ಚಿಕ್ಕಲ್ಲೂರು ಜಾತ್ರೆ; ಉತ್ತರ ದಿಕ್ಕಿಗೆ ವಾಲಿದ ಚಂದ್ರಮಂಡಲ

| Published : Jan 15 2025, 12:46 AM IST

ಸಾರಾಂಶ

ಸೌಹಾರ್ದತೆಗೆ ಪ್ರತೀಕವಾಗಿರುವ ತಾಲೂಕಿನ ಸುಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಯಲ್ಲಿ ಸಂಭ್ರಮ ಸಡಗರದಿಂದ ಚಂದ್ರಮಂಡೋಲೋತ್ಸವ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿತು.

ಕನ್ನಡಪ್ರಭ ವಾರ್ತೆ ಹನೂರು

ಸೌಹಾರ್ದತೆಗೆ ಪ್ರತೀಕವಾಗಿರುವ ತಾಲೂಕಿನ ಸುಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಯಲ್ಲಿ ಸಂಭ್ರಮ ಸಡಗರದಿಂದ ಚಂದ್ರಮಂಡೋಲೋತ್ಸವ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿತು.

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಜಾತ್ರೆಯು ಐದು ದಿನಗಳ ಕಾಲ ಸಾಂಪ್ರದಾಯಿಕವಾಗಿ ನಡೆಯಲಿದ್ದು ಮೊದಲ ದಿನ ಚಂದ್ರಮಂಡೋಲೋತ್ಸವ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ಮೂಲಕ ಲಕ್ಷಾಂತರ ಭಕ್ತರು ಕಣ್ತುಂಬಿಕೊಳ್ಳುವ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಪರಂಪರೆ ಸಾರುವ ಚಿಕ್ಕಲ್ಲೂರು ಜಾತ್ರೆ:

ಚಿಕ್ಕಲ್ಲೂರಿನಲ್ಲಿರುವ ಹಳೆ ಮಠದಿಂದ ಬೊಪ್ಪೇಗೌಡನ ಪುರದ ಧರೆಗೆ ದೊಡ್ಡವರ ಸಂಸ್ಥಾನದ ಮಠದ ಪರಂಪರೆಯಂತೆ ಮಠದ ಬಸವ ಭಾರಿ ಕಂಡಾಯ ಸೇರಿದಂತೆ ನೀಲಗಾರರು ಕಂಡಾಯಗಳನ್ನು ಹೊತ್ತು ಸಾಗುತ್ತಾರೆ. ಜೊತೆಗೆ ಕಾಟಿ, ಕೊಂಬು, ದಾಳ, ಸತ್ತಿಗೆ, ಸುರಪಾನಿ, ವಾದ್ಯ ಮೇಳ, ಸದ್ದಿನೊಂದಿಗೆ ಬರುವ ನೀಲಗಾರರು ಬಿಳಿ ವಸ್ತ್ರವನ್ನು ಧರಿಸಿ, ಹಣೆಗೆ ಮೂರು ಕಟ್ಟು ವಿಭೂತಿ ಬಳಿದು ಬೆತ್ತ, ಜೋಳಿಗೆ ಹಿಡಿದು ಜಾಗಟೆ ಬಡಿದುಕೊಂಡು ಒಟ್ಟಾಗಿ ಸಿದ್ದಪ್ಪಾಜಿ ಗದ್ದುಗೆಗೆ ಆಗಮಿಸಿ ಮಠಾಧಿಪತಿಗಳು ವಿಶೇಷ ಪೂಜೆ ಸಲ್ಲಿಸಿದ ನಂತರ ಶಾಗ್ಯ ಗ್ರಾಮಸ್ಥರು ಸುತ್ತೇಳು ಗ್ರಾಮಸ್ಥರು ಬಿದಿರು ಹಚ್ಚೆ, ಮಡಿ ಬಟ್ಟೆ, ತುಪ್ಪ ಎಣ್ಣೆಯನ್ನು ಹಚ್ಚಿ ಗದ್ದುಗೆಯ ಮುಂಭಾಗ ಇರುವ ವೃತ್ತಾಕಾರದ ವೇದಿಕೆಯಲ್ಲಿ ಸಿದ್ಧಪಡಿಸಿದ್ದ ಚಂದ್ರ ಮಂಡಲಕ್ಕೆ ಧೂಪ ಸಾಂಭ್ರಾಣಿ ಕರ್ಪೂರದಾರತಿ ಬೆಳಗಿನ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ಪೀಠಾಧಿಪತಿಗಳಿಂದ ಚಾಲನೆ:ಚಂದ್ರಮಂಡಲಕ್ಕೆ ಕರ್ಪೂರದ ಜ್ಯೋತಿಯನ್ನು ಚಂದ್ರಮಂಡಲದ ಕರ್ಪೂರದ ಜ್ಯೋತಿ ಸ್ಪರ್ಶಿಸಿದ ರಾಜೇ ಬಪ್ಪೇಗೌಡನಪುರದ ಪೀಠಾಧಿಪತಿ ಶ್ರೀ ಜ್ಞಾನಾನಂದ ಚನ್ನರಾಜ್ ಅರಸ್ ಅವರು ಚಂದ್ರಮಂಡಲಕ್ಕೆ ರಾತ್ರಿ 11.42 ರಲ್ಲಿ ಅಗ್ನಿಸ್ಪರ್ಶ ಮಾಡಿದರು. ಆಕಾಶಾಭಿಮುಖವಾಗಿ ಹೊತ್ತಿ ಉರಿದ ಚಂದ್ರಮಂಡಲದ ಜ್ಯೋತಿ ಉತ್ತರ ದಿಕ್ಕಿಗೆ ವಾಲಿತು. ಚಂದ್ರಮಂಡಲದ ಬೆಂಕಿಯ ಜ್ವಾಲೆ ಯಾವ ದಿಕ್ಕಿಗೆ ವಾಲುತ್ತದೆಯೋ ಆ ಭಾಗಕ್ಕೆ ವರ್ಷವಿಡಿ ಮಳೆ ಬೆಳೆ ಹಾಗೂ ಸಕಲವೂ ಸಮೃದ್ಧಿಯಾಗಿರುತ್ತದೆ ಎಂಬುದು ಸಿದ್ದಪ್ಪಾಜಿ ಭಕ್ತರನ ನಂಬಿಕೆಯಾಗಿದೆ.ಚಂದ್ರಮಂಡಲ ಸಮೃದ್ಧಿಯ ಸಂಕೇತ:

