ಸಾರಾಂಶ
ಹನೂರು ತಾಲೂಕಿನ ಚಿಕ್ಕಲ್ಲೂರು ಧಾರ್ಮಿಕ ಕ್ಷೇತ್ರದಲ್ಲಿ ಕೊನೆಯ ದಿನ ಮುತ್ತತ್ತಿರಾಯನ ಸೇವೆ ಕರಿಯಣ್ಣ ಕೆಂಚಣ್ಣ ಸೇವೆಯೊಂದಿಗೆ ಚಿಕ್ಕಲ್ಲೂರು ಜಾತ್ರೆಗೆ ತೆರೆ ಬಿದ್ದಿತು.
ಕನ್ನಡಪ್ರಭ ವಾರ್ತೆ ಹನೂರು ಹನೂರು ತಾಲೂಕಿನ ಚಿಕ್ಕಲ್ಲೂರು ಧಾರ್ಮಿಕ ಕ್ಷೇತ್ರದಲ್ಲಿ ಕೊನೆಯ ದಿನ ಮುತ್ತತ್ತಿರಾಯನ ಸೇವೆ ಕರಿಯಣ್ಣ ಕೆಂಚಣ್ಣ ಸೇವೆಯೊಂದಿಗೆ ಚಿಕ್ಕಲ್ಲೂರು ಜಾತ್ರೆಗೆ ತೆರೆ ಬಿದ್ದಿತು.
ಚಿಕ್ಕಲ್ಲೂರು ಘನನೀಲಿ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವದ ಪ್ರಯುಕ್ತ 5 ದಿನಗಳು ನಡೆದ ಚಂದ್ರಮಂಡಲ ಉತ್ಸವ, ಮುಡಿಸೇವೆ, ಗಜವಾಹನ ಸೇವೆ, ಹುಲಿವಾಹನ ಸೇವೆ ಇನ್ನಿತರ ಪೂಜಾ ಕಾರ್ಯಕ್ರಮಗಳಿಗೆ ಲಕ್ಷಾಂತರ ಭಕ್ತರು ಆಗಮಿಸಿ ಇಷ್ಟಾರ್ಥ ಸಿದ್ಧಿಸುವಂತೆ ಸಿದ್ದಪ್ಪಾಜಿಯಲ್ಲಿ ನಿವೇದನೆ ಮಾಡಿಕೊಂಡರು.ಮುತ್ತತ್ತಿರಾಯನ ಸೇವೆಯ ವಿಶೇಷ: ಚಿಕ್ಕಲೂರು ಪುಣ್ಯಕ್ಷೇತ್ರ ಸಮೀಪದ ಕಾವೇರಿ ನದಿ ಎಡದಂಡೆಗೆ ಮುತ್ತತ್ತಿರಾಯನ ದೇವಾಲಯವಿದೆ. ಹಲಗೂರಿಗೆ ಕಬ್ಬಿಣ ಭಿಕ್ಷೆಗೆ ಹೋಗುವಂತೆ ಮುತ್ತತ್ತಿರಾಯ ಸಿದ್ದಪ್ಪಾಜಿ ಪವಾಡಗಳಿಗೆ ಸಾಕ್ಷಿಯಾಗಿರುತ್ತಾನೆ. ಇವರಿಬ್ಬರ ಸ್ನೇಹದ ಸಾಕ್ಷಿಯಾಗಿ ಚಿಕ್ಕಲೂರು ಜಾತ್ರೆಯ ಕಡೆಯ ದಿನ ಮುತ್ತತ್ತಿರಾಯನ ಸೇವೆ ಜರುಗಿತು. ಸಸ್ಯಹಾರಿ ಹಾಗೂ ಮಾಂಸಾಹಾರಿ ಅಡುಗೆ ಮಾಡಿ ಅವರ ದಂಡು ಕೋಲು ಕಣಜ ಅರಿಗೆಗಳಿಗೆ ಎಡೆ ಇಟ್ಟು ಪೂಜೆ ಸಲ್ಲಿಸಿ ಮೂರು ನಾಮವನ್ನು ಹಚ್ಚಿಕೊಂಡು ಮುತ್ತತ್ತಿರಾಯನ ಭಕ್ತಿಯ ಪರಾಕಾಷ್ಠೆ ಮೆರೆದರು.