ನಷ್ಟವಾಗಿದೆ. ಈಗ ಏನು ಮಾಡುವುದೇ ಎಂಬುದೇ ತಿಳಿಯುತ್ತಿಲ್ಲ.ಹನುಮಂತಪ್ಪ ಕಂಬಳಿ ಭದ್ರಾಪುರದ ರೈತ