ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸ್ಮಾರ್ಟ್‌ಸಿಟಿ ಮಂಗಳೂರು ಆಶ್ರಯದಲ್ಲಿ ಸುಮಾರು 36 ಕೋಟಿ ರು. ಗಳಲ್ಲಿ ಇಲ್ಲಿನ ಉರ್ವದಲ್ಲಿ ನಿರ್ಮಾಣಗೊಂಡ ಕಬಡ್ಡಿ ಮತ್ತು ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದ ಉದ್ಘಾಟನೆಗೆ ಶುಕ್ರವಾರ ನಿಗದಿಯಂತೆ ಮೊದಲು ಆಗಮಿಸದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೊನೆಕ್ಷಣದಲ್ಲಿ ಆಗಮಿಸಿ ಲೋಕಾರ್ಪಣೆಗೊಳಿಸಿದರು.ನಿಗದಿತ ಕಾರ್ಯಕ್ರಮದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರು ವಿಮಾನ ನಿಲ್ದಾಣದಿಂದ ಮೊದಲು ಈ ಒಳಾಂಗಣ ಕ್ರೀಡಾಂಗಣಕ್ಕೆ ಬಂದು ಲೋಕಾರ್ಪಣೆಗೊಳಿಸಬೇಕಿತ್ತು. ಪೂರ್ವನಿಗದಿಯಂತೆ ಸಂಜೆ 3.30ಕ್ಕೆ ಮುಖ್ಯಮಂತ್ರಿಗಳು ಉರ್ವಕ್ಕೆ ಆಗಮಿಸಬೇಕಿತ್ತು.ಆದರೆ ಮುಖ್ಯಮಂತ್ರಿಗಳು ಬಳ್ಳಾರಿಯಿಂದ ಹೊರಡುವಾಗಲೇ 45 ನಿಮಿಷ ತಡವಾಗಿತ್ತು. ಹಾಗಾಗಿಸಂಜೆ 4.15ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿದರು. ವಿಳಂಬವಾಗಿ ಆಗಮಿಸಿದ ಹಿನ್ನೆಲೆಯಲ್ಲಿ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸದೆ ನೇರವಾಗಿ ವಿಮಾನ ನಿಲ್ದಾಣದಿಂದ ಪಡೀಲಿನಲ್ಲಿ ಹೊಸ ಡಿಸಿ ಕಚೇರಿ ಸಂಕೀರ್ಣ ಲೋಕಾರ್ಪಣೆಗೆ ತೆರಳಿದರು. ಇದರಿಂದಾಗಿ ಸ್ವಾಗತ ಕೋರಲುಆಗಮಿಸಿದ ಬ್ಯಾಂಡ್ ಸೆಟ್ ತಂಡ ಕೂಡ ವಾಪಸ್ ಹೋಗಬೇಕಾಯಿತು. ಡಿಸಿ ಕಚೇರಿ ಲೋಕಾರ್ಪಣೆಗೊಂಡ ಬಳಿಕ ಉರೂಸ್‌ಗೆ ತೆರಳುವ ಮುನ್ನ ಉರ್ವಕ್ಕೆ ಆಗಮಿಸಿ ಸಿಎಂ ಒಳಾಂಗಣ ಕ್ರೀಡಾಂಗಣದ ಉದ್ಘಾಟನೆ ನೆರವೇರಿಸಿದರು.ಈ ಸಂದರ್ಭ ಸ್ಪೀಕರ್ ಯು.ಟಿ. ಖಾದರ್, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ಐವನ್ ಡಿಸೋಜ, ಜಿಲ್ಲಾಧಿಕಾರಿ ಮುಲೈ ಮುಗಿಲನ್, ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜಾ ಮತ್ತಿತರರು ಇದ್ದರು.