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕಲ್ಲೂರು ಜಾತ್ರೆ ಅತಿ ದೊಡ್ಡ ಜಾತ್ರೆಯಾಗಿದ್ದು ಮೊದಲ ದಿನದ ಚಂದ್ರಮಂಡಲವನ್ನು ನೋಡಲು ಕ್ಷೇತ್ರ ವ್ಯಾಪ್ತಿಯ ಸುತ್ತೇಳು ಹಳ್ಳಿಗಳು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಚಾಮರಾಜನಗರ ಜಿಲ್ಲೆ ಸೇರಿದಂತೆ ಮೈಸೂರು, ಬೆಂಗಳೂರು, ಮಂಡ್ಯ, ರಾಮನಗರ, ಕನಕಪುರ ಹಾಗೂ ಸುತ್ತಲಿನ ಗ್ರಾಮಗಳಿಂದಲೂ ಸಹ ಲಕ್ಷಾಂತರ ಭಕ್ತರು ಚಿಕ್ಕಲ್ಲೂರು ಜಾತ್ರೆಗೆ ಭೇಟಿ ನೀಡಿ ಚಂದ್ರಮಂಡಲ ಧಗಧಗನೆ ಉರಿಯುವ ಜ್ಯೋತಿ ನೋಡಲು ನೂಕು ನೂಗಲು ಉಂಟಾಯಿತು. ಪೊಲೀಸರು ಭಕ್ತರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.

