ಸುದ್ದಿ ಗೋಷ್ಠಿಯಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಂಚಿನಮನೆ ರಾಘವೇಂದ್ರ ಆಗ್ರಹ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಏಪ್ರಿಲ್ 12 ರಂದು ತಾಲೂಕಿಗೆ ಆಗಮಿಸಿ ಏ. 13 ರಂದು ವಿವಿಧ ಕಾರ್ಯಕ್ರಮ ಗಳಲ್ಲಿ ಭಾಗಿಯಾಗುವ ಸಂದರ್ಭದಲ್ಲಿ ತಾಲೂಕಿನ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಬೇಕು ಎಂದು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಂಚಿನಮನೆ ರಾಘವೇಂದ್ರ ಆಗ್ರಹಿಸಿದರು.

ಗುರುವಾರ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದಿಂದ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ 2017 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಲೂಕಿಗೆ ಆಗಮಿಸಿ ಕಡಹಿನಬೈಲು ಗ್ರಾಮ ಪಂಚಾಯಿತಿಯ ಬಕ್ರಿ ಹಳ್ಳ ಏತ ನೀರಾವರಿ ಯೋಜನೆ ಉದ್ಘಾಟಿಸಿದ್ದಾರೆ. 3 ವರ್ಷಗಳ ಕಾಲ ಸಂಬಂಧಪಟ್ಟ ಗುತ್ತಿಗೆದಾರರೇ ನಿರ್ವಹಣೆ ಮಾಡಿದ್ದರು. ನಂತರದ ವರ್ಷಗಳಲ್ಲಿ ಈ ಯೋಜನೆಯ ಪೈಪ್ ಲೈನ್, ಕೆರೆ ಹೂಳೆತ್ತುವುದು ಸೇರಿದಂತೆ ಸಮರ್ಪಕ ನಿರ್ವಹಣೆಗೆ ಅನುದಾನದ ಕೊರತೆ ಎದುರಾಗಿದೆ. ಆದ್ದರಿಂದ ಕ್ಷೇತ್ರದ ಶಾಸಕರು ಮುಖ್ಯ ಮಂತ್ರಿಗಳ ಗಮನ ಸೆಳೆದು ಅನುದಾನ ಬಿಡುಗಡೆ ಮಾಡಿಸಬೇಕು ಎಂದು ಒತ್ತಾಯಿಸಿದರು.

ಅಲ್ಲದೆ ತಾಲೂಕಿನ ಇನ್ನೊಂದು ಏತ ನೀರಾವರಿ ಯೋಜನೆಯಾದ ಹೊನ್ನೇಕೊಡಿಗೆ ಏತ ನೀರಾವರಿ ಯೋಜನೆ ನೆನಗುದಿಗೆ ಬಿದ್ದಿದೆ. 2004ರಲ್ಲಿ ಮಾಜಿ ಸಚಿವ ಡಿ.ಎನ್.ಜೀವರಾಜ್ ಹೊನ್ನೇಕೊಡಿಗೆ ನೀರಾವರಿ ಯೋಜನೆಗೆ ₹4 ಕೋಟಿ ಮಂಜೂರು ಮಾಡಿಸಿದ್ದರು. ಸಾಲೂರು ಗ್ರಾಮದಲ್ಲಿ ಜಾಕ್ ವೆಲ್ ಕಾಮಗಾರಿ ಪೂರ್ಣ ಗೊಂಡಿದೆ. ಆದರೆ, ಕಳೆದ 12 ವರ್ಷಗಳಿಂದ ಕಾಮಗಾರಿ ಮುಂದೆ ಹೋಗದೆ ಗ್ರಾಪಂ ಹತ್ತಿರದಲ್ಲೇ ಟಿಸಿಗಳು, ಪೈಪ್ ಗಳನ್ನು ಗುತ್ತಿಗೆದಾರರು ತಂದು ಹಾಕಿದ್ದು ಎಲ್ಲಾ ಪರಿಕರಗಳು ಹಾಳಾಗುತ್ತಿದೆ. ಕಾಮಗಾರಿಗೆ ಅರಣ್ಯ ಇಲಾಖೆ ಅನುಮತಿ ಸಿಕ್ಕಿದೆ. ಈ ಯೋಜನೆ ಪೂರ್ಣಗೊಳಿಸಲು ಮುಖ್ಯ ಮಂತ್ರಿಗಳ ಗಮನ ಸೆಳೆಯಬೇಕು ಎಂದು ಒತ್ತಾಯಿಸಿದರು.


