ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪೂರ್ಣ ಪ್ರಮಾಣದಲ್ಲಿ ಭರ್ತಿಯಾದ ಜಿಲ್ಲೆಯ ಜೀವನಾಡಿ ಕೃಷ್ಣರಾಜ ಸಾಗರ ಅಣೆಕಟ್ಟೆಗೆ ಇಂದು (ಜೂ.30ರಂದು) ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸುವ ಹಿನ್ನೆಲೆಯಲ್ಲಿ ಸಿದ್ಧತೆಗಳು, ಭದ್ರತೆ ಕುರಿತು ಸ್ಥಳ ಪರಿಶೀಲನೆ ನಡೆಸಲಾಯಿತು.ಸೋಮವಾರ ಮಧ್ಯಾಹ್ನ 12 ಗಂಟೆಗೆ ಅಣೆಕಟ್ಟೆ ಮಧ್ಯ ಭಾಗದಲ್ಲಿನ ಕಾವೇರಿ ಮಾತೆಯ ಪ್ರತಿಮೆಗೆ ಪೂಜೆ ಸಲ್ಲಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಣೆಕಟ್ಟೆಗೆ ಬಾಗಿನ ಅರ್ಪಿಸಲಿದ್ದು, ಶಾಸಕ ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಕಾವೇರಿ ನೀರಾವರಿ ನಿಗಮದ ಅಣೆಕಟ್ಟೆ ವಿಭಾಗದ ಅಧಿಕಾರಿಗಳು, ಜಿಲ್ಲಾಧಿಕಾರಿ ಡಾ.ಕುಮಾರ್, ಎಸ್ಪಿ ಅವರು ಸಿದ್ಧತೆ ಕುರಿತು ಪರಿಶೀಲಿಸಿದರು.
ಬಾಗಿನ ಅರ್ಪಣೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಸಚಿವರಾದ ಎನ್.ಎಸ್. ಬೋಸರಾಜು, ಕೆ.ವೆಂಕಟೇಶ್ ಉಪಸ್ಥಿತಿಯಲ್ಲಿ ಸ್ಥಳೀಯ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ಮಾತೆಗೆ ಬಾಗಿನ ಅರ್ಪಿಸುವ ಹಿನ್ನೆಲೆಯಲ್ಲಿ ನಿಗಮದಿಂದ ಅಣೆಕಟ್ಟೆ ಮೇಲ್ಬಾಗದಲ್ಲಿನ ಗೋಡೆಗಳಿಗೆ ಸುಣ್ಣ-ಬಣ್ಣ ಬಳಿದು, ಕನ್ನಡ ಬಾವುಟ ಹಾಗೂ ತೋರಣಗಳಿಂದ ಸಿಂಗರಿಸುವ ಕೆಲಸ ನಡೆಸಲಾಗಿದೆ. ಸಚಿವ ಸಂಪುಟ ಸದಸ್ಯರು, ಶಾಸಕರು ಬಾಗಿನ ಅರ್ಪಿಸುವ ಜಾಗದಲ್ಲಿ ಕೆಂಪು ಬಣ್ಣದ ಮ್ಯಾಟ್ ಹೊದಿಸಿ ಪುಟ್ಟ ವೇದಿಕೆ ನಿರ್ಮಿಸಲಾಗಿದೆ. ಬಾಗಿನ ಅರ್ಪಿಸುವ ಜಾಗದ ಸುತ್ತಲೂ ಅಣೆಕಟ್ಟೆಗೆ ಹೊಂದಿಕೊಳ್ಳುವಂತೆ ಬೊಂಬುಗಳಿಂದ ಕಟ್ಟಿ ಬಿಗಿ ಭದ್ರತೆ ಗೊಳಿಸಿಲಾಗಿದೆ. ಸಿಎಂ, ಸಚಿವರು ಆಗಮಿಸುವ ಹಿನ್ನೆಲೆಯಲ್ಲಿ ಅಣೆಕಟ್ಟೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮ, ಕಾರ್ಯಪಾಲಕ ಎಂಜಿನಿಯರ್ ಜಯಂತ್, ಎಇಇ ರೂಕ್ ಅಬು, ಎಇಇ ಕಿಶೋರ್ ಇತರರು ಸಿದ್ಧತೆ ಪರಿಶೀಲನೆ ವೇಳೆ ಇದ್ದರು.