ದೇವನಹಳ್ಳಿ: ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ವಿಧಾನಸೌಧದ ಹೊರತಾಗಿ, ಬೆಂಗಳೂರಿನ ೨೮ ವಿಧಾನಸಭಾ ಕ್ಷೇತ್ರಗಳಲ್ಲಿ ಮುಂದಿನ ೨೮ ವರ್ಷಗಳ ಕಾಲ ಒಂದೊಂದು ಕ್ಷೇತ್ರದಲ್ಲಿ ರಾಜ್ಯಮಟ್ಟದ ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು
ದೇವನಹಳ್ಳಿ: ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ವಿಧಾನಸೌಧದ ಹೊರತಾಗಿ, ಬೆಂಗಳೂರಿನ ೨೮ ವಿಧಾನಸಭಾ ಕ್ಷೇತ್ರಗಳಲ್ಲಿ ಮುಂದಿನ ೨೮ ವರ್ಷಗಳ ಕಾಲ ಒಂದೊಂದು ಕ್ಷೇತ್ರದಲ್ಲಿ ರಾಜ್ಯಮಟ್ಟದ ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ನಾಡಪ್ರಭು ಕೆಂಪೇಗೌಡರ ೧೦೮ ಅಡಿ ಎತ್ತರದ ಕಂಚಿನ ಬೃಹತ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಬೆಂಗಳೂರು ನಿರ್ಮಾತೃ, ಸರ್ವ ಜನಾಂಗದ ನಾಯಕ, ಬೆಂದಕಾಳೂರು ಕಟ್ಟಿದ ದೂರದೃಷ್ಟಿ ನಾಯಕ ಕೆಂಪೇಗೌಡರು ಎಂದು ಹೇಳಿದರು.ಇಂದು ಯಶವಂತಪುರದಲ್ಲಿ ಕಾರ್ಯಕ್ರಮ ಮಾಡುತ್ತಿದ್ದು, ಮುಂದಿನ ವರ್ಷ ಶಾಸಕರೊಂದಿಗೆ ಚರ್ಚಿಸಿ ಬ್ಯಾಟರಾಯನಪುರ, ಯಲಹಂಕ, ಕೆ.ಆರ್.ಪುರ ಅಥವಾ ಬೇರೆ ಕ್ಷೇತ್ರಗಳಲ್ಲಿ ಕೆಂಪೇಗೌಡರ ಜಯಂತಿ ರಾಜ್ಯಮಟ್ಟದ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಇನ್ನು ರಾಜ್ಯಾದ್ಯಂತ ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಾಗೂ ವಾರ್ಡ್ ಮಟ್ಟದಲ್ಲಿ ಕಾರ್ಯಕ್ರಮ ಆಚರಣೆಗೆ ಜಿಬಿಎಯಿಂದ ಆದೇಶಿಸಲಾಗಿದೆ. ಕೆಂಪೇಗೌಡರ ಆಚಾರ ವಿಚಾರ ಅಳವಡಿಸಿಕೊಂಡು ಬೆಂಗಳೂರಿನ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಬೆಂಗಳೂರಿಗೆ ಹೊಸ ರೂಪ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಕೆಂಪೇಗೌಡರ ಚಿಂತನೆ, ಆಚಾರ, ವಿಚಾರ ಎಲ್ಲವನ್ನು ಗಮನಲ್ಲಿಟ್ಟುಕೊಂಡು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮ್ಯಾರಥಾನ್ ಓಟ, ಬೆಂಗಳೂರಿನಲ್ಲಿ ೧೫ ಲಕ್ಷ ಸಸಿ ನೆಡುವ ಕಾರ್ಯಕ್ರಮ, ಮಾಗಡಿಯಲ್ಲಿ ೧೦೦ ಕೋಟಿ ವೆಚ್ಚದಲ್ಲಿ ಕೆಂಪೇಗೌಡರ ಕೋಟೆ ಸಮಗ್ರ ಅಭಿವೃದ್ಧಿ ಕಾರ್ಯ ಹಮ್ಮಿಕೊಂಡಿದ್ದೇವೆ. ಮಾಗಡಿಯಲ್ಲಿರುವ ಕೆಂಪೇಗೌಡರ ಸಮಾಧಿ ಬಳಿ ೧೦ ಎಕರೆ ಜಮೀನು ಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು, ಈಗಾಗಲೇ ಐದೂವರೆ ಎಕರೆ ಖರೀದಿಸಲಾಗಿದೆ ಎಂದು ಮಾಹಿತಿ ನೀಡಿದರು.ಬೆಂಗಳೂರಿಗೆ ಬರುವವರಿಗೆ ಹಾಗೂ ಮುಂದಿನ ಪೀಳಿಗೆಗೆ ಕೆಂಪೇಗೌಡರ ಗುರುತು ಪರಿಚಯಿಸಲು, ದೇವನಹಳ್ಳಿ ಹಾಗೂ ಏರ್ಪೋರ್ಟ್ ಹತ್ತಿರದ ಟ್ರಂಪೆಟ್ ವೃತ್ತದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ವಿಮಾನ ನಿಲ್ದಾಣ ಪ್ರಾಧಿಕಾರದವರಿಗೆ ಸೂಚನೆ ನೀಡಿದ್ದೇವೆ. ಅವರು ಸದ್ಯದಲ್ಲೇ ಕಾರ್ಯಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ಆ ಮೂಲಕ ಬೆಂಗಳೂರಿಗೆ ಬರುವವರು ಕೆಂಪೇಗೌಡರನ್ನು ಸ್ಮರಿಸುವಂತೆ ಮಾಡಲಾಗುವುದು ಎಂದು ತಿಳಿಸಿದರು.
