ಸಾರಾಂಶ
ಹೊಳವನಹಳ್ಳಿ ಹೋಬಳಿಯ ಜೀವನಾಡಿಯಾದ ಚಿಕ್ಕಾವಳ್ಳಿ ಧರ್ಮಸಾಗರ ಕೆರೆ ಕೋಡಿ ಬಿದಿದ್ದು ಸಾವಿರಾರು ರೈತರ ಮುಖದಲ್ಲಿ ಮಂದಹಾಸ ಬೀರಿದೆ.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಹೊಳವನಹಳ್ಳಿ ಹೋಬಳಿಯ ಜೀವನಾಡಿಯಾದ ಚಿಕ್ಕಾವಳ್ಳಿ ಧರ್ಮಸಾಗರ ಕೆರೆ ಕೋಡಿ ಬಿದಿದ್ದು ಸಾವಿರಾರು ರೈತರ ಮುಖದಲ್ಲಿ ಮಂದಹಾಸ ಬೀರಿದೆ.ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಚಿಕ್ಕಾವಳ್ಳಿ ಕೆರೆ ಸಣ್ಣ ನೀರಾವರಿ ಇಲಾಖೆಗೆ ಸೇರಿದ್ದು, ಸುಮಾರು ೫೦೦ ವರ್ಷಕ್ಕೂ ಹಳೆಯದಾಗಿದೆ. ಈ ಕೆರೆಯಿಂದ ಹೊಳವನಹಳ್ಳಿ ಹೋಬಳಿ ಸೇರಿದಂತೆ ಮಧುಗಿರಿ ತಾಲೂಕಿನ ಅನೇಕ ಗ್ರಾಮಗಳ ರೈತ ಬೋರ್ ವೆಲ್‌ಗಳಲ್ಲಿ ಅಂತರ್ಜಲ ವೃದ್ದಿಯ ಜತೆಗೆ ಕುಡಿಯುವ ನೀರಿನ ಬವಣೆ ನೀಗಿಸುವ ಕೆರೆಯಾಗಿದೆ. ಈ ಕೆರೆ ತುಂಬಿದರೆ ಸಾವಿರಾರು ರೈತರು ೫ ವರ್ಷಗಳ ಕಾಲ ನೆಮ್ಮದಿಯಾಗಿ ಬೆಳೆ ಬೆಳೆಯುತ್ತಾರೆ.ಈ ಹಿಂದೆ ಬರಗಾಲ ಬಂದಂತ ಸಂದರ್ಭ ಈ ಚಿಕ್ಕಾಚಳ್ಳಿ ಧರ್ಮಸಾಗರ ಕೆರೆ ಬರಿದಾಗಿತ್ತು. ಆ ಸಂದರ್ಭದಲ್ಲಿ ಹೊಳವನಹಳ್ಳಿ ಹೋಬಳಿಯ ಸುಮಾರು ಅಡಿಕೆ, ಬಾಳೆ, ತೆಂಗಿ ತೋಟಗಳು ಒಣಗಿ ಹೋಗಿದ್ದವು. ಅನೇಕ ರೈತರು ಟ್ಯಾಂಕರ್ ಮೂಲಕ ನೀರು ಹಾಯಿಸಿ ತೋಟ ಉಳಿಸಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಈ ಭಾಗದ ರೈತರು ಮತ್ತೆ ಅಡಿಕೆ ಮತ್ತು ತೆಂಗು ಬೆಳೆಸಲು ಮುಂದಾಗಿದ್ದಾರೆ. ಈ ಕೆರೆಗೆ ದೇವರಾಯನದುರ್ಗದಿಂದ ಜಯಮಂಗಲಿ ನದಿ ಹುಟ್ಟಿ ಎಲೆರಾಂಪುರ ಕೆರೆಗೆ ನೀರು ಬಂದು ನಂತರ ತೀತಾ ಜಲಾಶಯಕ್ಕೆ ಬಂದು ನಂತರ ಚಿಕ್ಕಾವಳ್ಳಿ ಕೆರೆಗೆ ಬರುತ್ತವೆ. ಮತ್ತೆ ಆಂಧ್ರ ಪ್ರದೇಶದ ಹಿಂದೂಪುರ ಸಮೀಪ ಇರುವ ಪರಗಿ ಕೆರೆ ಸೇರಲಿದೆ. ಈ ಕೆರೆಯಲ್ಲಿ ಸೀಮೆ ಜಾಲಿ ಗಿಡಗಳು ಬೆಳೆದು ನಿಂತಿದ್ದು, ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆಯ ತುಂಬಾ ಗಿಡ ಗೆಂಟೆಗಳು ಬೆಳದು ನಿಂತಿದೆ ಎಂದು ರೈತರ ಆರೋಪ ಮಾಡಿದ್ದಾರೆ.ರೈತ ಸಂಘದ ತಾಲೂಕು ಅಧ್ಯಕ್ಷ ಕೋಡ್ಲಹಳ್ಳಿ ಸಿದ್ದರಾಜು ಮಾತನಾಡಿ, ಚಿಕ್ಕಾವಳ್ಳಿ ಧರ್ಮಸಾಗರ ಕೆರೆ ಸಣ್ಣ ನೀರಾವರಿ ಇಲಾಖೆಗೆ ಸೇರಿದ್ದು, ಕೆರೆಯ ತೂಬುಗಳಲ್ಲಿ ಹೊಂಡ ಬಿದ್ದು ನೀರು ಪೋಲು ಆಗುತ್ತಿದ್ದರೂ ಯಾವೊಬ್ಬ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ, ಅನೇಕ ಬಾರಿ ತೂಬು ಹಾಗೂ ಕೆರೆಯಲ್ಲಿರುವ ಸೀಮೆ ಜಾಲಿ ಗಿಡಗಳನ್ನ ತೆಗೆಯುವಂತೆ ಮನವಿ ಮಾಡಿದರೂ ಏನು ಪ್ರಯೋಜನವಾಗಿಲ್ಲ ಎಂದು ದೂರಿದರು.