ಸಾರಾಂಶ
ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿ ಸಭೆ । ಕಂಟ್ರೋಲ್ ರೂಂ ಸುಸ್ಥಿತಿಗೆ ನಿರ್ದೇಶನ । ಮುನ್ನೆಚ್ಚರಿಕೆ ಕ್ರಮಕ್ಕೆ ಸಲಹೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಪೂರ್ವ ಮುಂಗಾರು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಹೆಚ್ಚು ಮಳೆಯಾಗುವ ಸಂಭವ ಇರುವುದರಿಂದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕೇಂದ್ರ ಸ್ಥಾನ ಬಿಡದಂತೆ ಹಾಗೂ ಪ್ರತಿದಿನದ ಪರಿಸ್ಥಿತಿಯನ್ನು ಅವಲೋಕಿಸಿ ತಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕೇಸ್ವನ್ ಕೇಂದ್ರದಲ್ಲಿ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಂದ ಮಾಹಿತಿ ಪಡೆದು ಮಾತನಾಡಿ, ಹವಾಮಾನ ವೈಪರೀತ್ಯದ ಮಾಹಿತಿಗಳನ್ನು ಆಗಿಂದಾಗ್ಗೆ ಪಡೆದು ಹೆಚ್ಚಿನ ಅನಾಹುತವಾಗದಂತೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದರು.ತಾಲೂಕು ಕೇಂದ್ರಗಳಲ್ಲಿರುವ ಕಂಟ್ರೋಲ್ ರೂಂಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಸೇರಿದಂತೆ ಹೋಂ ಗಾರ್ಡ್ಸ್, ಸ್ವಯಂ ಸೇವಕರು, ಈಜುಗಾರರು ಸದಾ ಸನ್ನದ್ಧರಾಗಿರಬೇಕು. ಹೆಚ್ಚು ಮಳೆ ಬೀಳುವ ಸಂದರ್ಭದಲ್ಲಿ ಗುಡ್ಡ ಹಾಗೂ ಮಣ್ಣು ಕುಸಿತ ಸಂಭವಿಸುವ ಪ್ರದೇಶಗಳನ್ನು ಗುರುತಿಸಿ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.
ಅರಣ್ಯ, ಮೆಸ್ಕಾಂ, ಪೊಲೀಸ್, ಅಗ್ನಿಶಾಮಕ ಇಲಾಖೆಗಳು ರಕ್ಷಣಾ ಕಾರ್ಯಕ್ಕೆ ಸದಾ ಸನ್ನದ್ಧವಾಗಿರಬೇಕು. ಲಭ್ಯವಿರುವ ಸಲಕರಣೆಗಳನ್ನು ಸಮರ್ಪಕವಾಗಿ ಇರಿಸಿಕೊಳ್ಳಬೇಕು. ಹಿಂದಿನ ಘಟನೆಗಳ ಆಧಾರದ ಮೇಲೆ ದುರ್ಘಟನೆ ಸಂಭಾವ್ಯ ಪ್ರದೇಶಗಳನ್ನು ಗುರುತಿಸಿ ಕಾರ್ಯ ನಿರ್ವಹಿಸಬೇಕು. ಹಾನಿಯಾಗುವ ಪ್ರದೇಶಗಳಿಗೆ ಸಂಬಂಧಿಸಿದ ತಕ್ಷಣ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ಕ್ರಮ ಕೈಗೊಳ್ಳವಂತಿರಬೇಕು. ತಕ್ಷಣ ರಕ್ಷಣಾ ಕಾರ್ಯಾಚರಣೆಗೆ ತಹಸೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿಗಳ ತಂಡ ಕಾರ್ಯೋನ್ಮುಖವಾಗಬೇಕು ಎಂದರು.ಆಯಾ ತಾಲೂಕು ಕೇಂದ್ರಗಳಲ್ಲಿರುವ ಜೆಸಿಬಿ, ಹಿಟಾಚಿ, ಟಿಪ್ಪರ್, ಟ್ರ್ಯಾಕ್ಟರ್‌ಗಳ ಮಾಹಿತಿ ತಿಳಿದುಕೊಂಡಿರಬೇಕು. ಸರ್ಕಾರಿ ವಾಹನಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಎಲ್ಲಾ ತಾಲ್ಲೂಕುಗಳ ತಹಸೀಲ್ದಾರರು ಹೆಚ್ಚು ಹೆಚ್ಚು ಸಭೆಗಳನ್ನು ನಡೆಸಿ ಯಾವುದೇ ಅನಾಹುತಗಳು ಹಾಗೂ ಯಾವುದೇ ಪ್ರಾಣಹಾನಿ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ರಸ್ತೆ ಬದಿಯಲ್ಲಿರುವ ಮರ, ಗಿಡ, ನೀರು ಹರಿಯುವ ಚಾನಲ್‌ಗಳು ಹಾಗೂ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನೀರು ಮತ್ತು ಚರಂಡಿ ವ್ಯವಸ್ಥೆ ಬಗ್ಗೆ ಗಮನ ಹರಿಸಬೇಕು, ಚರಂಡಿಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ವಿದ್ಯುತ್ ಕಂಬಗಳ ಸ್ಥಿತಿಗತಿ ಗಮನಿಸಬೇಕು, ಔಷಧಿ ದಾಸ್ತಾನು, ಜಾನುವಾರುಗಳ ಔಷಧಿ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವಂತೆ ಕ್ರಮ ಕೈಗೊಳ್ಳಬೇಕು. ಹಳೆಯ ಮನೆಗಳ ವಸ್ತು ಸ್ಥಿತಿ, ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳ ಕಟ್ಟಡಗಳು, ಸರ್ಕಾರಿ ಕಚೇರಿ ಕಟ್ಟಡಗಳ ಸ್ಥಿತಿಗತಿಗಳನ್ನು ಪರೀಕ್ಷಿಸಿಕೊಳ್ಳಬೇಕು. ಯಾವುದೇ ಅಧಿಕಾರಿಗಳು ತಮ್ಮ ದೂರವಾಣಿ ಸಂಪರ್ಕಗಳನ್ನು ಸದಾ ಚಾಲನೆಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಮಾತನಾಡಿ, ಜಿಲ್ಲೆಯ ಎಲ್ಲಾ ಗ್ರಾ,ಪಂ.ಗಳ ವ್ಯಾಪ್ತಿಯಲ್ಲಿ ಬರುವ ಕೆರೆಗಳ ಆಸುಪಾಸುಗಳನ್ನು ಸ್ವಚ್ಛಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ಕ್ರಮ ಕೈಗೊಳ್ಳಲು ಎಲ್ಲಾ ಪಿಡಿಒಗಳು ಪರಿಶೀಲಿಸಬೇಕು ಎಂದರು.
ಸ್ಥಳೀಯವಾಗಿ ಆದ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಉದಾಸೀನ ತೋರದೆ ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ಇರಬೇಕು ಎಂದು ತಿಳಿಸಿದರು.ಅಪರ ಜಿಲ್ಲಾಧಿಕಾರಿ ಕನಕರಡ್ಡಿ ನಾರಾಯಣ ರಡ್ಡಿ, ಉಪ ವಿಭಾಗಾಧಿಕಾರಿ ದೇವರಾಜ್, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.