ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.11ರಂದು ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜ.17ರಂದು ಸಿಎಂ ದ.ಕ.ಕ್ಕೆ ಆಗಮಿಸುವ ದಿನ ನಿಗದಿ ಆಗಿದ್ದರೂ, ನರಿಂಗಾನ ಕಂಬಳ ಕುರಿತಾಗಿ ವಿಶೇಷ ಆಸಕ್ತಿಯಿಂದ ಆಗಮಿಸಲಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ನರಿಂಗಾನ ಕಂಬಳ ಸಮಿತಿ ಆಶ್ರಯದಲ್ಲಿ ನರಿಂಗಾನ ಗ್ರಾಪಂ ಸಹಕಾರದಲ್ಲಿ ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಮೋರ್ಲ- ಬೋಳದಲ್ಲಿ ತೃತೀಯ ವರ್ಷದ ಹೊನಲು ಬೆಳಕಿನ ಲವ-ಕುಶ ಜೋಡುಕರೆ ‘ನರಿಂಗಾನ ಕಂಬಳೋತ್ಸವ’ ಜ.11, 12ರಂದು ನಡೆಯಲಿದ್ದು, ಈ ಬಾರಿ ವಿಶೇಷ ಆಕರ್ಷಣೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ ಎಂದು ವಿಧಾನಸಭೆ ಸ್ಪೀಕರ್ ಹಾಗೂ ಉಳ್ಳಾಲ ಕ್ಷೇತ್ರದ ಶಾಸಕ ಯು.ಟಿ. ಖಾದರ್ ಫರೀದ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.11ರಂದು ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜ.17ರಂದು ಸಿಎಂ ದ.ಕ.ಕ್ಕೆ ಆಗಮಿಸುವ ದಿನ ನಿಗದಿ ಆಗಿದ್ದರೂ, ನರಿಂಗಾನ ಕಂಬಳ ಕುರಿತಾಗಿ ವಿಶೇಷ ಆಸಕ್ತಿಯಿಂದ ಆಗಮಿಸಲಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉದ್ಘಾಟನೆ ಮಾಡುವರು. ಶ್ರೀಕ್ಷೇತ್ರ ಶಾಂತಿವಳಿಕೆಯ ಪ್ರಧಾನ ತಂತ್ರಿ ವೇ.ಮೂ. ವರ್ಕಾಡಿ ಹೊಸಮನೆ ರಾಜೇಶ್ ತಾಳಿತ್ತಾಯ ದ್ವೀಪ ಪ್ರಜ್ವಲನೆ ಮಾಡುವರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್, ಸಯ್ಯದ್ ಮದನಿ ದರ್ಗಾ ಹಾಗೂ ಕೇಂದ್ರ ಜುಮಾ ಮಸೀದಿ ಉಳ್ಳಾಲದ ಅಧ್ಯಕ್ಷ ಪಿ.ಜಿ. ಹನೀಫ್ ಹಾಜಿ, ಬೋಳ ಸಂತ ಲಾರೆನ್ಸ್ ದೇವಾಲಯದ ಧರ್ಮಗುರು ರೆ.ಫಾ. ಫೆಡ್ರಿಕ್ ಕೊರೆಯ, ಧಾರ್ಮಿಕ, ಸಾಮಾಜಿಕ ರಂಗ ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ನಿನಿದ ಕೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಖಾದರ್ ತಿಳಿಸಿದರು.ನಕ್ಸಲರ ಶರಣಾಗತಿ ಸಂತಸದ ವಿಚಾರ
ನಕ್ಸಲರು ಶರಣಾಗುತ್ತಿರುವುದು ಸಂತೋಷದ ವಿಚಾರ. ಸಮಾಜದ ಮುಖ್ಯ ವಾಹಿನಿಗೆ ಬಂದು ತಮ್ಮ ಜೀವನ ರೂಪಿಸಿಕೊಳ್ಳಲು ಅವರಿಗೆ ಅವಕಾಶವಿದೆ. ಅವರಿಗೆ ಹೊಸ ಜೀವನ ಆರಂಭಿಸಲು ಇದೊಂದು ಸದವಕಾಶ ಎಂದು ಖಾದರ್ ಹೇಳಿದರು.ತುಳು ಭಾಷೆಗೆ ವಿಶೇಷ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಕರಾವಳಿಯಲ್ಲಿ ಸಿಎಂ ಉಪಸ್ಥಿತಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗುವುದು. ತುಳು ವಿದ್ವಾಂಸರು, ಪ್ರಮುಖರು ಸೇರಿದಂತೆ ತುಳುಭಾಷೆಯ ಉಳಿವಿಗಾಗಿ ಶ್ರಮಿಸುತ್ತಿರುವವರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.