ದವಸ ಧಾನ್ಯ ಎಸೆಯುವ ಸಾಂಪ್ರದಾಯ:

ಚಿಕ್ಕಲೂರು ಜಾತ್ರೆಯಲ್ಲಿ ನೆರೆದಿದ್ದ ಭಕ್ತ ಸಮೂಹ ಹಾಗೂ ಹರಕೆ ಹೊತ್ತ ಭಕ್ತರು ಸೇರಿದಂತೆ ಸುತ್ತಮುತ್ತಲಿನ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ದವಸಧಾನ್ಯ ಹಾಗೂ ನಾಣ್ಯಗಳು ಸೇರಿದಂತೆ ಹಣ್ಣು ಜವನ ಹೂವುಗಳನ್ನು ಚಂದ್ರಮಂಡಲಕ್ಕೆ ಎಸೆದು ಸಿದ್ದಪ್ಪಾಜಿಗೆ ಉಘೇ ಉಘೇ ಧರೆಗೆ ದೊಡ್ಡವರು. ಸಿದ್ದಪ್ಪಾಜಿ ಪಾದಕ್ಕೆ ಉಘೇ ಉಘೇ ಎಂದು ಘೋಷಣೆ ಕೂಗಿದರು ,

ಚಂದ್ರಮಂಡಲ ಕಣ್ತುಂಬಿ ಕೊಂಡ ಭಕ್ತರು:

ಚಂದ್ರಮಂಡಲ ಉತ್ಸವವನ್ನು ನೋಡಲು ತಾಲೂಕು ಹಾಗೂ ವಿವಿಧ ಜಿಲ್ಲೆಗಳಿಂದಲೂ ಅಪಾರ ಸಂಖ್ಯೆಯ ಭಕ್ತಾದಿಗಳು ಚಿಕ್ಕಲೂರು ಜಾತ್ರೆಗೆ ತೆರಳಿ ಚಂದ್ರಮಂಡಲ ವೀಕ್ಷಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಸುವಂತೆ ಮಂಟೆಸ್ವಾಮಿ ಸಿದ್ದಪ್ಪಾಜಿ ಭಕ್ತರು ಹಾಗೂ ನೀಲಗಾರರು ಜಾಗಟೆ ಬೆತ್ತ ಹಿಡಿದು ಭಕ್ತಿ ಪೂರ್ವಕವಾಗಿ ನೆರೆದಿದ್ದರು.

ಶಾಸಕರ ಭೇಟಿ:

ಚಿಕ್ಕಲ್ಲೂರು ಚಂದ್ರಮಂಡಲ ಉತ್ಸವ ಪೂಜಾ ಕಾರ್ಯಕ್ರಮಕ್ಕೆ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಹಾಗೂ ಹನೂರು ಶಾಸಕ ಎಂ.ಆರ್. ಮಂಜುನಾಥ್ ಭೇಟಿ ನೀಡಿ ಸಿದ್ದಪ್ಪಾಜಿ ದರ್ಶನ ಪಡೆದು ಚಂದ್ರಮಂಡಲ ಉತ್ಸವದಲ್ಲಿ ಭಾಗವಹಿಸಿದರು.ಬಿಗಿ ಪೊಲೀಸ್ ಬಂದೋಬಸ್ತ್:

ಚಿಕ್ಕಲ್ಲೂರು ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವುದೇ ಲೋಪದೋಷಗಳು ಉಂಟಾಗದಿರಲಿ ಎಂದು ಕೊಳ್ಳೇಗಾಲ ಉಪ ವಿಭಾಗ ಡಿಎಸ್ಪಿ ಧರ್ಮೇಂದರ್ ನೇತೃತ್ವದಲ್ಲಿ ಪೊಲೀಸ್ ಇಲಾಖೆ ದೇವಾಲಯ ಹಾಗೂ ಮುಂಭಾಗ ಗೋಪುರ ಇನ್ನಿತರ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸುವ ಮೂಲಕ ಕಟ್ಟುನಿಟಿನ ಕ್ರಮ ಕೈಗೊಂಡಿತ್ತು.

ಹುಲಿ ವಾಹನ ಉತ್ಸವಕ್ಕೆ ಸಕಲ ಸಿದ್ಧತೆ:

ಸಾಂಪ್ರದಾಯದಂತೆ ಚಿಕ್ಕಲ್ಲೂರು ಜಾತ್ರೆಯಲ್ಲಿ ಮಂಗಳವಾರ ಸಂಜೆ ಹುಲಿ ವಾಹನ ಉತ್ಸವ ನಡೆಯಿತು. ಬುಧವಾರ ನಡೆಯುವ ಮುಡಿಸೇವೆ ಹಾಗೂ ರುದ್ರಾಕ್ಷಿ ಮಂಟಪೋತ್ಸವ ಪೂಜೆಗೆ ಜನ ಹರಿದು ಬರಲಿದೆ.