ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿರುವ ಕಾರಣ ಇಲ್ಲಿನ ರೈತರು ವಾಣಿಜ್ಯ ಬೆಳೆಗಳ ಕೃಷಿಯತ್ತ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.
ಲಾಭವಿರಲಿ, ಹಾಕಿದ ಬಂಡವಾಳವೂ ಕೈ ಸೇರುತ್ತಿಲ್ಲ । ಹೂ ತೋಟಕ್ಕೆ ರೈತರಿಂದಲೇ ರೋಟರಿ ಹಾಕಿ ನಾಶ
ದಯಾಸಾಗರ್ ಎನ್.ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಸುತ್ತಮುತ್ತಲಿನ ಹೂ ಬೆಳೆಗಾರರಿಗೆ ಮಾರುಕಟ್ಟೆಯಲ್ಲಿನ ದರ ಕುಸಿತ ದೊಡ್ಡ ಹೊಡೆತ ನೀಡುತ್ತಿದೆ. ಕೈತುಂಬಾ ಆದಾಯ ತಂದುಕೊಡಬೇಕಿದ್ದ ಸೇವಂತಿಗೆ ಹಾಗೂ ಚೆಂಡು ಹೂವಿನ ತೋಟಗಳು ಮಾರುಕಟ್ಟೆಯ ದರ ಕುಸಿತದಿಂದಾಗಿ ರೈತರ ಪಾಲಿಗೆ ನಷ್ಟದ ತೋಟಗಳಾಗಿವೆ. ಹೂವು ಕಟಾವಿಗೆ ಬರುವ ಮುನ್ನವೇ ರೈತರು ತಮ್ಮ ತೋಟಗಳಿಗೆ ರೋಟರಿ ಹೊಡೆದು ನಾಶಪಡಿಸುವಂತಹ ದಾರುಣ ಸ್ಥಿತಿ ನಿರ್ಮಾಣವಾಗಿದೆ.ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿರುವ ಕಾರಣ ಇಲ್ಲಿನ ರೈತರು ವಾಣಿಜ್ಯ ಬೆಳೆಗಳ ಕೃಷಿಯತ್ತ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ದಾಳಿಂಬೆ, ದ್ರಾಕ್ಷಿ ಸೇರಿದಂತೆ ವಿವಿಧ ಹಣ್ಣುಗಳ ಬೆಳೆಗಳ ಜೊತೆಗೆ ಹೂವು ಮತ್ತು ತರಕಾರಿ ಕೃಷಿಯನ್ನೂ ಅವಲಂಬಿಸಿದ್ದಾರೆ.
ಪ್ರತಿನಿತ್ಯ ಆದಾಯ ಗಳಿಸಬಹುದು ಎಂಬ ನಿರೀಕ್ಷೆಯಲ್ಲಿ ಅನೇಕ ರೈತರು ಹೂವಿನ ಕೃಷಿಯತ್ತ ಮುಖ ಮಾಡಿದ್ದಾರೆ. ಅದರಲ್ಲೂ ಸೇವಂತಿಗೆ ಹಾಗೂ ಚೆಂಡು ಹೂವಿನ ಬೆಳೆಗಳು ರೈತರಿಗೆ ಉತ್ತಮ ಆದಾಯ ತಂದುಕೊಡಬಹುದು ಎಂಬ ಭರವಸೆ ಮೂಡಿಸಿದ್ದವು. ಆದರೆ ಇದೀಗ ಮಾರುಕಟ್ಟೆಯಲ್ಲಿ ಹೂವಿನ ದರಗಳು ದಿಢೀರ್ ಕುಸಿತ ಕಂಡಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಹೊಲದಲ್ಲಿ ಹೂವು ಸಮೃದ್ಧವಾಗಿ ಬೆಳೆದಿದ್ದರೂ ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೆಲೆ ಸಿಗುತ್ತಿಲ್ಲ. ಕೂಲಿ ವೆಚ್ಚ, ಗೊಬ್ಬರ, ಔಷಧಿ, ನೀರಾವರಿ ಹಾಗೂ ಕೃಷಿ ನಿರ್ವಹಣೆಗೆ ಮಾಡಿದ ಖರ್ಚನ್ನೂ ವಾಪಸ್ ಪಡೆಯಲು ಸಾಧ್ಯವಾಗುತ್ತಿಲ್ಲ.ಇನ್ನು ಸದ್ಯ ಯಾವುದೇ ಪ್ರಮುಖ ಹಬ್ಬ-ಹರಿದಿನಗಳಿಲ್ಲದ ಕಾರಣ ಹೂವಿನ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯೂ ರೈತರಿಗಿಲ್ಲ. ಹೀಗಾಗಿ ಕಟಾವಿಗೆ ಸಿದ್ಧವಾಗಿರುವ ಹೂವುಗಳನ್ನು ಕಿತ್ತು ಮಾರುಕಟ್ಟೆಗೆ ಸಾಗಿಸುವುದಕ್ಕಿಂತ ತೋಟವನ್ನೇ ನಾಶಪಡಿಸುವುದು ಉತ್ತಮ ಎಂಬ ಕಠಿಣ ನಿರ್ಧಾರಕ್ಕೆ ರೈತರು ಬಂದಿದ್ದಾರೆ.