ಹೆಲಿಪ್ಯಾಡ್ ಬಳಿ ಸ್ವಚ್ಛತೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟದ ಸದಸ್ಯರೊಂದಿಗೆ ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಲು ಆಗಮಿಸುವ ಹಿನ್ನೆಲೆ ಕೆಇಆರ್‌ಎಸ್ ಸಂಶೋಧನ ಕೇಂದ್ರದ ಆವರಣದಲ್ಲಿ ಹೆಲಿಕಾಪ್ಟರ್ ಇಳಿಯಲು ಸ್ಥಳವಕಾಶ ಮಾಡಲಾಗಿದೆ. ಈ ಸ್ಥಳವನ್ನು ಜೆಸಿಬಿ ಮೂಲಕ ಗಿಡ-ಗೆಂಟೆ ತೆಗೆದು ವಾಹನಗಳು ಓಡಾಟ ನಡೆಸಲು ಸಮತಟ್ಟು ಮಾಡಿ ಸ್ವಚ್ಛತೆ ಮಾಡಲಾಗಿದೆ.ಸಿಎಂ ತೆರಳುವ ಮಾರ್ಗದ ರಸ್ತೆಯಲ್ಲಿ ಬೆಳದ ಗಿಡ-ಗೆಂಟೆ ತೆಗೆದು ಹೊರ ಸಾಗಿಸಿ ಸ್ವಚ್ಛತೆ ಮಾಡಲಾಗಿದೆ. ಹೆಲಿಕಾಪ್ಟರ್‌ನಿಂದ ಇಳಿದ ಬಳಿಕ ಕಾರಿನ ಮೂಲಕ ಮುಖ್ಯ ಮಂತ್ರಿ ಸಿದ್ದರಾಮಯ್ಯ ಬರುವ ಮಾರ್ಗದಲ್ಲಿ ರಸ್ತೆಯ ಎರಡು ಬದಿಯಲ್ಲಿ ವಿವಿಧ ಬಗೆಯ ಸ್ವಾಗತ ಕಮಾನುಗಳು, ಕಟೌಟ್‌ಗಳನ್ನು ಅಳವಡಿಸಿ ಸ್ವಾಗತಿಸಲಾಗುತ್ತಿದೆ. ಈಗಾಗಲೇ ಜಲಾಶಯದಲ್ಲಿ ಗರಿಷ್ಠ ಮಟ್ಟ ತಲುಪಿ ಸಂಪೂರ್ಣ ಭರ್ತಿಯಾಗಿದ್ದು, ಉಳಿದ ನೀರನ್ನು ಜಲಾಶಯದಿಂದ ಕಾವೇರಿ ನದಿಗೆ ಹರಿಸಲಾಗುತ್ತಿದೆ.
124.80 ಗರಿಷ್ಠ ಮಟ್ಟ ಇರುವ ಜಲಾಶಯದಲ್ಲಿ ಪ್ರಸ್ತುತ 124.80 ಅಡಿ ನೀರು ಸಂಗ್ರಹ ಮಾಡಲಾಗಿದೆ. 46,501 ಕ್ಯುಸೆಕ್ ಒಳಹರಿವು ಹರಿದು ಬರುತ್ತಿದೆ. 21,463 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಪ್ರಸ್ತುತ ಅಣೆಕಟ್ಟೆ ಯಲ್ಲಿ 49.452 ಟಿಎಂಸಿ ನೀರು ಗರಿಷ್ಠ ಸಂಗ್ರಹವಾಗಿದೆ. ಭಾನುವಾರ ಸಂಜೆ ಎಷ್ಟು ಒಳ ಹರಿವು ಬರುತ್ತದೋ ಅಷ್ಟು ನೀರನ್ನು ಹೊರ ಬಿಡಲಾಗುತ್ತದೆ.