ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸಿಲಿಕಾನ್‌ ಸಿಟಿ ಬೆಂಗಳೂರಿಗಿಂತ ಚಿಕ್ಕಮಗಳೂರಿನಲ್ಲಿ ಕಸ ವಿಲೇವಾರಿ ಶುಲ್ಕ ದುಬಾರಿಯಾಗಿದ್ದು, ಮನೆ, ಹೋಟೆಲ್‌, ರೆಸ್ಟೋರೆಂಟ್‌, ಆಸ್ಪತ್ರೆ, ಶಾಲಾ-ಕಾಲೇಜು, ಕಲ್ಯಾಣ ಮಂಟಪ, ಬ್ಯೂಟಿ ಪಾರ್ಲರ್‌ ಸೇರಿದಂತೆ ಎಲ್ಲ ಕಟ್ಟಡಗಳಿಂದ ನಗರ ಸಭೆಯು ಮಾಸಿಕ 50 ರು. ನಿಂದ ಬರೋಬ್ಬರಿ 6,500 ರು. ವಸೂಲಿ ಮಾಡುತ್ತಿದೆ.

ರಾಜಧಾನಿ ಬೆಂಗಳೂರಿನಲ್ಲಿ 600 ಚದರಡಿ ವರೆಗೆ ಮನೆಗೆ ಕೇವಲ ಮಾಸಿಕ ಕೇವಲ 10 ರು. ಶುಲ್ಕ ಸಂಗ್ರಹಿಸಲಾಗುತ್ತಿದೆ. ಆದರೆ, ಚಿಕ್ಕಮಗಳೂರು ನಗರದಲ್ಲಿ ಬರೋಬ್ಬರಿ 50 ರು. ಶುಲ್ಕ ವಸೂಲಿಗೆ ಮಾಡಲಾಗುತ್ತಿದೆ. ಅವೈಜ್ಞಾನಿಕವಾಗಿ ಸಣ್ಣ ಮನೆಗೂ 50 ರು. ದೊಡ್ಡ ದೊಡ್ಡ ವಸತಿ ಕಟ್ಟಡಕ್ಕೂ ಕೇವಲ 50 ರು. ದರ ನಿಗದಿಪಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿವೆ.

ಚಿಕ್ಕಮಗಳೂರಿನ ನಗರ ಸಭೆಯು ವಿಧಿಸುತ್ತಿರುವ ಶುಲ್ಕವನ್ನು ಸಾರ್ವಜನಿಕರು ಪಾವತಿ ಮಾಡಿದರೂ ಮನೆ ಮನೆಗೆ ಪ್ರತಿ ದಿನ ಕಸ ಸಂಗ್ರಹಿಸುವ ವಾಹನ ಹೋಗಿ ತ್ಯಾಜ್ಯ ಸಂಗ್ರಹಿಸುವ ಕೆಲಸ ಮಾಡುತ್ತಿಲ್ಲ. ಹೀಗಾಗಿ, ನಗರದ ಖಾಲಿ ನಿವೇಶನಗಳಲ್ಲಿ, ಮೈದಾನಗಳಲ್ಲಿ ಮತ್ತು ರಸ್ತೆಯ ಅಕ್ಕ-ಪಕ್ಕದಲ್ಲಿ ಕಸ ರಾಶಿಗಳು ಬಿದ್ದಿರುವುದನ್ನು ಕಾಣಬಹುದಾಗಿದೆ.


ಖಾಸಗಿ ಸಂಸ್ಥೆ ವಿಧಿಸಿದ ಶುಲ್ಕವನ್ನೇ ವಸೂಲಿ:

ಚಿಕ್ಕಮಗಳೂರಿನಲ್ಲಿ ಈ ಹಿಂದೆ ನಿರ್ಮಲ ಭಾರತಿ ಎಂಬ ಸಂಸ್ಥೆಯು ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ತೆಗೆದುಕೊಂಡಿತ್ತು. ಆ ಸಂಸ್ಥೆಯು ಶುಲ್ಕವನ್ನು ನಿಗದಿ ಪಡಿಸಿಕೊಂಡು ವಸೂಲಿ ಮಾಡುತ್ತಿತ್ತು. ಆ ಸಂಸ್ಥೆಯ ಕಾರ್ಯ ನಿರ್ವಹಣೆ ಬಗ್ಗೆ ಸಾಕಷ್ಟು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕಳೆದ ಜನವರಿಯಿಂದ ನಗರ ಸಭೆಯಿಂದ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುವುದಕ್ಕೆ ತೀರ್ಮಾನಿಸಲಾಗಿದೆ. ಈ ವೇಳೆ ಈ ಹಿಂದೆ ಖಾಸಗಿ ಸಂಸ್ಥೆಯು ನಿಗದಿ ಪಡಿಸಿ ವಸೂಲಿ ಮಾಡುತ್ತಿದ್ದ ದರವನ್ನೇ ವಸೂಲಿ ಮಾಡುವುದಕ್ಕೆ ನಗರ ಸಭೆಯ ಸದಸ್ಯರ ತೀರ್ಮಾನ ಮಾಡಿಕೊಂಡಿದ್ದಾರೆ. ನಗರ ಸಭೆಯು ವಾರ್ಷಿಕ 2 ರಿಂದ 2.5 ಕೋಟಿ ರು, ನಷ್ಟು ಕಸ ಶುಲ್ಕದಿಂದ ಆದಾಯ ಸಂಗ್ರಹಿಸಲಾಗುತ್ತಿದೆ.

ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಆಟೋ ಟಿಪ್ಪರ್

ನಗರಸಭೆ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ಮಾಡಲು 28 ಅಟೋ ಟಿಪ್ಪರ್ ಗಳನ್ನು ಬಳಕೆ ಮಾಡಲಾಗುತ್ತಿದೆ. ಆದರೆ ಬಾರಿ ಹಳೆಯದಾದ ಈ ಆಟೋ ಟಿಪ್ಪರ್ ಗಳು ಎಷ್ಟೇ ರಿಪೇರಿ ಮಾಡಿಸಿದರು ಕಸ ಸಂಗ್ರಹಣೆಗೆ ಹೋದಾಗ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ.

ಹೀಗೆ ಆಟೋ ಟಿಪ್ಪರ್ಗಳು ಕೆಟ್ಟು ನಿಲ್ಲುತ್ತಿರುವುದರಿಂದಾಗಿ ಪ್ರತಿ ಮನೆ, ಅಂಗಡಿ, ಹೋಟೆಲ್ ಗಳು ಸೇರಿದಂತೆ ಎಲ್ಲೆಡೆಯಿಂದ ಪ್ರತಿದಿನ ಕಸ ಸಂಗ್ರಹಣೆ ಮಾಡುವುದು ಪೌರಕಾರ್ಮಿಕರಿಗೆ ಕಷ್ಟವಾಗುತ್ತಿದೆ. ಕಸ ತುಂಬಿಕೊಂಡು ಬರುವಾಗ ಆಟೋ ಟಿಪ್ಪರ್ ಕೆಟ್ಟು ನಿಂತಿತು ಎಂದರೆ ಒಂದು ಆಟೋ ಟಿಪ್ಪರ್‌ನಿಂದ ಇನ್ನೊಂದು ಆಟೋ ಟಿಪ್ಪರ್‌ಗೆ ಕಸವನ್ನು ವರ್ಗಾವಣೆ ಮಾಡಲು ಪೌರಕಾರ್ಮಿಕರು ಹರಸಾಹಸ ಪಡಬೇಕಿದೆ. ಇದೇ ಕಾರಣದಿಂದಾಗಿ ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲಿ ಇದೀಗ ಹಸಿ ಕಸ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹ ಮಾಡುತ್ತಿಲ್ಲ.

ಚಿಕ್ಕಮಗಳೂರು ನಗರ ಸಭೆಯ ಕಸ ಶುಲ್ಕದ ಪಟ್ಟಿ:

(ಮಾಸಿಕ ರು) ಮನೆ: 50 ರು.

ಪ್ರಾವಿಜನ್ ಸ್ಟೋರ್‌ : 80 ರಿಂದ 100 ರು.

ಕಟಿಂಗ್ ಶಾಪ್‌: 100 ರಿಂದ 200

ಬ್ಯೂಟಿ ಪಾರ್ಲರ್: 300ರು.ನಿಂದ 1000 ರು.

ಬೇಕರಿ: 500 ರು.ನಿಂದ 4,000 ರು.

ಹೋಟೆಲ್‌, ಬಾರ್ ಅಂಡ್ ರೆಸ್ಟೋರೆಂಟ್‌: 500ರು.ನಿಂದ 3000 ರು.

ಬಟ್ಟೆ ಅಂಗಡಿ: 300ರು.ನಿಂದ 1000 ರು.

ಚಿಕನ್‌ ಶಾಪ್‌: 400ರು.ನಿಂದ 1200 ರು.

ಮಟನ್‌ ಶಾಪ್‌: 500 ರು.

ಹಣ್ಣಿನ ಅಂಗಡಿ: 300 ರು.

ಜ್ಯೂಸ್‌ ಶಾಪ್‌: 300ರು.ನಿಂದ 800 ರು.

ಶಾಲೆ: 500ರು.ನಿಂದ 3,500 ರು.

ಛತ್ರ : 1000ರು.ನಿಂದ 1,500 ರು.

ವಾಹನ ಶೋ ರೂಂ:1000ರು.ನಿಂದ 3000 ರು.

ಬ್ಯಾಂಕ್‌: 500 ರು.

ಆಸ್ಪತ್ರೆ: 200ರು.ನಿಂದ 4000 ರು.

ಖಾಸಗಿ ಪಿಜಿಗೆ : 200 ರು.

ಹಾಸ್ಟಲ್‌ಗೆ: 3000 ರು.

ಮಾರ್ಟ್‌: 1500ರು.ನಿಂದ 5000 ರು.

ಬಸ್‌ ಡಿಪೋ: 6500 ರು.

ಬಸ್‌ ಸ್ಟ್ಯಾಂಡ್‌: 5000 ರು.

ಘನತ್ಯಾಜ್ಯ ನಿಯಮದಲ್ಲಿ ಕನಿಷ್ಠ 15 ರು.ನಿಂದ 100 ರು. ವರೆಗೆ ವಸೂಲಿ ಮಾಡುವುದಕ್ಕೆ ಅವಕಾಶವಿದೆ. ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಎಲ್ಲ ಮನೆಯಿಂದ ಮಾಸಿಕ 50 ರು. ಸಂಗ್ರಹಿಸುವುದಕ್ಕೆ ತೀರ್ಮಾನ ಮಾಡಲಾಗಿದೆ. ಅದರಂತೆ ಸಂಗ್ರಹಿಸಲಾಗುತ್ತಿದೆ.

ಬಿ.ಸಿ.ಬಸವರಾಜ್ ನಗರಸಭೆ ಆಯುಕ್ತ.