ಒಂದೆಡೆ ಗಿಡಗಳಲ್ಲಿ ಅರಳಿ ನಿಂತಿರುವ ಬಣ್ಣಬಣ್ಣದ ಸೇವಂತಿಗೆ ಹಾಗೂ ಚೆಂಡು ಹೂವುಗಳು ನೋಡುಗರ ಕಣ್ಮನ ಸೆಳೆಯುತ್ತಿದ್ದರೆ, ಮತ್ತೊಂದೆಡೆ ಅದೇ ಹೂವಿನ ತೋಟಗಳಿಗೆ ಟ್ರ್ಯಾಕ್ಟರ್ ನುಗ್ಗಿಸಿ ರೋಟರಿ ಹೊಡೆಯುತ್ತಿರುವ ದೃಶ್ಯ ರೈತರ ಸಂಕಷ್ಟಕ್ಕೆ ಕನ್ನಡಿ ಹಿಡಿದಂತಿದೆ.ತಾಲೂಕಿನ ಅಣಕನೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂತಹ ಪರಿಸ್ಥಿತಿ ಕಂಡುಬರುತ್ತಿದ್ದು, ತಿಂಗಳುಗಟ್ಟಲೆ ಶ್ರಮಪಟ್ಟು ಬೆಳೆಸಿದ ಹೂವಿನ ತೋಟವನ್ನು ಕಣ್ಣೆದುರೇ ನಾಶಪಡಿಸುತ್ತಿರುವ ರೈತರ ನೋವು ಹೇಳತೀರದಾಗಿದೆ. ರೈತರ ಶ್ರಮಕ್ಕೆ ಬೆಲೆ ಇಲ್ಲದಂತಾದರೆ ಕೃಷಿ ಮಾಡುವುದಾದರೂ ಹೇಗೆ? ಬೆಳೆ ಬೆಳೆಯಲು ಬಂಡವಾಳ ಬೇಕು, ಬೆಳೆದ ಬೆಳೆಗೆ ಸೂಕ್ತ ಬೆಲೆ ಬೇಕು. ಆದರೆ ಎರಡರ ನಡುವೆ ಸಿಲುಕಿರುವ ರೈತನಿಗೆ ಕೊನೆಗೆ ಉಳಿಯುತ್ತಿರುವುದು ಸಾಲ ಮತ್ತು ನಷ್ಟ ಮಾತ್ರ.
ಇನ್ನು ಉತ್ತಮವಾದ ಸೇವಂತಿಗೆ ಹೂ ಬೆಳೆ ಬಂದಿದೆ ಎಂದು ಮಾರುಕಟ್ಟೆಗೆ ತೆಗೆದು ಕೊಂಡು ಹೋದರೆ ಕೆಜಿ ಹೂ 10-20 ರು.ಗಳಿಗೆ ಮಾರಾಟವಾಗುತ್ತಿದೆ. ನಾವು ಹೂ ಕೀಳುವ ಕೂಲಿ ವೆಚ್ಚ, ಹೂ ಬೆಳೆಯಲು ತಗಲುವ ಗೊಬ್ಬರ, ಔಷಧಿ, ನೀರಾವರಿ ಹಾಗೂ ಕೃಷಿ ನಿರ್ವಹಣೆಗೆ ಮಾಡಿದ ಖರ್ಚನ್ನೂ ವಾಪಸ್ ಪಡೆಯಲು ಸಾಧ್ಯವಾಗುತ್ತಿಲ್ಲ. ನಮಗೆ ವ್ಯೆವಸಾಯ ಬಿಟ್ಟರೆ ಬೇರೆ ಬದುಕು ಗೊತ್ತಿಲ್ಲ? ಬೆಳೆ ಇಡಲು ಮಾಡಿರುವ ಲಕ್ಷಾಂತರ ಸಾಲ ಹೇಗೆ ತೀರಿಸ ಬೇಕು? ಮುಂದೆ ಎನು ಮಾಡುವುದು ? ಎಂಬ ಚಿಂತೆ ಕಾಡುತ್ತಿದೆ. ಸರ್ಕಾರ ಮುಂದೆ ಬಂದು ರೈತರ ನೆರವಿಗೆ ನಿಲ್ಲ ಬೇಕು ಎಂದು ಅರೂರಿನ ಹೂ ಬೆಳೆಗಾರ ಗೋಫಾಲಕೃಷ್ಣ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.ಸಿಕೆಬಿ-2 ತಾಲೂಕಿನ ಅಣಕನೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಸೇವಂತಿಗೆ ಹೂ ತೋಟಕ್ಕೆ ಟ್ರ್ಯಾಕ್ಟರ್ ನುಗ್ಗಿಸಿ ರೋಟರಿ ಹಾಕಿ ನಾಶಪಡಿಸುತ್ತಿರುವ ದೃಶ್ಯ.