ಸಾರಾಂಶ
- ನಿರೀಕ್ಷಿತ ಆದಾಯ- 121.04 ಕೋಟಿ ರು., ಹಳೆಯ ಯೋಜನೆಗಳು ಪುನಃ ಪ್ರಸ್ತಾಪ- ಬಿಜೆಪಿ ಸದಸ್ಯರ ವಿರೋಧ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮುಂಬರುವ 2024-25ನೇ ಸಾಲಿನಲ್ಲಿ ಚಿಕ್ಕಮಗಳೂರು ನಗರಸಭೆ 121.04 ಕೋಟಿ ರು. ಆದಾಯ ನಿರೀಕ್ಷಿಸಿದೆ. 117.79 ಕೋಟಿ ವಿವಿಧ ಯೋಜನೆಗಳಿಗೆ ವೆಚ್ಚ ಮಾಡಲು ಉದ್ದೇಶಿಸಿದ್ದು, 3.24 ಕೋಟಿ ರುಪಾಯಿ ಉಳಿತಾಯ ನಿರೀಕ್ಷಿಸಿ ಬಜೆಟ್ ಮಂಡಿಸಿದೆ.
ನಗರಸಭಾ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯಸಭೆಯಲ್ಲಿ ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಬಜೆಟ್ ಮಂಡನೆ ಮಾಡಿದರು. ಅವರು ಬಜೆಟ್ ಓದಲು ಆರಂಭಿಸುತ್ತಿದ್ದಂತೆ ಬಿಜೆಪಿ ಹಾಗೂ ಜೆಡಿಎಸ್ ನಗರಸಭೆ ಸದಸ್ಯರು ಕೆಲವು ವಿಷಯವಾಗಿ ಆಕ್ಷೇಪ ವ್ಯಕ್ತಪಡಿಸಿದರು. ವಿರೋಧ, ಗೊಂದಲದ ನಡುವೆಯೇ ಅಧ್ಯಕ್ಷರು ಬಜೆಟ್ ಮಂಡಿಸಿದರು.ಸಾರ್ವಜನಿಕರ ಆಸ್ತಿಯನ್ನು ಡಿಜಿಟೀಕರಣ ಮಾಡಲಾಗುತ್ತಿದೆ. ಹಾಗಾಗಿ ಯಾವುದೇ ಮಾಲೀಕರು ಕಂದಾಯವನ್ನು ಕದಿಯಲು ಸಾಧ್ಯವಿಲ್ಲ. ಇದರಿಂದಾಗಿ ಕಂದಾಯದ ಲೆಕ್ಕಚಾರ ಪಾರದರ್ಶಕವಾಗಿರುತ್ತದೆ. ಈಗಾಗಲೇ 26 ಸಾವಿರಕ್ಕೂ ಹೆಚ್ಚಿನ ಆಸ್ತಿಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಮಾರ್ಚ್ ಅಂತ್ಯಕ್ಕೆ ಈ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಸಾರ್ವಜನಿಕರ ಮನೆ ಬಾಗಿಲಿಗೆ ಚಲನ್‌ಗಳನ್ನು ಮುದ್ರಿಸಿ ನೀಡಲು ಮೆಸ್ಕಾಂ ರೀತಿ ಪೋರ್ಟೆಬಲ್ ಹ್ಯಾಂಡ್ ಪ್ರಿಂಟರ್ ಯಂತ್ರಗಳನ್ನು ಖರೀಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, 2024ರ ಏಪ್ರಿಲ್‌ನಿಂದ ಕ್ರಮ ವಹಿಸಲಾಗುವುದು. ಇದರಿಂದ ಸಾರ್ವಜನಿಕರು ಮನೆ ಬಾಗಿಲಿನಲ್ಲಿಯೇ ಚಲನ್ ಅನ್ನು ಪಡೆದು ಪೋನ್ ಪೇ, ಗೂಗಲ್ ಪೇ, ಭಾರತ್ ಪೇ ಮತ್ತಿತರ ಆನ್ ಲೈನ್ ಪಾವತಿ ಬಳಸಿ ಸಾರ್ವಜನಿಕರು ವಿವಿಧ ರೀತಿ ಕಂದಾಯ ಪಾವತಿ ಮಾಡಬಹುದು ಎಂದರು.ಕಂದಾಯ ಸಂಗ್ರಹದಲ್ಲಿ ಚಿಕ್ಕಮಗಳೂರು ನಗರಸಭೆ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ. ಹಾಗಾಗಿ ಕೇಂದ್ರ ಸರ್ಕಾರ ನಮಗೆ ವಿಶೇಷವಾಗಿ ಪುರಸ್ಕರಿಸಿ, ನಗರದ ಅಭಿವೃದ್ಧಿಗೆ 6 ಕೋಟಿ ರು. ನೀಡಲು ಮುಂದಾಗಿದೆ ಎಂದರು.
ಕಳೆದ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ಹಾಗೂ ಈಗಾಗಲೇ ಆಗಿರುವ ಕೆಲವು ಪ್ರಗತಿಯನ್ನು ಈ ಬಾರಿ ಬಜೆಟ್‌ನಲ್ಲಿ ಪುನಃ ಪ್ರಸ್ತಾಪ ಮಾಡಿದ್ದಾರೆ. ಇದರಿಂದ ಬಿಜೆಪಿ ಹಾಗೂ ಜೆಡಿಎಸ್ ನಗರಸಭೆ ಸದಸ್ಯರು ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ನಿಮ್ಮ ಕೊಡುಗೆ ಏನು ?
