ಚಿಗಳ್ಳಿ ಮತ್ತು ಅಂಕನಳ್ಳಿ ಗ್ರಾಮಗಳಲ್ಲಿ ಕಳೆದ ಕೆಲವು ವರ್ಷಗಳಿಂದ ನಿಯಮಕ್ಕೆ ವಿರುದ್ಧವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಮತ್ತು ಕಲ್ಲು ಕ್ರಷರ್‌ಗಳ ನಿರ್ಬಂಧರಹಿತ ಕಾರ್ಯಾಚರಣೆ ಗ್ರಾಮಸ್ಥರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಮಣ್ಣಿನ ಆರೋಗ್ಯದಿಂದ ಹಿಡಿದು ಪರಿಸರ, ಕೃಷಿ, ನೀರಿನ ಮೂಲಗಳು, ಸಾರ್ವಜನಿಕ ಸುರಕ್ಷತೆ ಎಲ್ಲದರ ಮೇಲೂ ಗಂಭೀರ ಪರಿಣಾಮ ಬೀರುತ್ತಿರುವ ಈ ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಾಯಿಸಿ, ಗ್ರಾಮಸ್ಥರು ಗುರುವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಗ್ರಹ ಆರಂಭಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಚಿಗಳ್ಳಿ ಮತ್ತು ಅಂಕನಳ್ಳಿ ಗ್ರಾಮಗಳಲ್ಲಿ ಕಳೆದ ಕೆಲವು ವರ್ಷಗಳಿಂದ ನಿಯಮಕ್ಕೆ ವಿರುದ್ಧವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಮತ್ತು ಕಲ್ಲು ಕ್ರಷರ್‌ಗಳ ನಿರ್ಬಂಧರಹಿತ ಕಾರ್ಯಾಚರಣೆ ಗ್ರಾಮಸ್ಥರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಮಣ್ಣಿನ ಆರೋಗ್ಯದಿಂದ ಹಿಡಿದು ಪರಿಸರ, ಕೃಷಿ, ನೀರಿನ ಮೂಲಗಳು, ಸಾರ್ವಜನಿಕ ಸುರಕ್ಷತೆ ಎಲ್ಲದರ ಮೇಲೂ ಗಂಭೀರ ಪರಿಣಾಮ ಬೀರುತ್ತಿರುವ ಈ ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಾಯಿಸಿ, ಗ್ರಾಮಸ್ಥರು ಗುರುವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಗ್ರಹ ಆರಂಭಿಸಿದರು.ಇದೇ ವೇಳೆ ಗ್ರಾಮಸ್ಥರ ಪರವಾಗಿ ಕೆ.ಪಿ. ಶಿವಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ತಾಲೂಕಿನ ಶಾಂತಿಗ್ರಾಮ ಹೋಬಳಿ ಚಿಗಳ್ಳಿ, ಅಂಕನಳ್ಳಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲ್ಲು ಗಣಿ ಹಾಗೂ ಸ್ಟೋನ್ ಕ್ರಷರ್‌ಗಳು ಯಾವುದೇ ಕಾನೂನುಬದ್ಧ ನಿಯಮಗಳನ್ನು ಪಾಲಿಸದೇ ಕಾರ್ಯಾಚರಣೆ ಮಾಡುತ್ತಿರುವುದು ಈಗಾಗಲೇ ಹಲವು ಸರ್ಕಾರಿ ಇಲಾಖೆಗಳ ಪರಿಶೀಲನಾ ವರದಿಗಳಲ್ಲೂ ಬಹಿರಂಗವಾಗಿದೆ ಎಂದು ಹೇಳಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಹಾಸನ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ವರದಿಯಲ್ಲೂ ಗಂಭೀರ ನಿಯಮ ಉಲ್ಲಂಘನೆಗಳ ಪಟ್ಟಿ ನೀಡಲಾಗಿದೆ ಎಂದು ಗ್ರಾಮಸ್ಥರು ಸೂಚಿಸಿದರು.

