Will Raghumurthy bring another two TMC of water?

-4 ಟಿಎಂಸಿ ಬಂದರೂ ಚಳ್ಳಕೆರೆ ಕೆರೆಗಳಿಗೆ ನೀರಿಲ್ಲ। ರಾಣೀಕೆರೆಗೆ ಭದ್ರೆ ಸ್ಪರ್ಶಿಸಲಿಲ್ಲ। ಸಿಎಂ ಹತ್ತಿರ 2 ಟಿಎಂಸಿಗೆ ಸಚಿವರ ಮನವಿ

ಜಡೇಕುಂಟೆ ಮಂಜುನಾಥ್

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಬರದ ನಾಡಿಗೆ ಭದ್ರಾ ನೀರು ಪ್ರವೇಶಿಸಿ ಹೊಸ ಭರವಸೆ ಮೂಡಿಸಿದ್ದಳಾದರೂ ಚಳ್ಳಕೆರೆ ತಾಲೂಕಿನ ಪಾಲಿಗೆ ಮಾತ್ರ ನಿರೀಕ್ಷಿತ ಫಲ ನೀಡಿಲ್ಲ. ಪ್ರಾಯೋಗಿಕವಾಗಿ ಮೊದಲ ಬಾರಿಗೆ ಜಿಲ್ಲೆಗೆ ಸುಮಾರು 4 ಟಿಎಂಸಿ ನೀರು ಹರಿದುಬಂದಿದ್ದರೂ ಚಳ್ಳಕೆರೆ ತಾಲೂಕಿನ ಪ್ರಮುಖ ಕೆರೆಗಳು ಇಂದಿಗೂ ಭರ್ತಿಯಾಗದೆ ಉಳಿದಿವೆ. 2 ಕೆರೆಗಳಿಗೆ ಅಲ್ಪ ಪ್ರಮಾಣದ ನೀರು ಹರಿದಿದ್ದರೆ, ರಾಣೀಕೆರೆಯ ಪಾಲಿಗೆ ಈ ಬಾರಿಯೂ ಭದ್ರಾ ನೀರು ಮರೀಚಿಕೆಯಾಗಿದೆ.

ಹೀಗಿರುವಾಗ ಸಚಿವ ರಘುಮೂರ್ತಿ ಅವರು ಸರ್ಕಾರದ ಮಟ್ಟದಲ್ಲಿ ಪ್ರಭಾವ ಬೀರಿ ಇನ್ನೂ ಎರಡು ಟಿಎಂಸಿ ನೀರನ್ನು ತಂದು ಚಳ್ಳಕೆರೆ ತಾಲೂಕಿನ ಕೆರೆಗಳನ್ನು ತುಂಬಿಸುತ್ತಾರೆಯೇ ಎಂಬ ಪ್ರಶ್ನೆ ಇದೀಗ ಜನರಲ್ಲಿ ಮೂಡಿದೆ.

ಭದ್ರಾ ನೀರಿನ ಆಗಮನದಿಂದ ತಾಲೂಕಿನ ರೈತರು, ಗ್ರಾಮಸ್ಥರು ಮತ್ತು ಜನಸಾಮಾನ್ಯರಲ್ಲಿ ಸಾಕಷ್ಟು ನಿರೀಕ್ಷೆಗಳಿದ್ದವು. ಹಲವು ವರ್ಷಗಳಿಂದ ಬರದ ಬೇಗೆಯಲ್ಲಿ ಬೆಂದಿರುವ ಈ ಭಾಗದ ಕೆರೆಗಳು ತುಂಬಿದರೆ ಕೃಷಿಗೆ ಹೊಸ ಚೈತನ್ಯ ಬರಲಿದೆ, ಅಂತರ್ಜಲ ವೃದ್ಧಿಯಾಗಲಿದೆ, ಕೊಳವೆಬಾವಿಗಳಲ್ಲಿ ನೀರು ಸಿಗಲಿದೆ, ಕುಡಿಯುವ ನೀರಿನ ಸಮಸ್ಯೆಗೂ ಪರಿಹಾರ ದೊರೆಯಲಿದೆ ಎಂಬ ಆಶಾಭಾವನೆ ಇತ್ತು. ಆದರೆ ನಾಲ್ಕು ಟಿಎಂಸಿ ನೀರು ಹರಿದಿದೆ ಎಂಬ ಲೆಕ್ಕಾಚಾರಕ್ಕೂ, ಚಳ್ಳಕೆರೆ ತಾಲೂಕಿನ ಕೆರೆಗಳ ವಾಸ್ತವ ಸ್ಥಿತಿಗೂ ತಾಳೆಯಾಗುತ್ತಿಲ್ಲ.

ಚಿಕ್ಕಮಧುರೆ, ಸಾಣೀಕೆರೆ ಕೆರೆಗಳು ನಿರೀಕ್ಷಿತ ಮಟ್ಟದಲ್ಲಿ ತುಂಬಿಲ್ಲ. ಚಿಕ್ಕಮಧುರೆ ಮತ್ತು ಸಾಣೀಕೆರೆ ಕೆರೆಗಳಿಗೆ ನೀರು ಹರಿದಿದ್ದರೂ ಅವುಗಳ ಭರ್ತಿಗೆ ಅದು ಸಾಕಾಗಿಲ್ಲ. ಇನ್ನು ರಾಣೀಕೆರೆಗೆ ನೀರೇ ಹರಿಯದಿರುವುದು ಸ್ಥಳೀಯರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ. ಜಿಲ್ಲೆಯ ಇತರ ತಾಲೂಕುಗಳ ಕೆರೆಗಳಿಗೆ ನೀರು ಹರಿಯುತ್ತಿರುವಾಗ ಚಳ್ಳಕೆರೆ ಮಾತ್ರ ಈ ವಿಚಾರದಲ್ಲಿ ಹಿಂದುಳಿದಿರುವುದೇಕೆ ಎಂಬ ಪ್ರಶ್ನೆ ಎದುರಾಗಿದೆ.

ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ತಾಲೂಕುಗಳ ಕೆರೆಗಳಿಗೆ ಭದ್ರಾ ನೀರು ಯಥೇಚ್ಚವಾಗಿ ಹರಿದಿದೆ. ಆದರೆ ಬರಪೀಡಿತ ಚಳ್ಳಕೆರೆ ತಾಲೂಕಿನ ಕೆರೆಗಳ ವಿಚಾರದಲ್ಲಿ ಮಾತ್ರ ನಿರೀಕ್ಷಿತ ಪ್ರಗತಿ ಕಾಣದಿರುವುದು ನೀರಿನ ಹಂಚಿಕೆ ಮತ್ತು ನಿರ್ವಹಣೆಯ ಬಗ್ಗೆ ಅನುಮಾನ ಮೂಡಿಸಿದೆ. ನೀರಿನ ಹಂಚಿಕೆಯಲ್ಲಿ ಚಳ್ಳಕೆರೆಗೆ ಆದ್ಯತೆ ದೊರೆತಿಲ್ಲವೇ? ಎಂಬ ಪ್ರಶ್ನೆಗಳಿಗೆ ಸಂಬಂಧಪಟ್ಟವರು ಸ್ಪಷ್ಟ ಉತ್ತರ ನೀಡದೆ ನೇಪತ್ಯಕ್ಕೆ ಸರಿದಿದ್ದಾರಾ ಎಂಬ ಭಾವನೆಗಳು ಮೂಡಿವೆ.

ಜಿಲ್ಲೆಗೆ ನಾಲ್ಕು ಟಿಎಂಸಿ ನೀರು ತಂದಿದ್ದೇವೆ ಎಂಬುದು ಒಂದು ಸಾಧನೆಯಾಗಿರಬಹುದು. ಆದರೆ ಆ ನೀರು ಚಳ್ಳಕೆರೆ ತಾಲೂಕಿನ ಯಾವ ಕೆರೆಗೆ ಎಷ್ಟು ಪ್ರಮಾಣದಲ್ಲಿ ತಲುಪಿದೆ, ಎಷ್ಟು ಕೆರೆಗಳು ಭಾಗಶಃ ತುಂಬಿವೆ, ಇನ್ನೆಷ್ಟು ಕೆರೆಗಳಿಗೆ ನೀರು ಹರಿಸಬೇಕಿದೆ ಎಂಬ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಗಳು ಸಿಕ್ಕಿಲ್ಲ. ನೀರು ಬಂದಿರುವುದನ್ನು ಸಾಧನೆ ಎಂದು ಬಿಂಬಿಸುವುದಕ್ಕಿಂತ ನೀರು ತಲುಪಬೇಕಾದ ಕೆರೆಗಳಿಗೆ ಮುಟ್ಟಿದೆಯೇ ಎಂಬುದೇ ಮುಖ್ಯವಾಗಬೇಕೆನ್ನುತ್ತಾರೆ ರೈತಾಪಿ ಸಮುದಾಯ.

ಬಾಕ್ಸ್‌... ರಾಣೀಕೆರೆ ಭಾಗದಲ್ಲಿ ಹೋರಾಟಕ್ಕೆ ಸಿದ್ಧತೆತಾಲೂಕಿನ ಮೀರಾಸಾಬಿಹಳ್ಳಿ ಹತ್ತಿರದ ರಾಣೀಕೆರೆ ಪೂರಕ ನಾಲೆ ಒಕ್ಕೂಟದ ಪದಾಧಿಕಾರಿಗಳು ಈಗಾಗಲೇ ಸಭೆ ಸೇರಿ ಹೋರಾಟಕ್ಕೆ ನಿರ್ಧರಿಸಿದ್ದಾರೆ ಎನ್ನಲಾಗಿದೆ. ರಾಜ್ಯದ ಎರಡನೇ ಅತಿದೊಡ್ಡ ಕೆರೆ ರಾಣೀಕೆರೆಗೆ ಭದ್ರಾ ನೀರು ಬರಲಿದೆ ಎಂಬ ಭರವಸೆ ಇತ್ತು. ಆದರೆ, ಇದೀಗ ನಿರಾಸೆಯಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಅಂತರ್ಜಲ ಮಟ್ಟ ಹಾಗೂ ಕುಡಿಯುವ ನೀರಿಗೂ ಸಮಸ್ಯೆ ಆಗಲಿದೆ. ಹಿರಿಯೂರಿನಲ್ಲಿ ನಡೆದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಸಿಎಂ ಅವರಿಗೆ ಸಚಿವ ರಘುಮೂರ್ತಿ ಅವರು ಇನ್ನೂ 2ಟಿಎಂಸಿ ನೀರು ಬೇಕು ಎಂದು ಮನವಿ ಮಾಡಿದ್ದಾರೆ. ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ರಾಣೀಕೆರೆಗೆ ನೀರು ಬರುವಂತೆ ಮಾಡಬೇಕು ಎನ್ನುತ್ತಾರೆ ತಾಲೂಕು ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ. ಸಿ. ಶಿವಲಿಂಗಪ್ಪ ಆಗ್ರಹಿಸಿದ್ದಾರೆ.

-------------

ಪೋಟೋ: ಅರ್ಧದಷ್ಟೂ ತುಂಬದ ಸಾಣೀಕೆರೆ ಕೆರೆ.

ಪೋಟೋ:ಸಚಿವ ರಘುಮೂರ್ತಿ