ಕಳೆದ ವರ್ಷ ಸುಮ್ಮನಹಳ್ಳಿ ಬಳಿ ಕೆಂಪೇಗೌಡ ಭವನ ನಿರ್ಮಾಣಕ್ಕೆ ಐದು ಎಕರೆ ಜಾಗ ನೀಡಿ ಭೂಮಿಪೂಜೆ ಮಾಡಿದ್ದೆವು. ಜೊತೆಗೆ ಅಲ್ಲಿ ಕೆಂಪೇಗೌಡರ ಹೆಸರಿನಲ್ಲಿ ಟೌನ್ ಪ್ಲಾನಿಂಗ್ ಕಾಲೇಜು ಮಾಡಲು ಮಾರ್ಗದರ್ಶನ ನೀಡಲಾಗಿದೆ. ಹಿಂದಿನ ಸರ್ಕಾರ ಈ ಪ್ರತಿಮೆಯನ್ನು ಚೆನ್ನಾಗಿ ನಿರ್ಮಿಸಿದೆ. ಆದರೆ ವಿಮಾನ ನಿಲ್ದಾಣಕ್ಕೆ ಬರುವವರಿಗೆ ಈ ಪ್ರತಿಮೆ ಕಾಣುತ್ತಿಲ್ಲ. ಇದರ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂದು ನಾನು, ಸ್ವಾಮೀಜಿಗಳು ಹಾಗೂ ಕೃಷ್ಣ ಬೈರೇಗೌಡರೊಂದಿಗೆ ಚರ್ಚೆ ಮಾಡಿ ವಿಮಾನ ನಿಲ್ದಾಣ ಪ್ರಾಧಿಕಾರದವರಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.ಕೆಂಪೇಗೌಡರು ಎಲ್ಲಾ ವರ್ಗದ ಆಸ್ತಿ:
ಬೆಂಗಳೂರಿನಲ್ಲಿ ೧.೪೦ ಕೋಟಿ ಜನಸಂಖ್ಯೆ ಇದ್ದು, ೧.೩೦ ಕೋಟಿ ವಾಹನಗಳ ಸಂಖ್ಯೆ ಇವೆ. ನಾವು ಎಷ್ಟು ಮೆಟ್ರೋ, ಸಾರ್ವಜನಿಕ ಸಾರಿಗೆ ತಂದರೂ ಒಬ್ಬರು ಒಂದೊಂದು ವಾಹನ ಇಟ್ಟುಕೊಂಡಿದ್ದಾರೆ. ಮುಂದಿನ ಒಂದು ವರ್ಷದಲ್ಲಿ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ನೀಡಲು ಪ್ರಯತ್ನಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ, ಸ್ಪಟಿಕಪುರಿ ನಂಜಾವಧೂತ ಸ್ವಾಮೀಜಿ ಹಾಗೂ ವಿಶ್ವ ಒಕ್ಕಲಿಗರ ಸಂಸ್ಥಾನದ ನಿಶ್ಚಲಾನಂದನಾಥ ಸ್ವಾಮೀಜಿ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ, ಕೃಷ್ಣಭೈರೇಗೌಡ, ಕರ್ನಾಟಕ ರಾಜ್ಯ ೫ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಸಿ.ನಾರಾಯಣಸ್ವಾಮಿ, ಶಾಸಕರಾದ ಪ್ರದೀಪ್ ಈಶ್ವರ್, ರಿಜ್ವಾನ್ ಹರ್ಷದ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ ರಾವ್, ಬೆಂಗಳೂರು ನಗರ ಪೋಲಿಸ್ ಆಯುಕ್ತರಾದ ಸಿಮಂತ್ ಸಿಂಗ್, ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ, ವಿಮಾನ ನಿಲ್ದಾಣ ಪ್ರಾಧಿಕಾರದ ಸಿಇಒ ಹರಿಮರನ್, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
೨೭ ದೇವನಹಳ್ಳಿ ಚಿತ್ರಸುದ್ದಿ : ೦೨ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಾಡಪ್ರಭು ಕೆಂಪೇಗೌಡರ ಕಂಚಿನ ಬೃಹತ್ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪುಷಪನಮನ ಸಲ್ಲಿಸಿದರು.