ಕಳೆದ 2023-24ನೇ ಸಾಲಿನಲ್ಲಿ ಮಂಡಿಸಿರುವ ಬಜೆಟ್‌ನಲ್ಲಿ ಘೋಷಣೆಯಾದ ಕೆಲಸಗಳನ್ನು ಮತ್ತೆ 2024-25ನೇ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿದ್ದೀರಾ, ನಿಮ್ಮ ಅವಧಿಯಲ್ಲಿ ನಗರದಲ್ಲಿ ಆಗಿರುವ ಒಂದಾದರೂ ಕೆಲಸ ತೋರಿಸಿ ಎಂದು ಸದಸ್ಯ ಟಿ. ರಾಜಶೇಖರ್ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷ, ನೀವು ಬಜೆಟ್ ಪ್ರತಿ ಸರಿಯಾಗಿ ಓದಿಲ್ಲ, ಮುಂದಿನ ವಿಷಯಕ್ಕೆ ಹೋಗೋಣ ಎಂದು ಅಧ್ಯಕ್ಷರು ಹೇಳುತ್ತಿದ್ದಂತೆ, ನಮ್ಮ ಪ್ರಶ್ನೆಗೆ ಉತ್ತರ ಕೊಡದೆ ಮುಂದಿನ ವಿಷಯಕ್ಕೆ ಹೇಗೆ ಹೋಗ್ತೀರಾ ಹೋಗಿ ನೋಡೋಣ ಎಂದು ರಾಜಶೇಖರ್ ಏರುದನಿಯಲ್ಲಿ ಕೇಳಿದಾಗ ಏನು ನಮಗೆ ಧಮಕಿ ಹಾಕ್ತಿರ ಎಂದು ಅಧ್ಯಕ್ಷರು ಹೇಳಿದರು.ನಿಮ್ಮ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಪಕ್ಷಕ್ಕೆ ಮೋಸ ಮಾಡಿದ್ದೀರಾ ಎಂದು ಸದಸ್ಯ ಮಧುಕುಮಾರ್ ರಾಜ್ ಅರಸ್ ಹೇಳುತ್ತಿದ್ದಂತೆ ಇತ್ತೀಚೆಗೆ ನಗರದ 60 ಅಡಿ ರಸ್ತೆಯಲ್ಲಿ ನಗರಸಭೆ ಅಧ್ಯಕ್ಷರೊಂದಿಗೆ ಅನುಚಿತವಾಗಿ ವರ್ತಿಸಿ ದ್ದೀರಾ, ನಗರದ ಪ್ರಥಮ ಪ್ರಜೆಯನ್ನು ಆ ರೀತಿಯಲ್ಲಿ ನಡೆಸಿಕೊಂಡಿದ್ದೀರಾ, ಕೈ ಕೈ ಮಿಲಾಯಿಸಲು ಹೋಗಿದ್ದೀರಾ ಎಂದು ಕಾಂಗ್ರೆಸ್‌ನ ನಗರಸಭೆ ಸದಸ್ಯ ಲಕ್ಷ್ಮಣ್ ಹೇಳಿದರು.
ಇದು, ದೂರ ದೃಷ್ಟಿ ಇಲ್ಲದ, 2-3 ತಿಂಗಳ ಬಜೆಟ್. ನೀವು ಅಧಿಕಾರ ನಡೆಸಲು ವಿಫಲರಾಗಿದ್ದೀರಾ, ನಗರದ ಹಿತದೃಷ್ಟಿ ಯಿಂದ ಸರ್ಕಾರದಿಂದ ವಿಶೇಷ ಅನುದಾನ ತರುವಲ್ಲಿ ವಿಫಲರಾಗಿದ್ದೀರಾ. ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಿಎಂ ಬಳಿ ಶಾಸಕರ ನೇತೃತ್ವದಲ್ಲಿ ನಿಯೋಗ ತೆರಳಬೇಕಾಗಿತ್ತು ಎಂದು ಟಿ. ರಾಜಶೇಖರ್ ಹೇಳಿದರು.ಗೊಂದಲದ ನಡುವೆ ಬಜೆಟ್‌ಗೆ ಒಪ್ಪಿಗೆ ಸೂಚಿಸಲಾಯಿತು. ಸಭೆಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಎಚ್.ಡಿ. ತಮ್ಮಯ್ಯ, ಪೌರಾಯುಕ್ತ ಬಿ.ಸಿ. ಬಸವರಾಜ್ ಉಪಸ್ಥಿತರಿದ್ದರು.26 ಕೆಸಿಕೆಎಂ 1
ಚಿಕ್ಕಮಗಳೂರು ನಗರಸಭೆಯಲ್ಲಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರು 2024-25ನೇ ಸಾಲಿನ ಬಜೆಟ್ ಮಂಡಿಸಿದರು. ಪೌರಾಯುಕ್ತ ಬಿ.ಸಿ. ಬಸವರಾಜ್ ಇದ್ದಾರೆ.