ಜಾತ್ರೆಯ ವಿಶೇಷತೆಯಲ್ಲೊಂದು ವಿಶಿಷ್ಟ ಪದ್ಧತಿಯಂತೆ ಉತ್ಸವ ಮೂರ್ತಿಗಳನ್ನು ಹಾಗೂ ಕರಿಯಣ್ಣ ಕೆಂಚಣ್ಣ ದೇವರುಗಳನ್ನು ಅಲಂಕೃತಗೊಳಿಸಿ ವಾದ್ಯ ಮೇಳಗಳ ಮೂಲಕ ದೇವಾಲಯವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿದರು.ಮುತ್ತತ್ತಿರಾಯ ವೈಷ್ಣವ ಪಂಥಕ್ಕೆ ಸೇರಿದ್ದು, ದಾಸಯ್ಯನವರು ಪಾಲಿಸುವ ಆಪರ-ಗೋಪುರವನ್ನು ಚಿಕ್ಕಲೂರು ಕ್ಷೇತ್ರದಲ್ಲಿ ಆಪರ ಗೋಪರ ಎಂದು ಕೂಗುತ್ತಾ ಕುಣಿದು ಕಡಲೆಪುರಿ ತೆಂಗಿನಕಾಯಿ ಚೂರುಗಳು ಮತ್ತು ಬೆಲ್ಲ ಮಿಶ್ರಿತ ಪದಾರ್ಥಗಳನ್ನು ಗೋಪುರದ ರೀತಿಯಲ್ಲಿ ಗುಡ್ಡೆ ಹಾಕಿ ಅದನ್ನು ಕೈಯಲ್ಲಿ ಮುಟ್ಟದೆ ಬಾಯಿಂದಲೇ ಪದಾರ್ಥಗಳನ್ನು ಮುಗಿಬಿದ್ದು ತಿನ್ನುವ ಮೂಲಕ ಕರಿಯಣ್ಣ ಮತ್ತು ಕೆಂಚಣ್ಣ ದೇವರುಗಳನ್ನು ತೃಪ್ತಿಪಡಿಸುವ ಸಂಕೇತವಾಗಿ ಸಾಂಪ್ರದಾಯವನ್ನು ಪಾಲಿಸುವ ಮೂಲಕ ಮುತ್ತತ್ತಿರಾಯ ಹಾಗೂ ಸಿದ್ದಪಾಜಿಯ ಭಕ್ತಿಯ ಪರಾಕಾಷ್ಠೆ ಮೆರೆದರು.5ನೇ ದಿನ ಚಿಕ್ಕಲೂರು ಸಿದ್ದಪ್ಪಾಜಿ ಮಂಟೇಸ್ವಾಮಿ ಜಾತ್ರೆಯ ಕೊನೆಯ ದಿನ ಸೋಮವಾರ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಭಕ್ತರು ಸಿದ್ದಪ್ಪಾಜಿಗೆ ಪೂಜೆ ಸಲ್ಲಿಸಿ, ನಂತರ ಮುತ್ತತ್ತಿರಾಯನ ಸೇವೆ ಮಾಡುವ ಮೂಲಕ ಭಕ್ತರ ತಮ್ಮೆಲ್ಲ ಕಷ್ಟಕಾರ್ಪಣ್ಯಗಳನ್ನು ದೂರ ಮಾಡುವಂತೆ ನಿವೇದನೆ ಮಾಡುವ ಮೂಲಕ ವಿಜೃಂಭಣೆಯಾಗಿ ಜಾತ್ರೆ ಅಂತ್ಯ ಗೊಂಡಿತು.ಇದೇ ವೇಳೆ ಮಾಯೆಗೌಡ ವೆಂಕರಾಜು ಮಹೇಶ ಗೋವಿಂದೇಗೌಡ ಮುತ್ತುರಾಜು, ಕೆಂಚೇಗೌಡ ವಾಸು ಸಂತೋಷ್ ಮಹದೇವಸ್ವಾಮಿ ಇನ್ನಿತರರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಜಿಲ್ಲಾಡಳಿತ, ಪೊಲೀಸ್ ಇಲಾಖೆ ಗಲಭೆಗಳು ನಡೆಯದಂತೆ ಜಾತ್ರೆಯಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.