ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ಟೆಂಪಲ್ ರನ್

| Published : Mar 29 2024, 12:53 AM IST

ಸಾರಾಂಶ

ದಾಬಸ್‌ಪೇಟೆ: ನಾನು ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಸೋಲನ್ನು ಅನುಭವಿಸಿದ್ದೆ, ನಮ್ಮ ಪಕ್ಷ ಒಂದೇ ವರ್ಷದಲ್ಲಿ ಮತ್ತೆ ಒಂದು ಅವಕಾಶ ನೀಡಿದ್ದು ಈ ಚುನಾವಣೆ ನನ್ನ ರಾಜಕೀಯ ಜೀವನದಲ್ಲಿ ಮಹತ್ವದ್ದಾಗಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು.

ದಾಬಸ್‌ಪೇಟೆ: ನಾನು ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಸೋಲನ್ನು ಅನುಭವಿಸಿದ್ದೆ, ನಮ್ಮ ಪಕ್ಷ ಒಂದೇ ವರ್ಷದಲ್ಲಿ ಮತ್ತೆ ಒಂದು ಅವಕಾಶ ನೀಡಿದ್ದು ಈ ಚುನಾವಣೆ ನನ್ನ ರಾಜಕೀಯ ಜೀವನದಲ್ಲಿ ಮಹತ್ವದ್ದಾಗಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು.

ಸೋಂಪುರ ಹೋಬಳಿಯ ವಿವಿಧ ದೇವಾಲಯಗಳು ಹಾಗೂ ಮಠಗಳಿಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಒಂದೇ ವರ್ಷದಲ್ಲಿ ಎರಡನೇ ಅವಕಾಶ ನೀಡುತ್ತಿರುವ ನಮ್ಮ ಪಕ್ಷದ ಹೈಕಮಾಂಡ್‌ಗೆ ಅಭಾರಿಯಾಗಿದ್ದೇನೆ. ಮತ್ತೆ ಈ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರನ್ನು ನೋಡಲು ದೇಶದ ಜನತೆ ಬಯಸುತ್ತಿದ್ದಾರೆ. ನಾನು ಸಚಿವನಾಗಿದ್ದಾಗ 485 ನಮ್ಮ ಕ್ಲಿನಿಕ್ ಪ್ರಾರಂಭ ಮಾಡಿದ್ದೇನೆ ಎಂದರು.

ಇಡೀ ರಾಷ್ಟ್ರಾದ್ಯಂತ 20 ಕೋಟಿ ಕಾರ್ಯಕರ್ತರನ್ನು ಹೊಂದಿರುವ ಪಕ್ಷ ಬಿಜೆಪಿ. ಗ್ರಾಪಂ ಚುನಾವಣೆಯಲ್ಲೂ ಅತ್ಯಧಿಕ ಆಕಾಂಕ್ಷಿಗಳಿರುತ್ತಾರೆ. ಲೋಕಸಭಾ ಕ್ಷೇತ್ರಕ್ಕೂ ಆಕಾಂಕ್ಷಿಗಳು ಸರ್ವೆಸಮಾನ್ಯ, ಪಕ್ಷದ ಅಭ್ಯರ್ಥಿಗೆ ಬೆಂಬಲಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಗೆಲ್ಲುವ ವಿಶ್ವಾಸವಿದೆ:

ನಾನು ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಪಡೆದಿದ್ದೇನೆ. ನಡೆದಾಡುವ ದೇವರು ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು ಹತ್ತಿರದಿಂದ ನೋಡಿದ ಸೌಭಾಗ್ಯ ನನ್ನದಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ಹಾಗೂ ಸಿದ್ದಗಂಗಾ ಶ್ರೀಗಳ ಅಶೀರ್ವಾದ ಪಡೆದಿದ್ದು ನೂರಕ್ಕೆ ನೂರರಷ್ಟು ಗೆಲ್ಲುವ ವಿಶ್ವಾಸವಿದೆ ಎಂದರು.

ಮಠಗಳಿಗೆ ಭೇಟಿ:

ಸೋಂಪುರ ಹೋಬಳಿಯ ದೇವರಹೊಸಹಳ್ಳಿ ವೀರಭದ್ರ ಸ್ವಾಮಿ ದೇವಾಲಯ, ಶಿವಗಂಗೆಯ ತೋಪಿನ ಗಣಪತಿ ದೇವಾಲಯ, ಮೇಲಣಗವಿ ಮಠದ ಡಾ.ಶ್ರೀ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಕಂಬಾಳುವಿನ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ನೆಲಮಂಗಲದ ಬಸವಣ್ಣದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ವಿ.ನಾಗರಾಜು, ಮುಖಂಡ ಸಪ್ತಗಿರಿ ಶಂಕರ್ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಯ್ಯ, ಜಿಲ್ಲಾ ಉಪಾಧ್ಯಕ್ಷ ಮಲ್ಲಯ್ಯ, ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ, ಹೋಬಳಿ ಅಧ್ಯಕ್ಷ ಮುರಳೀಧರ್, ಶಿವಗಂಗೆ ಗ್ರಾಪಂ ಅಧ್ಯಕ್ಷ ಪ್ರಭುದೇವ್, ಎಪಿಎಂಸಿ ಮಾಜಿ ನಿರ್ದೇಶಕ ಗಂಗಣ್ಣ, ಯುವಮೋರ್ಚಾ ತಾಲ್ಲೂಕು ಅಧ್ಯಕ್ಷ ರಾಯರಪಾಳ್ಯ ಮಹೇಶ್, ಗ್ರಾ.ಪಂ.ಉಪಾಧ್ಯಕ್ಷ ರೇಣುಕಾಪ್ರಸಾದ್, ಮುಖಂಡರಾದ ಶಿವರಾಜು, ಹೊನ್ನರಾಯನಹಳ್ಳಿ ಲೋಕೇಶ್, ಉಮಾಶಂಕರ್, ಗುಬ್ಬಣ್ಣಸ್ವಾಮಿ, ರುದ್ರಣ್ಣ, ನಿರ್ದೇಶಕ ನಾಗರಾಜು, ಕೆಂಗಲ್ ಕುಮಾರ್, ಪುಟ್ಟಸಿದ್ದಯ್ಯ ಇತರರಿದ್ದರು.

ಪೋಟೋ 3 :

ಸೋಂಪುರ ಹೋಬಳಿಯ ಹೊನ್ನಮ್ಮಗವಿ ಮಠಕ್ಕೆ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಭೇಟಿ ನೀಡಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು.