ಚಿಕ್ಕಮಗಳೂರಿನಲ್ಲಿ ಪ್ಯಾಲಸ್ತೀನ್‌ ಧ್ವಜ ಹಾರಾಟ : ವೀಡಿಯೋ ವೈರಲ್‌, ಹಿಂದು ಸಂಘಟನೆಗಳ ಪ್ರತಿಭಟನೆ

| Published : Sep 16 2024, 09:46 AM IST / Updated: Sep 16 2024, 09:47 AM IST

palestine flag
ಚಿಕ್ಕಮಗಳೂರಿನಲ್ಲಿ ಪ್ಯಾಲಸ್ತೀನ್‌ ಧ್ವಜ ಹಾರಾಟ : ವೀಡಿಯೋ ವೈರಲ್‌, ಹಿಂದು ಸಂಘಟನೆಗಳ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು ನಗರದಲ್ಲಿ ಯುವಕರಿಬ್ಬರು ಭಾನುವಾರ ಪ್ಯಾಲೆಸ್ತೇನಿಯನ್ ಧ್ವಜ ಹಿಡಿದು ನಗರದಾದ್ಯಂತ ಸಂಚಾರ ನಡೆಸಿದ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಿಂದ ನಗರದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಚಿಕ್ಕಮಗಳೂರು :  ಚಿಕ್ಕಮಗಳೂರು ನಗರದಲ್ಲಿ ಯುವಕರಿಬ್ಬರು ಭಾನುವಾರ ಪ್ಯಾಲೆಸ್ತೇನಿಯನ್ ಧ್ವಜ ಹಿಡಿದು ನಗರದಾದ್ಯಂತ ಸಂಚಾರ ನಡೆಸಿದ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಿಂದ ನಗರದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಸೋಮವಾರ ಈದ್ ಮಿಲಾದ್ ಮೆರವಣಿಗೆಗೆ ಸಿದ್ಧತೆ ನಡೆಯುತ್ತಿರುವಾಗಲೇ ಮುಸ್ಲಿಂ ಯುವಕರು ಪ್ಯಾಲೆಸ್ತೇನ್ ಧ್ವಜ ಹಿಡಿದು ಓಡಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿಕ್ಕಮಗಳೂರಿನ ಕೆ.ಎಂ.ರಸ್ತೆ ಸೇರಿ ಪ್ರಮುಖ ರಸ್ತೆಗಳಲ್ಲಿ ಯುವಕರು ಧ್ವಜ ಹಿಡಿದು ಓಡಾಟ ನಡೆಸಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ನಗರ ಪೊಲೀಸ್ ಠಾಣೆ ಎದುರು ಜಮಾಯಿಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ಯಾಲೆಸ್ತೇನ್‌ ಧ್ವಜ ಹಿಡಿದು ಓಡಾಡುವ ಮೂಲಕ ದೇಶ ದ್ರೋಹದ ಕೆಲಸ ಮಾಡಿರುವ ಯುವಕರನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಬಜರಂಗದಳದ ಜಿಲ್ಲಾ ಸಹ ಸಂಚಾಲಕ ಶ್ಯಾಮ್ ವಿ.ಗೌಡ, ವಿಎಚ್‌ಪಿ ಮುಖಂಡ ದಿಲೀಪ್‌ ಶೆಟ್ಟಿ, ನಗರಾಧ್ಯಕ್ಷ ಕೃಷ್ಣ, ಅಮಿತ್, ರಾಜೇಶ್, ಮಂಜು, ಕಿಟ್ಟಿ, ಜಾನಕಿ ರಾಮ್ ಹಾಗೂ ಕಾರ್ಯಕರ್ತರು ಇದ್ದರು.