ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆಯಾಗುತ್ತಿದ್ದು, ಮಂಗಳವಾರವೂ ಮುಂದುವರೆದಿದೆ. ಮಂಗಳವಾರ ಜಿಲ್ಲೆಯಾದ್ಯಂತ ಬೆಳಿಗ್ಗೆಯಿಂದ ಬಿಸಿಲು ಮತ್ತು ಮೋಡ ಕವಿದ ವಾತಾವರಣವಿದ್ದು, ಬಿಸಿ ಗಾಳಿ ಬೀಸುತ್ತಿತ್ತು. ಮಧ್ಯಾಹ್ನ ನಾಲ್ಕು ಗಂಟೆಯ ವೇಳೆಗೆ ನಗರ ಮತ್ತು ಗ್ರಾಮಾಂತರದಲ್ಲಿ ಭಾರೀ ಮಳೆ ಸುರಿಯಿತು. ಇದರಿಂದ ನಗರದ ಕೆಲವು ಬಡಾವಣೆಗಳು ಜಲಾವೃತಗೊಂಡಿವೆ.ನಗರದಲ್ಲಿ ಮಳೆ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿಯದೆ ರಸ್ತೆಯಲ್ಲೇ ನಿಂತಿದೆ. ನಗರದ ಬಜಾರ್ ರಸ್ತೆ,ಎಂಜಿ ರಸ್ತೆ, ಬಿ.ಬಿ.ರಸ್ತೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ 44 ಮತ್ತು 239 ರಲ್ಲಿ ರಸ್ತೆಗಳು ಕೆರೆಗಳಂತಾಗಿವೆ.
ಪೆಟ್ರೋಲ್ ಬಂಕ್ ಜಲಾವೃತತಾಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ಅರೂರಿನ ನಯಾರಾ ಪೆಟ್ರೋಲ್ ಬಂಕ್ ಜಲಾವೃತಗೊಂಡು ಪೆಟ್ರೋಲ್ ಬಂಕ್ ನ ಒಳಗೆ ನೀರು ತುಂಬಿತು. ತುಂಬಿದ ನೀರನ್ನು ಹೊರ ಹಾಕಲು ಬಂಕ್ ಸಿಬ್ಬಂಧಿ ಹರ ಸಾಹಸಪಟ್ಟರು.
ನಗರ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದ ವಾರ್ಡ್ ನಂ 6 ಈದ್ಗಾ ಮಸೀದಿ ಹಿಂಭಾಗದ ಪ್ರದೇಶದ ಸುಮಾರು 15 ಮನೆಗಳಿಗೆ ಮಳೆ ನೀರು ರಭಸವಾಗಿ ನುಗ್ಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು ಇತ್ತ ಗಮನ ಹರಿಸುತ್ತಿಲ್ಲ. ಸುಮಾರು ದಿನಗಳಿಂದ ಚರಂಡಿಗಳನ್ನು ಸ್ವಚ್ಛತೆ ಮಾಡಿ ಅಂತ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಆರೋಗ್ಯಾಧಿಕಾರಿ ಮುರಳಿ ರವರಿಗೆ ಫೋನ್ 4 ಬಾರಿ ಮಾಡಿದರು ಫೋನ್ ರಿಸೀವ್ ಮಾಡುವುದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.ನೀರಿನಲ್ಲಿ ಹರಿದುಬಂದ ಹಾವು
