ಸಾರಾಂಶ
ನರಗುಂದ: ಮೂಲಸೌಲಭ್ಯಕ್ಕೆ ಆಗ್ರಹಿಸಿ ತಾಲೂಕಿನ ಚಿಕ್ಕನರಗುಂದ ಗ್ರಾಮಸ್ಥರು ಗುರುವಾರ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ಮಾಡಿದರು. ಈ ವೇಳೆ ಗ್ರಾಮದ ಶಾಲಾ-ಕಾಲೇಜು, ಅಂಗನವಾಡಿ, ಸಹಕಾರಿ ಸಂಘ, ಬ್ಯಾಂಕ್ ಬಂದ್ ಮಾಡಿಸಿದರು.ಗ್ರಾಮದಲ್ಲಿ ಸರ್ಕಾರ ಭೂ ಸ್ವಾಧೀನ ಮಾಡಿಕೊಂಡ ಭೂಮಿಗೆ ಪರಿಹಾರ ನೀಡಿಲ್ಲ ಎಂಬ ಕಾರಣ ನೀಡಿ ಗ್ರಾಮದ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಭೂ-ಮಾಲೀಕರು ಅಡ್ಡಿ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಶಾಲಾ ವಿದ್ಯಾರ್ಥಿಗಳು, ವಯಸ್ಸಾದವರು ಕೆಸರು ರಸ್ತೆಯಲ್ಲಿಯೇ ಸಂಚಾರ ಮಾಡುತ್ತಿದ್ದಾರೆ. ಈ ಪರಿಸ್ಥಿತಿಯನ್ನು ನೋಡಲಾಗದ ಗ್ರಾಮಸ್ಥರು ಹದಗೆಟ್ಟ ರಸ್ತೆಗೆ ಮಣ್ಣು ಹಾಕಲು ಮುಂದಾಗಿದ್ದರು. ಆದರೆ ಭೂಮಾಲೀಕರು ಇದಕ್ಕೆ ಅವಕಾಶ ಕೊಡಲಿಲ್ಲ. ಪದೇ ಪದೇ ಭೂಮಾಲೀಕರ ಕಿರಿಕಿರಿಗೆ ಬೇಸತ್ತು ಪ್ರತಿಭಟನೆಗೆ ಇಳಿದಿದ್ದೇವೆ ಎಂದು ಗ್ರಾಮಸ್ಥರು ಹೇಳಿದರು.ಕಳೆದ ವರ್ಷ ಶಾಸಕ ಸಿ.ಸಿ. ಪಾಟೀಲ ಅವರು ಲೋಕೋಪಯೋಗಿ ಸಚಿವರಾಗಿದ್ದಾಗ ಭೂಮಾಲೀಕರ ಜತೆ ಮಾತುಕತೆ ನಡೆಸಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದರು. ಅದರಂತೆ ಪರಿಹಾರ ಫಲಾನುಭವಿಗಳಿಗೆ ಕೊಡುವ ಹಂತದಲ್ಲಿರುವಾಗ ಗ್ರಾಮದ ಕೆಲವು ಪ್ರಮುಖ ವ್ಯಕ್ತಿಗಳು ಪರಿಹಾರ ಕೊಡಬಾರದೆಂದು ತಕರಾರು ಅರ್ಜಿ ಸಲ್ಲಿಸಿದರು. ಈ ಕಾರಣದಿಂದ ಪರಿಹಾರ ವಿತರಣೆಗೆ ಅಡಚಣೆಯಾಗಿದೆ. ಪರಿಹಾರ ಬಾರದ ಕಾರಣ ಈಗ ಮತ್ತೆ ಭೂಮಾಲೀಕರು ರಸ್ತೆ, ಚರಂಡಿ ಇತರ ಕೆಲಸ-ಕಾರ್ಯಗಳಿಗೆ ಅಡ್ಡಿ ಮಾಡಿದ್ದಾರೆ. ಗ್ರಾಮದಲ್ಲಿ ಭೂಮಾಲೀಕರು ಮತ್ತು ಗ್ರಾಮಸ್ಥರ ಮಧ್ಯೆ ಸಂಘರ್ಷ ಉಂಟಾಗುವ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಗ್ರಾಮಕ್ಕೆ ಆಗಮಿಸುವ ಸಂದರ್ಭದಲ್ಲಿ ಎಲ್ಲ ರಸ್ತೆಗಳಿಗೆ ಅಡ್ಡಲಾಗಿ ಜೆಸಿಬಿಯಿಂದ ತೆಗ್ಗು ತೆಗೆದು, ದಾರಿ ಬಂದ ಮಾಡಿ ಗ್ರಾಮ ಪ್ರವೇಶಕ್ಕೆ ದಿಗ್ಬಂಧನ ಹೇರಲಾಗಿತ್ತು.
ಗ್ರಾಮದ 50 ವರ್ಷ ಹಿಂದಿನ ಅಂಗನವಾಡಿ, ಹಾಲಿನ ಡೇರಿ ಇತರ ಸರ್ಕಾರಿ ಕಟ್ಟಡಗಳು ನಮ್ಮ ಸ್ವಂತ ಜಾಗದಲ್ಲಿವೆ ಎಂದು ಭೂಮಾಲೀಕರು ತಗಾದೆ ತೆಗೆದಿದ್ದಾರೆ. ಜೆಸಿಬಿ ತಂದು ಕೆಲವು ಕಟ್ಟಡ ಕೆಡವಿದ್ದಾರೆ. ಈ ಕಾರಣದಿಂದ ಭೂಮಾಲೀಕರಿಗೆ ಪರಿಹಾರ ಕೊಡಬಾರದೆಂದು ಗ್ರಾಮಸ್ಥರು ತಕರಾರು ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಅವರಿಗೆ ಪರಿಹಾರ ದೊರಕುವಲ್ಲಿ ವಿಳಂಬವಾಗುತ್ತಿದೆ ಎನ್ನಲಾಗಿದೆ.ಗ್ರಾಮಸ್ಥರ ಪ್ರತಿಭಟನೆ ಮಾಹಿತಿ ತಿಳಿದು ತಹಸೀಲ್ದಾರ್, ತಾಪಂ ಇಒ, ಲೋಕೋಪಯೋಗಿ ಇಲಾಖೆ ಅಧಿಕಾರಿ, ಪಿಎಸ್ಐ ಇತರರ ಅಧಿಕಾರಿಗಳು ಆಗಮಿಸಿದರು. ಗ್ರಾಮಸ್ಥರು ತಹಸೀಲ್ದಾರ್‌ಗೆ ಸಮಸ್ಯೆಗಳನ್ನು ವಿವರಿಸಿ, ಮಾಹಿತಿ ನೀಡಿದರು. ಸಮಸ್ಯೆ ಬಗೆಹರಿಸದಿದ್ದರೆ ಗ್ರಾಮಕ್ಕೆ ಅಧಿಕಾರಿಗಳಿಗೆ ಪ್ರವೇಶ ನೀಡುವುದಿಲ್ಲ, ಶಾಲಾ-ಕಾಲೇಜು, ಬ್ಯಾಂಕ್ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಪೊಲೀಸ್ ಭದ್ರತೆಯಲ್ಲಿ ರಸ್ತೆ ಕೆಲಸ ಪ್ರಾರಂಭ ಮಾಡುವಂತೆ ತಹಸೀಲ್ದಾರ್ ಶ್ರೀಶೈಲ ತಳವಾರ ಅವರು ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿದರು. ಆನಂತರ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು.70 ವರ್ಷದ ಹಳೇ ರಸ್ತೆಗಳು ಸಾಕಷ್ಟು ಬಾರಿ ಸರ್ಕಾರದಿಂದ ಸುಧಾರಣೆ ಕಂಡಿವೆ. ಇತ್ತೀಚೆಗೆ 10 ವರ್ಷದಿಂದ ಖಾಸಗಿ ವ್ಯಕ್ತಿಗಳ ತಕರಾರಿನಿಂದ ರಸ್ತೆ ಸೇರಿದಂತೆ ಇತರ ಕಾಮಗಾರಿಗಳಿಗೆ ಅಡಚಣೆ ಉಂಟಾಗಿದೆ. ರಸ್ತೆಗಳು ಸುಧಾರಣೆ ಆಗಬೇಕಾಗಿದೆ. ನಮಗೆ ಯಾರ ಮೇಲೂ ದ್ವೇಷ ಇಲ್ಲ. ಗ್ರಾಮದ ಅಭಿವೃದ್ಧಿ ಆಗಬೇಕಷ್ಟೇ ಎಂದು ಗ್ರಾಮಸ್ಥ ಮಂಜುನಾಥ ಕುಲಕರ್ಣಿ ತಿಳಿಸಿದ್ದಾರೆ.ಪರಿಹಾರ ಪಡೆಯುವಲ್ಲಿ ಆಗಿರುವ ಸಮಸ್ಯೆ ಬಗೆಹರಿಸುವ ಬಗ್ಗೆ ಚರ್ಚಿಸಲಾಗುತ್ತಿದೆ. ಗ್ರಾಮದ ರಸ್ತೆ ಅಭಿವೃದ್ಧಿಯನ್ನು ಪೋಲಿಸ್ ಬಂದೋಬಸ್ತ್‌ನಲ್ಲಿ ವಾರದೊಳಗೆ ತಾತ್ಕಾಲಿಕವಾಗಿ ಮಾಡಿಕೊಡಲಾಗುವುದು. ಆನಂತರ ಡಾಂಬರೀಕರ ಮಾಡಿಸಿಕೊಡುತ್ತೇವೆ ಎಂದು ತಹಸೀಲ್ದಾರ್ ಶ್ರೀಶೈಲ ತಳವಾರ ತಿಳಿಸಿದ್ದಾರೆ.