‘ಮುಂಗಾರು’ ಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ವಡ್ಡರ್ಸೆ ಒಡನಾಡಿ, ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆಯಾಗಿದ್ದಾರೆ.

ಉಡುಪಿ: ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ ವತಿಯಿಂದ ಕೊಡಮಾಡುವ, ‘ಮುಂಗಾರು’ ಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ವಡ್ಡರ್ಸೆ ಒಡನಾಡಿ, ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆಯಾಗಿದ್ದಾರೆ.ಕಳೆದ 9 ವರ್ಷಗಳಿಂದ ನಾಡಿನ ಗಣ್ಯ ಪತ್ರಕರ್ತರಿಗೆ ಬ್ರಹ್ಮಾವರ ಪತ್ರಕರ್ತರ ಸಂಘ ಈ ಪ್ರಶಸ್ತಿ ನೀಡುತ್ತ ಬಂದಿದ್ದು 2025ನೇ ಸಾಲಿನ ಪ್ರಶಸ್ತಿಗೆ ಬೈಕಂಪಾಡಿ ಅವರನ್ನು ಆಯ್ಕೆ ಮಾಡಿದೆ. 27ರಂದು ಸಂಜೆ ಬ್ರಹ್ಮಾವರ ಬಂಟರ ಭವನದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನೆರವೇರಲಿದೆ.ಬೈಕಂಪಾಡಿ ಅವರು ವಡ್ಡರ್ಸೆ ಒಡನಾಡಿಯಾಗಿ ಹತ್ತು ವರ್ಷ ಕಾಲ ಮುಂಗಾರು ಪತ್ರಿಕೆಯಲ್ಲಿ ಕರ್ತವ್ಯ ನಿರ್ವಹಿಸಿ ಅವರ ಆಶಯಗಳಿಗೆ ಜೀವ ತುಂಬಿದ್ದರು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಮೃತ ವಾರಪತ್ರಿಕೆಯಲ್ಲಿ 2 ವರ್ಷ, ದಿವ್ಯವಾಣಿ ವಾರಪತ್ರಿಕೆಯಲ್ಲಿ 3 ವರ್ಷ, ಮುಂಗಾರು ದಿನಪ್ರತಿಕೆ 10 ವರ್ಷ ಮುಖ್ಯ ವರದಿಗಾರರಾಗಿ, ಕನ್ನಡಪ್ರಭ ದಿನಪ್ರತಿಕೆಯಲ್ಲಿ 15 ವರ್ಷ ಪ್ರಧಾನ ವರದಿಗಾರರಾಗಿ, ‘ಬಿಂಬದ್ವನಿ’ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಹೀಗೆ ಹತ್ತು ಹಲವು ಮಜಲುಗಳಲ್ಲಿ ಪತ್ರಿಕಾ ರಂಗದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ‘ಮುಂಗಾರು’ ಎನ್ನುವ ಪತ್ರಿಕೋದ್ಯಮದ ಕುರಿತ ಪುಸ್ತಕ, ‘ಪ.ಗೋ ಪ್ರಪಂಚ’ ಪತ್ರಿಕೋದ್ಯಮ ಕುರಿತ ಪುಸ್ತಕ, ರಾಜಕೀಯ ಒಳಸುಳಿಗಳು ಲೇಖನಗಳು ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲೂ ಹಲವು ಕೃತಿ ಹೊರತಂದಿದ್ದಾರೆ.

ಪತ್ರಿಕೋದ್ಯಮ, ಸಾಹಿತ್ಯ ಕ್ಷೇತ್ರದ ಇವರ ಸಾಧನೆ ಪರಿಗಣಿಸಿ ವಡ್ಡರ್ಸೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ, ಪ್ರಧಾನ ಕಾರ್ಯದರ್ಶಿ ಹರೀಶ್ ಕಿರಣ್ ತುಂಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.