ಅಲ್ಲದೆ ಶೃಂಗೇರಿ ಕ್ಷೇತ್ರದಲ್ಲಿ ಮಾನವ ಮತ್ತು ಪ್ರಾಣಿಗಳ ಸಂಘರ್ಷ ಹೆಚ್ಚಿದ್ದು ಅರಣ್ಯ ಇಲಾಖೆ ಶಾಶ್ವತ ಪರಿಹಾರ ಮಾಡಬೇಕು. ಕಾಡಾನೆಗಳು ನಾಡಿಗೆ ಬಾರದಂತೆ ರೇಲ್ವೆ ಬ್ಯಾರಿಕೇಡ್ ಹಾಕಿಸಿಕೊಡಬೇಕು. ಶೃಂಗೇರಿ ಕ್ಷೇತ್ರವನ್ನು ಆದ್ಯತೆ ಮೇರೆಗೆ ಪರಿಗಣಿಸಬೇಕು. ಮುಖ್ಯ ಮಂತ್ರಿಗಳು ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಹಿಂದೆ ಭದ್ರಾ ಡ್ಯಾಂ ಆಗುವ ಮುಂಚೆ ನರಸಿಂಹರಾಜಪುರದಿಂದ ಚಿಕ್ಕಮಗಳೂರಿಗೆ ಹತ್ತಿರದ ರಸ್ತೆ ಇತ್ತು. ಡ್ಯಾಂ ಆದ ನಂತರ ರಸ್ತೆ ಕಡಿತಗೊಂಡಿದೆ. ಈಗ ನಿರ್ಮಾಣವಾಗಿರುವ ನೂತನ ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಮೂಲಕ ಚಿಕ್ಕಮಗಳೂರು ರಸ್ತೆ ಸಂಪರ್ಕ ಕಾಮಗಾರಿ ಮಂಜೂರು ಮಾಡಿಸಬೇಕು.ಇದರಿಂದ ಜಿಲ್ಲಾ ಕಚೇರಿಗಳಿಗೆ ಹೋಗಲು ಹತ್ತಿರವಾಗಲಿದೆ ಎಂದರು.

ಹೊನ್ನೇಕೊಡಿಗೆ ಸಂಪರ್ಕ ರಸ್ತೆ ಮಂಜೂರಿಗೆ ಶ್ರಮಿಸಿದ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್, ಹಣ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾಗೂ ಎಲ್ಲಾ ಜನಪ್ರತಿನಿಧಿಗಳಿಗೆ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಅಭಿನಂದಿಸುತ್ತದೆ ಎಂದು ತಿಳಿಸಿದರು.

ಸುದ್ದಿ ಗೋಷ್ಠಿಯಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಪದಾಧಿಕಾರಿಗಳಾದ ಕಿಚೇಬಿ ಪ್ರದೀಪ್, ಅಶೋಕ್ ನಿಲುವಾನಿ, ಅರುಣ ಜೈನ್, ಭೀಮನರಿ ನಿಶಾಂತ್, ಸತೀಶ್ ಗದ್ದೇಮನೆ, ಕಿರಣ ಗುಬ್ಬಿಗಾ, ಪ್ರದೀಪ್ ನಿಲುವಾನಿ, ಸುಧಾಕರ ಭೀಮನರಿ, ವಿಕಾಸ್ ಮಾವಿನಮನೆ, ಮುರುಳಿಧರ್, ವಿಶ್ವನಾಥ್ ಪ್ಯಾನ್ಸ್ ಕ್ಲಬ್ ಅಧ್ಯಕ್ಷ ಮುರುಳಿಧರ, ಸಚಿನ್ ಮೂಡಬಾಗಿಲು ಇದ್ದರು.