ಮೂಲ್ಕಿ: ದಿ. ಕೊ. ಅ. ಉಡುಪರಿಂದ ಕಿನ್ನಿಗೋಳಿಯಂತಹ ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸಲ್ಪಟ್ಟ ಯುಗಪುರುಷ ಸಂಸ್ಥೆಯು ಸಾಹಿತಿಗಳಿಗೆ ಪ್ರೋತ್ಸಾಹ ನೀಡುವ ಜೊತೆಗೆ ಅನೇಕ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುವುದು ಅಭಿನಂದನೀಯ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಜರುಗಿದ ಕಿನ್ನಿಗೋಳಿ ‘ಯುಗ ಪುರುಷ’ದ ಸಂಸ್ಥಾಪಕ ದಿ. ಕೊ.ಅ. ಉಡುಪರ ಸಂಸ್ಮರಣಾ ಸಮಾರಂಭದಲ್ಲಿ ಕೊ.ಅ. ಉಡುಪ ಪ್ರಶಸ್ತಿ ಪ್ರದಾನ, ವೇದ ವಿದ್ವಾಂಸರ ಸಂಮಾನ, ಕೃತಿ ಬಿಡುಗಡೆ, ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶ್ರೀಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು. ದಿ. ಕೋ.ಅ. ಉಡುಪರ ಸಂಸ್ಮರಣಾ ಭಾಷಣಗೈದ ದ. ಕ. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಅವರು ದಿ.ಕೊ.ಅ. ಉಡುಪರು ಯುಗಪುರುಷದ ಮೂಲಕ ಹಲವಾರು ಸಾಹಿತಿಗಳನ್ನು ಬೆಳೆಸಿದ್ದಲ್ಲದೆ, ಮಾರ್ಗದರ್ಶನ ನೀಡುವ ಕಾರ್ಯ ಮಾಡಿದ್ದು, ಅವರ ಸಾಧನೆಗಳು ಇಂದಿನ ಯುವ ಪೀಳಿಗೆಗೆ ಮಾದರಿ ಎಂದು ಹೇಳಿದರು.
ಪತ್ರಕರ್ತ, ಸಾಹಿತಿ ಚಿದಂಬರ ಬೈಕಂಪಾಡಿ ಅವರಿಗೆ ಕೊ.ಅ. ಉಡುಪ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ರಾಮದಾಸ ಆಚಾರ್ಯ ಅವರಿಗೆ ಕಮಲಾಕ್ಷಿ ಉಡುಪ ಸ್ಮರಣಾರ್ಥ ವೇದ ವಿದ್ವಾಂಸರ ನೆಲೆಯಲ್ಲಿ ಸನ್ಮಾನಿಸಲಾಯಿತು. ಕಾವೇರಿ, ಡೆನ್ಸಿಕಾ ಪಿರೇರಾ, ಆಯುಷ್, ಚೇತನ್ ವೈ ಶೆಟ್ಟಿಗಾರ್, ಯಜ್ಞ, ಕಿರಣ್ ದೇವಾಡಿಗ, ಲಕ್ಷ್ಮೀ ಉಡುಪ, ಅಂಜಲಿ, ಮನ್ವಿತಾ, ಸಿಂಚನಾ ಆಚಾರ್ಯ, ಸುಪ್ರಿತಾ, ಶ್ರಿಯಾ ಪೂಜಾರಿ, ಖುಷಿ, ತ್ರಿಶಾ ಪೂಜಾರಿ, ಕಿರಣ್ ಅವರಿಗೆ ವಿದ್ಯಾ ನಿಧಿಯನ್ನು ವಿತರಿಸಲಾಯಿತು. ಸಿಎ ಪರೀಕ್ಷೆಯ ಸಾಧಕಿ ಸ್ವಾತಿ ಎಸ್. ಶೆಟ್ಟಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 8ನೇ ರ್‍ಯಾಂಕ್ ಪಡೆದ ಅನ್ಯ ಆಚಾರ್ಯ ಅವರನ್ನು ಗೌರವಿಸಲಾಯಿತು.ಯುಗ ಪುರುಷ ಪ್ರಕಟಣಾಲಯದಿಂದ ಪ್ರಕಟಿತ ಪಿ.ವಿ. ಪ್ರದೀಪ್ ಕುಮಾರ್ ಕಥಾಬಿಂದು ರಚಿತ ಅದಿತಿ ಕೃತಿಯನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಿದರು. ಮುಂಬೈ ಉದ್ಯಮಿ ತಾಳಿಪಾಡಿಗುತ್ತು ರಾಮಚಂದ್ರ ಶೆಟ್ಟಿ, ಉದ್ಯಮಿ ಪೃಥ್ವಿರಾಜ್ ಆಚಾರ್ಯ, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ, ಮಂಗಳೂರಿನ ನೆಲ್ಲಿಕಾಯಿ ರಾಘವೇಂದ್ರ ಮಠದ ಅರ್ಚಕ ಜಯರಾಮ್ ಉಡುಪ, ಸಾಹಿತಿ ಡಾ. ಹರೀಶ್ಚಂದ್ರ ಪಿ. ಸಾಲ್ಯಾನ್, ಕೃತಿಕಾರ ಪಿ.ವಿ. ಪ್ರದೀಪ್ ಕುಮಾರ್, ಡಾ. ನಯನಾಭಿರಾಮ ಉಡುಪ ಮತ್ತಿತರರು ಇದ್ದರು. ಯುಗಪುರುಷದ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಸ್ವಾಗತಿಸಿದರು, ಅನುಷಾ ಕರ್ಕೇರ ಹಾಗೂ ಗುರುಪ್ರಸಾದ ಭಟ್ ಸನ್ಮಾನ ಪತ್ರ ವಾಚಿಸಿದರು. ಶರತ್ ಶೆಟ್ಟಿ ನಿರೂಪಿಸಿದರು.