ಅಯೋಧ್ಯೆ ವಿಗ್ರಹ ಕೆತ್ತನೆ ಕಾರ್ಯದಲ್ಲಿ ವಿಟ್ಲದ ಯುವಕ ಅಳಿಲ ಸೇವೆ!

| Published : Jan 15 2024, 01:46 AM IST

ಅಯೋಧ್ಯೆ ವಿಗ್ರಹ ಕೆತ್ತನೆ ಕಾರ್ಯದಲ್ಲಿ ವಿಟ್ಲದ ಯುವಕ ಅಳಿಲ ಸೇವೆ!
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆಯಲ್ಲಿ ಜ.೨೨ರಂದು ಪ್ರತಿಷ್ಠಾಪನೆಗೊಳ್ಳಲಿರುವ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ವಿಟ್ಲದ ಯುವಕ ಚಿದಾನಂದ ಆಚಾರ್ಯ ಸಹಾಯಕ ಶಿಲ್ಪಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಮೌನೇಶ ವಿಶ್ವಕರ್ಮ

ಕನ್ನಡಪ್ರಭ ವಾರ್ತೆ ಬಂಟ್ವಾಳ

‘ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮಲಲ್ಲಾನ ವಿಗ್ರಹ ಕೆತ್ತನೆಯ ಕಾರ್ಯದಲ್ಲಿ ನನಗೂ ಅಳಿಲ ಸೇವೆಯಂಥ ರೀತಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ದೊರಕಿರುವುದು ನನ್ನ ಪುಣ್ಯ...’ ಹೀಗೆಂದು ತನ್ನ ಸಂಭ್ರಮ ಹಂಚಿಕೊಂಡವರು ವಿಟ್ಲ ಸಮೀಪದ ಮೂವಾಜೆಯ ಚಿದಾನಂದ ಆಚಾರ್ಯ.ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲ್ಲನ ವಿಗ್ರಹ ಪ್ರತಿಷ್ಠೆಗೆ ದಿನಗಣನೆ ಆರಂಭಗೊಂಡಿದ್ದರೆ, ಇತ್ತ ಆ ವಿಗ್ರಹದ ಕೆತ್ತನೆಯಲ್ಲಿ ತೊಡಗಿಸಿಕೊಂಡ ಶಿಲ್ಪಿಗಳು ಪುಣ್ಯಕಾರ್ಯದಲ್ಲಿ ನೇರ ಪಾಲ್ಗೊಂಡ ಸಂತೃಪ್ತಿಯಲ್ಲಿದ್ದಾರೆ. ಈ ಪೈಕಿ‌ ಬಂಟ್ವಾಳ ತಾಲೂಕು ವಿಟ್ಲ ಉಕ್ಕುಡ ಸಮೀಪದ ಕಲ್ಲುರ್ಟಿಯಡ್ಕ‌ ನಿವಾಸಿ ಚಿದಾನಂದ‌ ಆಚಾರ್ಯರೂ ಒಬ್ಬರು.

ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ತಂಡದಲ್ಲಿ ಸಹಾಯಕನಾಗಿ ತೊಡಗಿಸಿಕೊಂಡಿದ್ದ ಚಿದಾನಂದ ಆಚಾರ್ಯ ವಿಟ್ಲ ಅಳಿಕೆಯ ಮೂವಾಜೆಯ ಗೋಪಾಲ ಆಚಾರ್ಯ ಹಾಗೂ ಪುಷ್ಪಾವತಿ ದಂಪತಿಯ ಪುತ್ರ. ಅಳಿಕೆ‌ ಸತ್ಯಸಾಯಿ‌ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ವರೆಗೆ ವಿದ್ಯಾರ್ಜನೆ ಮಾಡಿದ ಇವರು, ಬಳಿಕ ಎರಡು ವರ್ಷಗಳ ಕಾಲ ದೊಡ್ಡಪ್ಪನ ಜೊತೆ ಮರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.

ನಂತರ ಕಾರ್ಕಳದ ಕೆನರಾ ಬ್ಯಾಂಕ್ ಸಿ.ಇ.ಕಾಮತ್ ಇನ್‌ಸ್ಟಿಟ್ಯೂಟ್‌ನಲ್ಲಿ‌ ಒಂದೂವರೆ ವರ್ಷ ಶಿಲ್ಪಕಲೆಯನ್ನು ಅಭ್ಯಸಿಸಿದ ಇವರು,‌‌ ಚಿಕ್ಕಬಳ್ಳಾಪುರದ ಡಾ.ಜಿ.ಜ್ಞಾನಾನಂದ ಅವರ ಬ್ರಹ್ಮಶ್ರೀ ಶಿಲ್ಪಗುರುಕುಲದಲ್ಲಿ ಸುಮಾರು 10 ವರ್ಷ ಇನ್ನೂ ಹೆಚ್ಚಿನ ಶಿಲ್ಪಕಲಾ ಅಧ್ಯಯನ ನಡೆಸಿದರು.‌ ಬಳಿಕ ಬೆಂಗಳೂರಿನ ಸಾಂಪ್ರಾದಾಯಿಕ ಶಿಲ್ಪ ಗುರುಕುಲದಲ್ಲಿ 3 ವರ್ಷ ಪ್ರತಿಮಾ ಶಿಲ್ಪ ಹಾಗೂ 4 ವರ್ಷ ದೇವಾಲಯ ಶಿಲ್ಪವನ್ನು ಕಲಿತು, ಕಳೆದ 8 ವರ್ಷದಿಂದ ಅದೇ ಗುರುಕುಲದಲ್ಲಿ ಗುರುಗಳಾಗಿದ್ದಾರೆ.ಅಯೋಧ್ಯೆ ಕೆಲಸಕ್ಕೆ ಬುಲಾವ್..ನಾಲ್ಕು ತಿಂಗಳ ಹಿಂದೆ ಮೈಸೂರಿನ ಅರುಣ್ ಯೋಗಿರಾಜ್ ಅವರು, ಅಯೋಧ್ಯೆಯ ರಾಮಲಲ್ಲಾ ವಿಗ್ರಹದ ಕಾರ್ಯದ ಸಹಾಯಕ ಕೆಲಸಕ್ಕೆ ಶಿಲ್ಪಿಗಳುಬೇಕು ಎಂದು ಸಂದೇಶ ಕಳುಹಿಸಿದ್ದರು.‌ ಅದರಂತೆ ಚಿದಾನಂದ‌ ಆಚಾರ್ಯ, ಪುತ್ತೂರಿನ ಸುಮಂತ್ ಆಚಾರ್ಯ, ಕೋಲಾರದ ಉಮಾಮಹೇಶ್ವರ ಹಾಗೂ ನಾರಾಯಣ ಆಚಾರ್ಯ ಅವರು ಅಯೋಧ್ಯೆಗೆ ತೆರಳಿದ್ದರು.

ಚಿದಾನಂದ‌ ಆಚಾರ್ಯರ ತಂದೆ ದಿ.ಗೋಪಾಲ ಆಚಾರ್ಯರು ಟೈಲರ್ ವೃತ್ತಿ ನಿರ್ವಹಿಸುತ್ತಿದ್ದರು. ದೊಡ್ಡಪ್ಪ ಮರದ ಕೆಲಸ ಕೆತ್ತನೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಕಲ್ಲಿನ ಕೆತ್ತನೆ ಕಾರ್ಯದಲ್ಲಿ ಇವರ ಕುಟುಂಬದಲ್ಲಿ ಇವರೇ ಮೊದಲಿಗರು. ಹೀಗಿದ್ದರೂ ಅಯೋಧ್ಯೆಯ ಪುಣ್ಯದ ಕಾರ್ಯದಲ್ಲಿ ಇವರ ಕಲಾ ಚತುರತೆಗೆ ಅವಕಾಶ ದೊರೆತಿರುವುದು ಇವರ ಕುಟುಂಬಕ್ಕೆ ಸಂತಸ ತಂದುಕೊಟ್ಟಿದೆ.