ಮನೆಗಳಲ್ಲಿ ಮಳೆ ನೀರಿನ ಜೊತೆಗೆ ಹಾವುಗಳು ಕಪ್ಪೆಗಳು ಸೇರಿಕೊಂಡಿವೆ. ಯಾರಿಗಾದರೂ ತೊಂದರೆಯಾದಲ್ಲಿ ನಗರಸಭೆಯೆ ನೇರ ಹೊಣೆಯಾಗಿರುತ್ತದೆ. ನಗರಸಭೆ ಆಡಳಿತಾಧಿಕಾರಿ ಆಗಿರುವ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಬೇಕಾಗಿ ನಗರಸಭಾ ಸದಸ್ಯ ರುಕ್ಮಿಣಿ ಮುನಿರಾಜು ಮನವಿ ಮಾಡಿದ್ದಾರೆ. ನಗರಸಭಾ ಆಯುಕ್ತ ಉಮಾ ಶಂಕರ್ ಸ್ಥಳಕ್ಕೆ ಬಂದು ಪರಿಶೀಲಿಸಿ ಹೊಸ ಚರಂಡಿಯನ್ನು ಮಾಡುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಮನೆಗಳಲ್ಲಿ ನೀರು ತುಂಬಿರುವುದನ್ನು ಹೊರ ಹಾಕುವುದಕ್ಕೆ ಮತ್ತು ಚರಂಡಿಗಳನ್ನು ಸ್ವಚ್ಛತೆ ಮಾಡುವುದಕ್ಕೆ ಪೌರಕಾರ್ಮಿಕರಿಗೆ ಸೂಚನೆ ನೀಡಿದ್ದಾರೆ .ಜಿಲ್ಲೆಯಾದ್ಯಂತ ಉತ್ತಮ ಮಳೆ
ಮಳೆಯಿಂದಾಗಿ ನಗರದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹಾಗೂ ಬೀದಿ ಬದಿ ವ್ಯಾಪಾರಿಗಳು ಪರದಾಡಬೇಕಾಯಿತು. ವಾಹನ ಸಂಚಾರಕ್ಕೂ ಸಮಸ್ಯೆಯಾಗಿತ್ತು. ಜೋರು ಮಳೆಯಿಂದಾಗಿ ಚರಂಡಿಗಳು ತುಂಬಿ ಹರಿದಿದ್ದು, ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿಕೊಂಡಿತ್ತು. ಜಿಲ್ಲೆಯಾದ್ಯಂತ ಸಂಜೆ ಮಳೆ ಸುರಿದಿದೆ.ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನರ ನೆಮ್ಮದಿ ಭಂಗವಾಗಿದೆ ಇನ್ನೂ ರೈತರ ಸ್ಥಿತಿ ಕೇಳುವ ಹಾಗೆ ಇಲ್ಲ. ಹೌದು ಜಿಲ್ಲೆಯಲ್ಲಿ ದಿನೇದಿನೇ ಮಳೆ ಹೆಚ್ಚಾಗುತ್ತಿದ್ದು ಜಿಲ್ಲಾ ಮತ್ತು ತಾಲೂಕು ಆಡಳಿತಗಳು ನಾಗರಿಕರಿಗೆ ಜಾಗೃತಿಯಿಂದ ಇರಬೇಕೆಂದು ಈಗಾಗಲೇ ಮುನ್ಸೂಚನೆಯನ್ನು ನೀಡಿದ್ದಾರೆ. ಶಿಥಿಲ ವ್ಯವಸ್ಥೆಯಲ್ಲಿರುವ ಮನೆಗಳಲ್ಲಿ ಯಾರು ವಾಸ ಇರಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜನಜೀವನ ಅಸ್ತವ್ಯಸ್ತಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ಮತ್ತೂಂದೆಡೆ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಸಣ್ಣ ಪುಟ್ಟ ಕೆರೆಗಳು,ಕುಂಟೆಗಳು ಮತ್ತು ಚೆಕ್ ಡ್ಯಾಂಗಳು ಮೈದುಂಬಿ ಹರಿಯುತ್ತಿವೆ. ಜಿಲ್ಲೆಯಲ್ಲಿ ಕಳೆದ ವರ್ಷ ಬರದಿಂದ ತತ್ತರಿಸಿದ್ದ ರೈತರು ಮತ್ತು ಜಿಲ್ಲೆಯ ಜನತೆ ಕೆರೆ,ಕುಂಟೆಗಳಿಗೆ ನೀರು ಬರುತ್ತಿದ್ದು, ಅಂತರ್ಜಲಮಟ್ಟ ಅಭಿವೃದ್ಧಿಯಾಗಲಿದೆ ಎಂದು ಸಂತಸಗೊಡಿದ್ದಾರೆ.