ಗುತ್ತಿಗೆ ಪಡೆದ ಪ್ರದೇಶಕ್ಕಿಂತ ಹೆಚ್ಚಿನ ಜಾಗದಲ್ಲಿ, ನಿಷೇಧಿತ ಪ್ರದೇಶಗಳಲ್ಲೂ ಆಳವಾದ ಗಣಿಗಾರಿಕೆ ನಡೆಸುತ್ತಿರುವುದು ಕಾನೂನು ಬಾಹಿರ. ದೇವಸ್ಥಾನ, ಕೆರೆ, ಕೃಷಿ ಜಮೀನು, ಎಚ್.ಆರ್‌.ಪಿ. ಜಮೀನು, ಮೀಸಲು ಅರಣ್ಯಗಳ ಬಳಿ ಗಣಿಗಾರಿಕೆ ಮಾಡಬಾರದೆಂಬ ಸ್ಪಷ್ಟ ನಿಯಮವಿರುವುದರೂ, ಇದನ್ನು ಆಗ್ರಹಿಸಿ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು. ಅಕ್ರಮ ಗಣಿಗಾರಿಕೆಯಿಂದ ಗುತ್ತಿಗೆದಾರರು ಗುತ್ತಿಗೆ ಮಿತ್ಯತೆಯನ್ನು ಮೀರಿ ಕಲ್ಲು ತೆಗೆದು ಸರ್ಕಾರಕ್ಕೆ ಕೋಟ್ಯಂತರ ತೆರಿಗೆ ನಷ್ಟ ಮಾಡುತ್ತಿರುವ ಆರೋಪವನ್ನು ಗ್ರಾಮಸ್ಥರು ಮಾಡಿದ್ದಾರೆ. ಇದನ್ನು ಪರಿಶೀಲಿಸಲು ಅಧಿಕಾರಿಗಳು ಬಾರದಿರುವುದು ಪ್ರಶ್ನಾರ್ಹ. ಕ್ರಷರ್‌ಗಳಿಂದ ಉಂಟಾಗುವ ಧೂಳು, ಶಬ್ಧ, ಭೂ ಕುಸಿತ, ಜನರ ಆರೋಗ್ಯಕ್ಕೆ ತೀವ್ರ ಹಾನಿ ಮಾಡುತ್ತಿದೆ. ಅನೇಕ ಮನೆಗಳಲ್ಲಿ ಉಸಿರಾಟದ ತೊಂದರೆ, ಕಣ್ಣು, ಮೂಗು, ಇತರೆ ಸಮಸ್ಯೆಗಳು ಹೆಚ್ಚಾಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಎಂಸ್ಟ್ಯಾಂಡ್, ಕಟ್ಟಡ ಕಲ್ಲು, ಕಲ್ಲು ಪುಡಿ ಸಾಗಿಸಲು ಬಳಸುವ ೧೦ ಮತ್ತು ೧೨ ಚಕ್ರದ ಟ್ರಕ್ ಹಾಗೂ ಟಿಪ್ಪರ್‌ಗಳು ಯಾವುದೇ ಪರವಾನಗಿ ಇಲ್ಲದೆ, ನಿಯಮಕ್ಕಿಂತ ಹೆಚ್ಚಾದ ೨೫-೩೦ ಟನ್ ತೂಕವನ್ನು ಲೋಡ್‌ ಮಾಡಲಾಗುತ್ತಿದೆ. ಈ ಅತಿಭಾರದಿಂದ ಗ್ರಾಮದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಸೇತುವೆಗಳು ಧ್ವಂಸವಾಗಿವೆ. ಮಕ್ಕಳ ಮತ್ತು ಹಿರಿಯರ ಸಂಚಾರಿ ಸುರಕ್ಷತೆ ಅಪಾಯದಲ್ಲಿದೆ ಹಾಗೂ ಗ್ರಾಮಗಳಿಗೆ ಆಂಬ್ಯುಲೆನ್ಸ್ ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳು ತಲುಪದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು. ನಿಯಮಬಾಹಿರ ಗಣಿಗಾರಿಕೆಯನ್ನು ವಿರೋಧಿಸಿದ ಗ್ರಾಮಸ್ಥರಿಗೆ ಗಣಿ ಗುತ್ತಿಗೆದಾರರಿಂದ ಬೆದರಿಕೆ ನೀಡಲಾಗುತ್ತಿದ್ದು, ಅಧಿಕಾರಿಗಳಿಗೆ ಅನೇಕ ಬಾರಿ ದೂರು ನೀಡಿದರೂ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದು ಗ್ರಾಮಸ್ಥರ ಅಸಮಾಧಾನವನ್ನು ಗಟ್ಟಿಗೊಳಿಸಿದೆ. ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸ್ಟೋನ್ ಕ್ರಷರ್‌ಗಳನ್ನು ತಕ್ಷಣವೇ ಮುಚ್ಚಬೇಕು, ಗುತ್ತಿಗೆ ನಿಯಮ ಮೀರಿ ನಡೆಯುತ್ತಿರುವ ಗಣಿಗಾರಿಕೆಯನ್ನು ತಕ್ಷಣವೇ ಸಂಪೂರ್ಣ ನಿಲ್ಲಿಸಬೇಕು. ದಾಖಲಾದ ಉಲ್ಲಂಘನೆಗಳ ಆಧಾರದ ಮೇಲೆ ಗಣಿ ಗುತ್ತಿಗೆಗಳನ್ನು ರದ್ದುಪಡಿಸಬೇಕುರಸ್ತೆಗಳು, ಸೇತುವೆಗಳು ಹಾಗೂ ಗ್ರಾಮದ ಮೂಲಸೌಕರ್ಯಗಳನ್ನು ಮರುನಿರ್ಮಿಸಬೇಕು ಎಂದು ಒತ್ತಾಯಿಸಿದರು. ದೂರುಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಇದುವರೆಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳದಿರುವ ಕಾರಣ, ಡಿಸಿ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಗ್ರಹ ಮಾಡುತ್ತಿರುವುದಾಗಿ ಹೇಳಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕಣಗಾಲ್ ಮೂರ್ತಿ, ಬಿಟ್ಟಗೌಡನಹಳ್ಳಿ ಮಂಜು, ಗ್ರಾಮಸ್ಥರಾದ ಸುನೀಲ್, ರಮೇಶ್, ಮಲ್ಲೇಶ್, ಮಹೇಶ್, ಲೋಕೇಶ್, ಯೋಗೇಶ್, ವಿನಯ್, ನಿಂಗರಾಜು ಇತರರು ಉಪಸ್ಥಿತರಿದ್ದರು.