ಸಾರಾಂಶ
ನಕ್ಸಲ್ ನಾಯಕಿ ಶ್ರೀಮತಿಯನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಎನ್.ಆರ್.ಪುರ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಮಾಡಿದೆ.
ಕನ್ನಡಪ್ರಭವಾರ್ತೆ ಚಿಕ್ಕಮಗಳೂರು
ನಕ್ಸಲ್ ನಾಯಕಿ ಶ್ರೀಮತಿಯನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಎನ್.ಆರ್.ಪುರ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಮಾಡಿದೆ.ಶೃಂಗೇರಿಯ ಪೊಲೀಸರು ಎನ್.ಆರ್.ಪುರ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ದಾಸರಿ ಕ್ರಾಂತಿ ಕಿರಣ್ ಎದುರು ಆರೋಪಿಯನ್ನು ಹಾಜರುಪಡಿಸಿದ್ದರು.
ಶೃಂಗೇರಿ ತಾಲೂಕಿನ ಬೆಳಗೋಡು ಕೂಡಿಗೆ ಗ್ರಾಮದ ಶ್ರೀಮತಿ ಸಂಬಂಧಿಕರ ಮನೆಗೆ ಹೋಗುವುದಾಗಿ 2008ರಲ್ಲೇ ಮನೆಯಿಂದ ಹೊರಟು ಹೋಗಿದ್ದರು. ಆ ನಂತರದಲ್ಲಿ ಮನೆ ಸಂಪರ್ಕ ಕಳೆದುಕೊಂಡಿದ್ದರು. ಕಳೆದ ಮೂರು ವರ್ಷಗಳ ಹಿಂದೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಅಗಳಿ ಗ್ರಾಮದ ಮಂಚಕಟ್ಟಿ ಅರಣ್ಯದಲ್ಲಿ ಪೊಲೀಸ್ ಹಾಗೂ ನಕ್ಸಲೀಯರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಶ್ರೀಮತಿ ಮೃತಪಟ್ಟರೆಂದು ಸುದ್ದಿ ಹರಡಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಮೃತಪಟ್ಟಿದ್ದು ಶ್ರಮತಿಯಲ್ಲ ಎಂದು ಜಿಲ್ಲಾ ಪೊಲೀಸ್ ಇಲಾಖೆ ದೃಢಪಡಿಸಿತ್ತು.ಕೇರಳ ಪೊಲೀಸರಿಂದ ಬಂಧಿತರಾಗಿರುವ ಶ್ರೀಮತಿಯನ್ನು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಶೃಂಗೇರಿ ತಾಲೂಕಿನಲ್ಲಿ 2008ರ ನಂತರದ ಅವಧಿಯಲ್ಲಿ ನಕ್ಸಲರು ನಡೆಸಿದ ವಿವಿಧ ಕೃತ್ಯಗಳಿಗೆ ಸಂಬಂಧಿಸಿದಂತೆ ಶ್ರೀಮತಿ ವಿರುದ್ದ ಸುಮಾರು 9 ಪ್ರಕರಣಗಳು ದಾಖಲಾಗಿದ್ದವು. ಕರಪತ್ರ ಹಂಚಿಕೆ, ಬ್ಯಾನರ್ ಕಟ್ಟಿದ್ದು, ಸರ್ಕಾರಿ ಆಸ್ತಿ ನಷ್ಟ, ವಿದ್ವಂಸಕ ಕೃತ್ಯದ ಸಂಚು, ಆಯುಧಗಳನ್ನ ಇಟ್ಟುಕೊಂಡಿದ್ದು, ಟೆಂಟ್ ಹಾಕಿದ್ದು, ಗನ್ ತೋರಿಸಿ ಹೆಸರಿಸಿ ಸುಲಿಗೆ, ಪೊಲೀಸರಿಗೆ ಬೆಂಬಲಿಸದಂತೆ ಸಾರ್ವಜನಿಕರಿಗೆ ಬೆದರಿಸಿರುವ ಹೀಗೆ ವಿವಿಧ ಪ್ರಕರಣಗಳು ದಾಖಲಾಗಿವೆ.
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಬೇಕಾಗಿರುವುದರಿಂದ ತಮ್ಮ ವಶಕ್ಕೆ ಆರೋಪಿಯನ್ನು ನೀಡಬೇಕೆಂದು ಪೊಲೀಸರು ಕೋರಿಕೊಂಡಿದ್ದರು. ಹಾಗಾಗಿ ನ್ಯಾಯಾಧೀಶರು 14 ದಿನಗಳ ಕಾಲ ಶ್ರೀಮತಿಯನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ.